ಅರಸೀಕೆರೆ: ನಗರಸಭೆಯಲ್ಲಿ ಭಷ್ಟಾಚಾರ ಹಾಗೂ ದಬ್ಬಾಳಿಕೆ ಖಂಡಿಸಿ ವಿವಿಧ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ನಗರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ವರ್ತಕರು ಸ್ವಯಂಪ್ರೇರಿತರಾಗಿ ಅಂಗಡಿ ಬಾಗಿಲು ಮುಚ್ಚಿ ಹೋರಾಟಕ್ಕೆ ಸಹಕಾರ ನೀಡಿದರು. ಹೋಟೆಲ್, ದಿನಸಿ ಅಂಗಡಿಗಳು ಸೇರಿದಂತೆ ಎಲ್ಲ ಬಗೆಯ ವ್ಯಾಪಾರ-ವಹಿವಾಟು ಭಾಗಶಃ ಸ್ತಬ್ಧವಾಗಿತ್ತು. ಹಾಲು, ಹಣ್ಣು, ಔಷಧ, ತರಕಾರಿ ವ್ಯಾಪಾರ ಸಹಜವಾಗಿತ್ತು. ವಾಹನ ಸಂಚಾರ ವಿರಳವಾಗಿದ್ದರೆ, ಶಾಲಾ,ಕಾಲೇಜು, ಸರ್ಕಾರಿ ಕಚೇರಿ ಎಂದಿನಂತೆ ಕಾರ್ಯ ನಿರ್ವಹಿಸಿದವು. ಎಪಿಎಂಸಿ ಆವರಣದ ಮುಂಭಾಗದಿಂದ ಹೊರಟ ಪ್ರತಿಭಟನಾನಿರತರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾದಯಾತ್ರೆ ನಡೆಸಿದರು.
ಹಾಸನ-ಮೈಸೂರು ರಸ್ತೆಗೆ ಹೊಂದಿಕೊಂಡಂತಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಕೆಲಕಾಲ ಧರಣಿ ನಡೆಸಿದರು. ಇದರಿಂದಾಗಿ ವಾಹನ ಸಂಚಾರದಲ್ಲಿ ವ್ಯತ್ಯಯವಾಗಿ ಪ್ರಯಾಣಿಕರು ಪರದಾಡುವಂತಾಗಿತ್ತು.
ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ ಮಾತನಾಡಿ, ನಗರಸಭೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಪ್ರಶ್ನಿಸುವುದೇ ತಪ್ಪು ಎನ್ನುವಂತಾಗಿದೆ. ಸಾಮಾನ್ಯ ಸಭೆಯಲ್ಲಿ ಮಂಡಿಸದೆ ಖಾತೆ, ಇ-ಸ್ವತ್ತು ಬಿಡುಗಡೆ ಮಾಡುವ ಮೂಲಕ ಹಣ ದೋಚುವ ಕಾರ್ಯದಲ್ಲಿ ಅಧ್ಯಕ್ಷ ಸಮೀವುಲ್ಲಾ ನಿರತನಾಗಿದ್ದಾನೆ. ಶಾಸಕ ಕೆ.ಎಂ.ಶಿವಲಿಂಗೇಗೌಡರ ಕುಮ್ಮಕ್ಕಿಲ್ಲದೇ ಹಗಲು ದರೋಡೆ ನಡೆಯಲು ಸಾಧ್ಯವಿಲ್ಲ. ನಗರಸಭೆಯಲ್ಲಿ ನಡೆಯುತ್ತಿರುವ ಕರ್ಮಕಾಂಡ, ಹುಳುಕುಗಳನ್ನು ಎತ್ತಿ ತೋರಿಸಲು ಹೋದವರಿಗೆ ಕೊಲೆ ಬೆದರಿಕೆ ಹಾಕಲಾಗುತ್ತಿದೆ. ಇಂತಹ ಗೊಡ್ಡು ಬೆದರಿಕೆಗಳಿಗೆ ಹೆದರುವ, ಜಗ್ಗುವ, ಕುಗ್ಗುವ ಜಾಯಮಾನ ನನ್ನದಲ್ಲ. ಹಿಂದು ರಾಜಪರಂಪರೆ ರಕ್ತದ ಕಣಕಣದಲ್ಲೂ ಹರಿಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಭಾರತೀಯ ಸನಾತನ ಪರಂಪರೆಯ ಪ್ರತೀಕವಾಗಿರುವ ಗೋಮಾತೆಯ ರಕ್ತ ಹರಿಸುತ್ತಿರುವುದು ಖಂಡನೀಯ. ಜಾತಿ, ಉಪಜಾತಿ, ಪಂಗಡ, ಒಳಪಂಗಡ ಬದಿಗಿಟ್ಟು ಒಟ್ಟಾಗಿ ಹೋರಾಟ ನಡೆಸದಿದ್ದರೆ ಮುಂದಿನ ಪೀಳಿಗೆಗೆ ಉಳಿಗಾಲವಿಲ್ಲ ಎನ್ನುವುದನ್ನು ಮನಗಾಣಬೇಕು. ಒಡೆದು ಆಳುವ ಪ್ರವೃತ್ತಿಗೆ ಇತಿಶ್ರೀ ಹಾಡುವ ಸಮಯ ಬಂದಿದ್ದು, ಜಾಗೃತರಾಗಿ ಹೋರಾಟ ನಡೆಸೋಣ ಎಂದು ಉತ್ಸಾಹ ತುಂಬಿದರು.
ಮುಖಂಡ ಹುಲ್ಲೇಕೆರೆ ಕುಮಾರ್ ಮಾತನಾಡಿ, ಮತಕ್ಕಾಗಿ ಒಂದು ಕೋಮಿನ ಜನರನ್ನು ಓಲೈಕೆ ಮಾಡುತ್ತಿರುವ ವ್ಯಕ್ತಿಗೆ ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಕಾಡಲಿದೆ. ಜಾತಿ ವಿಭಜಿಸುವ ರಾಜಕಾರಣದಿಂದ ದೊರೆಯುವ ಯಶಸ್ಸು ತಾತ್ಕಾಲಿಕ ಎನ್ನುವುದನ್ನು ಅರ್ಥ ಮಾಡಿಕೊಳ್ಳಲಿ. ಪ್ರತಿಭಟನಾ ನಿರತರ ಮೇಲೆ ದಬ್ಬಾಳಿಕೆ, ಕೊಲೆ ಬೆದರಿಕೆ ಹಾಕುವ ಸಂಸ್ಕೃತಿಗೆ ಸರ್ಕಾರ, ಪೊಲೀಸರು ತಕ್ಷಣವೇ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ನಗರಸಭೆ ನಿಕಟಪೂರ್ವ ಅಧ್ಯಕ್ಷ ಸಿ.ಗಿರೀಶ್, ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಶ್ರೀಕಾಂತ್ ನವಲಗುಂದ್, ಭೋವಿ ಸಮಜದ ಮುಖಂಡ ಉಮೇಶ್, ಗ್ರಾಪಂ ಸದಸ್ಯ ಬ್ಯಾಡರಹಳ್ಳಿ ಜಯರಾಮ್ ಸೇರಿದಂತೆ ಹಲವರು ಮಾತನಾಡಿದರು. ಅಖಿಲ ಭಾರತ ವೀರಶೈವ ಮಹಸಭಾ ಜಿಲ್ಲಾ ಉಪಾಧ್ಯಕ್ಷ ಎ.ಬಿ.ಗುರುಸಿದ್ದೇಶ್, ನಗರಸಭೆ ಸದಸ್ಯರಾದ ಭಾಸ್ಕರ್, ಮೇಲುಗಿರಿಗೌಡ, ಮುಖಂಡರಾದ ರಮೇಶ್ ನಾಯ್ಡು, ಹರ್ಷವರ್ಧನ್‌ರಾಜ್, ಶಿವನ್‌ರಾಜ್, ಡಾಬಾ ರಘು, ಪವನ್, ಪ್ರಕಾಶ್, ಜಯದೇವ್, ಸಿದ್ದೇಶ್, ದಿವ್ಯಾನಂದ್, ಲೋಕೇಶ್ ಮತ್ತಿತರ ಮುಖಂಡರು ಸಾಥ್ ನೀಡಿದರು.