ಹಾಸನ: ಅರಸೀಕೆರೆ ನಗರಸಭೆ ಅಧ್ಯಕ್ಷ ಹಾಗು ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸುಜಾತ ರಮೇಶ್ ವಿರುದ್ಧ ಮತ ಚಲಾಯಿಸಿದ 14 ಸದಸ್ಯರ ಸದಸ್ಯತ್ವ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಜಿಲ್ಲಾಧಿಕಾರಿ ನ್ಯಾಯಾಲಯ ಅ. 25ಕ್ಕೆ ಮುಂದೂಡಿದೆ.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್ ಹಾಗು ಸದಸ್ಯೆ ಸುಜಾತ ರಮೇಶ್ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಶುಕ್ರವಾರ ಸಂಜೆ 4.30ಕ್ಕೆ ವಿಚಾರಣೆ ನಡೆಸಲಾಯಿತು.
ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಜಿಲ್ಲಾ ದಂಡಾಧಿಕಾರಿ ಸಿ.ಸತ್ಯಭಾಮಾ ಅವರು 14 ಸದಸ್ಯರಿಗೆ ನೋಟೀಸ್ ಜಾರಿ ಮಾಡಿದ್ದರು. ಆದರೆ ವಿಚಾರಣೆಗೆ ನಗರಸಭೆ ಅಧ್ಯಕ್ಷ ಸಮೀವುಲ್ಲಾ, ಉಪಾಧ್ಯಕ್ಷ ಮನೋಹರ ಮೇಸತ್ರಿ, ಸದಸ್ಯರಾದ ಜಾಕೀರ್ ಹುಸೇನ್ ಹಾಗು ಜಿ.ಟಿ.ಗಣೇಶ್,ಕೆ.ಎಂ.ಈಶ್ವರಪ್ಪ ಮಾತ್ರ ಹಾಜರಾದರು. ಎರಡೂ ಕಡೆಯವರ ವಾದ-ಪ್ರತಿವಾದ ಆಲಿಸಿದ ಜಿಲ್ಲಾ ದಂಡಾಧಿಕಾರಿ ವಿಚಾರಣೆಯನ್ನು ಮುಂದೂಡಿದರು.
ಸದಸ್ಯರಾದ ಅನ್ನಪೂರ್ಣ, ಪ್ರೇಮಾ, ದಯಾನಂದ, ಕಲೈ ಅರಸಿ, ಆರ್.ಕಾಂತೇಶ್, ಇ.ಎಂ.ರಾಜಶೇಖರ್, ಶಮಾಭಾನು, ರೇಷಾ, ಫಜಲೂನ್ ಜಮೀಲ್ ಗೈರು ಹಾಜರಾದರು.
ರಾಜೀನಾಮೆ ಅಂಗೀಕಾರ:
ಅರಸೀಕೆರೆ ನಗರಸಭೆ 10ನೇ ವಾರ್ಡ್‌ನ ಜೆಡಿಎಸ್ ಸದಸ್ಯ ಕೆ.ಎಂ.ಈಶ್ವರಪ್ಪ ಅವರ ರಾಜೀನಾಮೆಯನ್ನು ಅಂಗೀಕರಿಸಲಾಯಿತು. ನಗರಸಭೆ ಅಧ್ಯಕ್ಷ ಹಾಗು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದ ಆ. 22ರಂದು ಜಿಲ್ಲಾಧಿಕಾರಿ ಅವರನ್ನು ಭೇಟಿಯಾಗಿದ್ದ ಈಶ್ವರಪ್ಪ ಅವರು ತಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.
ಕರ್ನಾಟಕ ಮುನ್ಸಿಪಾಲಿಟಿ ಕಾಯ್ದೆ 1964ರ ಅಧಿನಿಯಮ 40ರ ಪ್ರಕಾರ ಸದಸ್ಯರು ಸಲ್ಲಿಸಿರುವ ರಾಜೀನಾಮೆಯನ್ನು ಸ್ವೀಕರಿಸಿದ ದಿನಾಂಕದಿಂದ ಹತ್ತು ದಿನದ ಒಳಗಾಗಿ ಹಿಂದಕ್ಕೆ ಪಡೆಯಲು ಕಾಲಾವಕಾಶವಿತ್ತು. ಸೆ.2 ರವರೆಗೆ ಕಾಲಾವಕಾಶವಿದ್ದರೂ ಈಶ್ವರಪ್ಪ ಅವರು ರಾಜೀನಾಮೆ ಹಿಂಪಡೆಯದ ಹಿನ್ನಲೆಯಲ್ಲಿ ಪುರಸ್ಕರಿಸಿದ್ದು, 10ನೇ ವಾರ್ಡ್‌ನ ಸ್ಥಾನವು ಖಾಲಿರುವುದಾಗಿ ಘೋಷಣೆಮಾಡಿದರು.