ಅರಸೀಕೆರೆ ನಗರದ ದೊಡ್ಡ ಗಣಪತಿಯನ್ನು ಪ್ರತಿಷ್ಠಾಪಿಸಲು ಕರೆತರುತ್ತಿರುವ ದೃಶ್ಯ. ಶಾಸಕ ಕೆ.ಎ.ಶಿವಲಿಂಗೇಗೌಡ, ನಗರಸಭೆ ಅಧ್ಯಕ್ಷ ಸಿ.ಗಿರೀಶ್,ಉಪಾಧ್ಯಕ್ಷ ಕಾಂತೇಶ್,ಭಾಸ್ಕರ್, ರಾಜಶೇಖರ್,ಮುಖಂಡರಾದ ಧರ್ಮಶೇಖರ್, ಶಿವನ್‌ರಾಜ್, ನಾಗಭೂಷಣ್ ಸೇರಿ ಗಣಪತಿ ಭಕ್ತ ಮಂಡಳಿ ಸದಸ್ಯರು ಇದ್ದರು. 
ಜಿಲ್ಲೆ

ಅರಸೀಕೆರೆ ದೊಡ್ಡ ಗಣಪತಿ ಪ್ರತಿಷ್ಠಾಪನೆ

ಅರಸೀಕೆರೆ: ಐತಿಹಾಸಿಕ ಹಿನ್ನೆಲೆ ಹೊಂದಿರುವ ನಗರದ ದೊಡ್ಡ ಗಣಪತಿಯನ್ನು ಗ್ರಂಥಾಲಯ ಕಟ್ಟಡಕ್ಕೆ ಹೊಂದಿಕೊಂಡಂತಿರುವ ಪೆಂಡಾಲಿನಲ್ಲಿ ಬುಧವಾರ ಮಧ್ಯಾಹ್ನ ಭಕ್ತರ ಜಯಘೋಷದೊಂದಿಗೆ ಪ್ರತಿಷ್ಠಾಪಿಸಲಾಯಿತು.

ಗರುಡನಗಿರಿ ರಸ್ತೆಯಲ್ಲಿರುವ ಕಲಾವಿದ ಹಾರನಹಳ್ಳಿ ಮಹದೇವ್ ಅವರ ನಿವಾಸದಿಂದ ಟ್ರ್ಯಾಕ್ಟರ್ ಮೂಲಕ ಮಂಗಳವಾದ್ಯಗಳೊಂದಿಗೆ ಪೇಟೆಬೀದಿ ಮೂಲಕ ಪೆಂಡಾಲಿಗೆ ತರಲಾಯಿತು. ಭಕ್ತ ಸಮೂಹದ ಜಯಘೋಷದ ನಡುವೆ ಭಕ್ತ ಮಂಡಳಿಯ ಸದಸ್ಯರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಪ್ರತಿಷ್ಠಾಪನಾ ಕಾರ್ಯ ನೆರವೇರಿತು.

ಗಣೇಶ ಮೂರ್ತಿಯನ್ನು ಕರೆತರುವ ಮಾರ್ಗ ಮಧ್ಯೆ ರಸ್ತೆಗಳನ್ನು ರಂಗೋಲಿ ಹಾಕಿ ತಳಿರು, ತೋರಣಗಳಿಂದ ಸಿಂಗರಿಸಲಾಗಿತ್ತು. ಮಹಿಳೆಯರು ಆರತಿ ಮಾಡಿ ವಿನಾಯಕನನ್ನು ಸಂಭ್ರಮದಿಂದ ಬರಮಾಡಿಕೊಂಡರು. ಧಾರ್ಮಿಕ ವಿಧಿ ವಿಧಾನಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಗಣೇಶೋತ್ಸವ 59 ದಿನ ಜರುಗಲಿದೆ. ಕಂತೇನಹಳ್ಳಿ ಕೆರೆಯಲ್ಲಿ ವಿಸರ್ಜನಾ ಮಹೋತ್ಸವ ಜರುಗಲಿದೆ.