ಜಿಲ್ಲೆ

ಅರಸೀಕಟ್ಟೆಯಮ್ಮ ದೇವಸ್ಥಾನದ ಸುತ್ತ ಕಾನೂನು ಬಾಹಿರ ಚಟುವಟಿಕೆ: ಪ್ರತಿಭಟನೆ

ಹಾಸನ: ಅರಕಲಗೂಡು ತಾಲೂಕಿನ ಅರಸೀಕಟ್ಟೆಯಮ್ಮ ದೇವಸ್ಥಾನದ ಸುತ್ತ ಮುತ್ತ ಕಾನೂನು ಬಾಹಿರವಾಗಿ ನಡೆಯುತ್ತಿರುವ ಪ್ರಾಣಿ ಬಲಿ ಹಾಗೂ ಅಕ್ರಮ ಚಟುವಟಿಕೆೆ ನಿಷೇಧ ಮಾಡುವಂತೆ ಆಗ್ರಹಿಸಿ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ ಜಿಪಂ ಎದುರು ಧರಣಿ ಪ್ರತಿಭಟನೆ ನಡೆಸಲಾಯಿತು.
ಕಾನೂನು ಬಾಹಿರ ಚಟುವಟಿಕೆಗಳಿಂದ ದೇವಾಲಯ ವ್ಯಾಪ್ತಿಯಲ್ಲಿ ಶುಚಿತ್ವ ಹಾಳಾಗುತ್ತಿದೆ. ಅನೇಕ ರೀತಿಯ ಸಮಸ್ಯೆ ಎದುರಾಗಿವೆ. ಮಾತ್ರವಲ್ಲ ಎಲ್ಲೆಂದರಲ್ಲಿ ಬಲಿ ಕೊಟ್ಟ ಪ್ರಾಣಿ, ಪಕ್ಷಿಗಳ ತ್ಯಾಜ್ಯ ಬಿಸಾಡುತ್ತಿರುವುದರಿಂದ ರೋಗ ರುಜಿನ ಭೀತಿ ಎದುರಾಗಿದೆ. ಆದರೂ ಸ್ಥಳೀಯ ಆಡಳಿತ ಕಣ್ಮುಚ್ಚಿ ಕುಳಿತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸರ್ಕಾರಕ್ಕೆ ದೊಡ್ಡ ಪ್ರಮಾಣದಲ್ಲಿ ತೆರಿಗೆ ವಂಚನೆ ಆಗುತ್ತಿದ್ದರೂ, ಸ್ಥಳೀಯ ಆಡಳಿತ ಯಾವುದೇ ಕ್ರಮ ಕೈಗೊಳ್ಳದೆ ದಂಧೆಕೋರರ ಜೊತೆ ಶಾಮೀಲಾಗಿದೆ ಎಂದು ದೂರಿದರು.
ಈ ವೇಳೆ ಮಾತನಾಡಿದ ರಾಮಸ್ವಾಮಿ, ಅರಸೀಕಟ್ಟೆಯಮ್ಮ ದೇವಸ್ಥಾನ ವ್ಯಾಪ್ತಿಯಲ್ಲಿ ಸುಮಾರು 50 ಕ್ಕೂ ಹೆಚ್ಚು ಅಂಗಡಿ, ಊಟ ಹಾಲ್ ಅನುಮತಿ ಪಡೆಯದೆಯೇ ನಡೆಯುತ್ತಿವೆ. ಅಂಗಡಿ, ಊಟದ ಹಾಲ್ ಸ್ವಚ್ಛವಾಗಿಲ್ಲ. ಇಂಥವರಿಗೆ ಎಚ್ಚರಿಕೆ ನೀಡಿ ಕಾನೂನು ರೀತಿ ನಡೆಸಲು ಅನುಮತಿ ಕೊಡಿ ಎಂದು ಮನವಿ ಮಾಡಿದರೂ ಯಾರೂ ಸ್ಪಂದಿಸುತ್ತಿಲ್ಲ. ಲೈಸೆನ್ಸ್ ಇಲ್ಲದೆ ವ್ಯಾಪಾರ, ವಹಿವಾಟು ನಡೆಸುತ್ತಿದ್ದರೂ, ಆಡಳಿತ ವರ್ಗ ಎಚ್ಚೆತ್ತುಕೊಂಡಿಲ್ಲ.ಅವರೊಂದಿಗೇ ಶಾಮೀಲಾಗಿದೆ ಎಂದು ಆರೋಪಿಸಿದರು.
ಅಲ್ಲಿನ ವಹಿವಾಟಿನ ಬಗ್ಗೆ ಟೆಂಡರ್ ಆಹ್ವಾನಿಸಿ ಬಹಿರಂಗ ಹರಾಜು ಹಾಕಿದರೆ ವರ್ಷಕ್ಕೆ 1 ಕೋಟಿ ಸರ್ಕಾರಕ್ಕೆ ಬರಲಿದೆ. ಪಂಚಾಯ್ತಿ ಅವರು ದೇವಾಲಯ ಸಮಿತಿಗೆ ವಹಿಸಿಕೊಟ್ಟರೆ ನಾವೇ 50 ವರ್ಷ ಕೊಡುತ್ತೇವೆ ಎಂದರು.
ಎಲ್ಲಾ ವಹಿವಾಟು, ವಾಣಿಜ್ಯ ಚಟುವಟಿಕೆಗಳನ್ನು ಕಾನೂನು ಬದ್ಧವಾಗಿ ನಡೆಸಿ ಎಂಬುದು ನಮ್ಮ ಆಗ್ರಹವಾಗಿದೆ. ಜಿಲ್ಲಾಡಳಿತದ ಮಧ್ಯೆ ಪ್ರವೇಶ ಮಾಡಿ ಸೂಕ್ತ ಕ್ರಮ ಕೈಗೊಳ್ಳದೇ ಇದ್ದರೆ ದೇವರನ್ನೇ ನುಂಗಿ ಬಿಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ಪ್ರಾಧಿಕಾರದಿಂದ ಅನುಮತಿ ಪಡೆದಿಲ್ಲ, ಸ್ಥಳೀಯ ಪಂಚಾಯಿತಿಯಿಂದ ನೊಟೀಸ್ ಕೊಟ್ಟರೂ ಉತ್ತರ ಕೊಟ್ಟಿಲ್ಲ.
ಆದರೂ ತಪ್ಪು ಮಾಡುತ್ತಿರುವವರ, ಪರಿಸರಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ದುರದೃಷ್ಟಕರ ಎಂದು ವಿಷಾದಿಸಿದರು.
ಹಾಲಿ ಇರುವ ದೇವಾಲಯ ಸಮಿತಿ ವತಿಯಿಂದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ‌್ಯನಿರ್ವಹಣಾಧಿಕಾರಿಗಳಿಗೂ ದೂರು ನೀಡಲಾಗಿದೆ. ಆದರೂ ಸುಮ್ಮನಿರುವುದರಿಂದ ಸ್ಥಳೀಯ ಸಂಸ್ಥೆಗಳ ಆದಾಯದಲ್ಲಿ ತುಂಬ ನಷ್ಟವಾಗಿದೆ. ದೇವಾಲಯ ಸುತ್ತ ಮುತ್ತ ನಡೆಯುತ್ತಿರುವ ಎಲ್ಲ ವಾಣಿಜ್ಯ ವಹಿವಾಟು ಕಾನೂನು ಬದ್ಧವಾಗಿರಬೇಕು. ಸ್ವಚ್ಛತೆ ಕಾಪಾಡುವ ಸಂಬಂಧ ಅವಶ್ಯಕ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ ಕಾನೂನು ಬಾಹಿರ ಚಟುವಟಿಕೆ ನಡೆಸಿಕೊಂಡು ಹೋಗುವುದನ್ನು ನೋಡಿಕೊಂಡು ಸಂಬಂಧಿಸಿದ ಅಧಿಕಾರಿಗಳು, ನೌಕರ ವರ್ಗದವರು ಮೌನವಾಗಿರುವುದನ್ನು ನೋಡಿದರೆ ಶಾಮೀಲಾಗಿರಬಹುದು ಎಂದು ಆರೋಪಿಸಿದರು.
ಅರಸೀಕಟ್ಟೆ ಅಮ್ಮ ಬಲಿ ದೇವರಾಗಿರುವುದರಿಂದ ನಿತ್ಯ ನೂರಾರು ಭಕ್ತರು ಬಂದು ಹರಕೆ ತೀರಿಸುತ್ತಾರೆ. ವಾಣಿಜ್ಯ ಮಳಿಗೆ ನಡೆಸುತ್ತಿರುವವರು ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿಯೂ ಕಾಡುತ್ತಿದೆ. ಆ ಮಳಿಗೆಗಳ ತೆರವಿಗೆ ಐದು ದಿನಗಳ ಗಡುವು ನೀಡಿದ್ದು, ಅಧಿಕಾರಿಗಳು ಕ್ರಮ ವಹಿಸದಿದ್ದರೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಣಾಧಿಕಾರಿ ಕಚೇರಿಯೊಳಗೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಂತರ ಜಿಲ್ಲಾ ಪಂಚಾಯಿತಿ ಸಿಇಒ. ಬಿ.ಆರ್.ಪೂರ್ಣಿಮಾ ಅವರು ಮಾತನಾಡಿ, ಬೇರೆ ಕೆಲಸದೊತ್ತಡ ಕಾರಣದಿಂದ ಸಮಸ್ಯೆಯನ್ನು ಗಮನಿಸಲು ಸಾಧ್ಯವಾಗಿಲ್ಲ. ಮುಂದಿನ ಐದು ದಿನಗಳ ಒಳಗೆ ಸ್ಥಳಕ್ಕೆ ಭೇಟಿ ನೀಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಅರಸೀಕಟ್ಟೆ ಅಮ್ಮ ದೇವಾಲಯ ಸಮಿತಿಯ ಕೃಷ್ಙೇಗೌಡ, ಕುಮಾರ್, ಮಾದೇಶ, ಪಾಂಡುರಂಗ, ವಿರೇಶ್, ಜನಾರ್ಧನ ಗುಪ್ತಾ ಸೇರಿಂದತೆ ಇತರರು ಇದ್ದರು.