ಹುಣಸೂರು ತಾಲೂಕು ಕಲ್ಲಹಳ್ಳಿಯಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಡಿ.ಹರೀಶ್‌ಗೌಡ ಮತಯಾಚನೆ ನಡೆಸಿದರು. ರಂಜಿತಾ ಚಿಕ್ಕಮಾದು, ಸಿ.ಟಿ.ರಾಜಣ್ಣ ಇತರರು ಇದ್ದರು. 
ಜಿಲ್ಲೆ

ಅರಸರ ನೆಲದಲ್ಲಿ ರಾಜಕೀಯ ಜೀವನ ಆರಂಭ

ಹುಣಸೂರು: ಅರಸರ ಕರ್ಮಭೂಮಿಯಲ್ಲಿ ರಾಜಕೀಯ ಜೀವನ ಆರಂಭಗೊಂಡಿರುವುದು ನನ್ನ ಪೂರ್ವಜನ್ಮದ ಪುಣ್ಯ ಎಂದು ಜೆಡಿಎಸ್ ಅಭ್ಯರ್ಥಿ ಜಿ.ಡಿ.ಹರೀಶ್‌ಗೌಡ ಅಭಿಪ್ರಾಯಪಟ್ಟರು.

ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ ಹುಟ್ಟೂರು ಕಲ್ಲಹಳ್ಳಿಯಲ್ಲಿ ಬುಧವಾರ ಮತಯಾಚನೆ ನಡೆಸಿ ಮಾತನಾಡಿ, ದನಿ ಇಲ್ಲದವರಿಗೆ ದನಿಯಾಗಿ ದೇಶಾದ್ಯಂತ ತಮ್ಮ ಆಡಳಿತ ವೈಶಿಷ್ಟ್ಯತೆಗೆ ಪ್ರಸಿದ್ಧಿ ಪಡೆದ ಅರಸರ ನೆಲದಲ್ಲಿ ರಾಜಕೀಯ ಜೀವನ ಆರಂಭಿಸಿದ್ದೇನೆ. ಜನತೆ ಪ್ರೀತಿಯಿಂದ ಆದರಿಸುತ್ತಿದ್ದಾರೆ ಎಂದರು.
ಜಾತಿ, ಮತ, ಧರ್ಮಗಳನ್ನು ನೋಡದೆ ಕೇವಲ ಅಭಿವೃದ್ಧಿಯನ್ನೇ ಮಂತ್ರವನ್ನಾಗಿಸಿಕೊಂಡು ದುಡಿದ ನನ್ನ ತಂದೆಯ ಕಾರ್ಯವೈಖರಿಯಿಂದಾಗಿ ಜನರು ಇಂದಿಗೂ ನಮ್ಮ ಕುಟುಂಬವನ್ನು ಪ್ರೀತಿಸುತ್ತಿದ್ದಾರೆ. ಪಕ್ಷದ ಕಾರ್ಯಕರ್ತರು ಮತದಾರರ ಮನೆಮನೆಗೆ ತೆರಳಿ ಬೆಂಬಲ ಕೋರಬೇಕು. ಗ್ರಾಮಗಳಲ್ಲಿ ಒಡೆದ ಮನಸುಗಳನ್ನು ಒಂದಾಗಿಸಿ ಅಭಿವೃದ್ಧಿಯತ್ತ ಚಿತ್ತ ಹರಿಸುವಂತೆ ಮಾಡುವ ಮಹತ್ತರ ಜವಾಬ್ದಾರಿ ಕಾರ್ಯಕರ್ತರದ್ದಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಟಿ. ರಾಜಣ್ಣ ಮಾತನಾಡಿದರು. ತಾಲೂಕು ಅಧ್ಯಕ್ಷ ದೇವರಾಜ್ ಒಡೆಯರ್, ಜೆಡಿಎಸ್ ಪಕ್ಷದ ಮುಖಂಡರಾದ ರಂಜಿತಾ ಚಿಕ್ಕಮಾದು, ಹರವೆ ಶ್ರೀಧರ್, ಬಸವಣ್ಣ, ಪಟೇಲ್, ಶಿವಶಂಕರ್, ರಮೇಶ್, ವೆಂಕಟೇಶ್, ಕಲ್ಲಳ್ಳಿ ಗ್ರಾಮಸ್ಥರು ಹಾಜರಿದ್ದರು.