ಪಿರಿಯಾಪಟ್ಟಣ: ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ ಇನ್ನೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಪಟ್ಟಣದ ಅರಸನಕೆರೆಯಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗಿದೆ.
ಪಟ್ಟಣದಲ್ಲಿ ನಿತ್ಯ ಉತ್ಪತ್ತಿಯಾಗುವ ತ್ಯಾಜ್ಯ ನೀರು ಪ್ರತ್ಯೇಕವಾಗಿ ಹೊರ ಹೋಗಲು ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ಅರಸನ ಕೆರೆ ಸೇರುತ್ತಿದೆ. ಇದರಿಂದಾಗಿ ಅರಸನಕೆರೆ ಸಂಪೂರ್ಣ ಕಲುಶಿತವಾಗಿದ್ದು, ಕೆರೆಯಲ್ಲಿರುವ ಜಲಚರಗಳು ಮತ್ತು ಕೆರೆ ಬಳಿ ಆಹಾರವನ್ನರಸಿ ಬರುವ ಪಕ್ಷಿ ಸಂಕುಲಗಳಿಗೆ ಕೆರೆ ನೀರು ವಿಷಕಾರಿಯಾಗಿ ಪರಿಣಮಿಸಿದೆ. ಕೆರೆ ಆಸುಪಾಸಿನಲ್ಲಿ ಮೇವು ಹರಸಿ ಬರುವ ಜಾನುವಾರುಗಳು ಬಾಯಾರಿಕೆ ನಿವಾರಿಸಿಕೊಳ್ಳಲು ಕೆರೆಯನ್ನೇ ಆಶ್ರಯಿಸಿದ್ದು, ಕಲುಷಿತ ನೀರು ಸೇವನೆಯಿಂದಾಗಿ ಅವುಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ.
ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ ಆರಂಭಗೊಂಡು ಸುಮಾರು ಐದು ವರ್ಷ ಕಳೆದಿದ್ದರೂ ಈವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದಾಗಿ ಪಟ್ಟಣದಲ್ಲಿ ಪ್ರತಿನಿತ್ಯ ಸಂಗ್ರಹವಾಗುತ್ತಿರುವ ಕಲುಷಿತ ನೀರು ರಸ್ತೆ ಬದಿಯ ಚರಂಡಿ ಮೂಲಕ ಹರಿದು ಹೋಗಿ ಸಂತೆಪೇಟೆಯ ಬಿ.ಎಂ.ರಸ್ತೆ, ನ್ಯಾಯಾಧೀಶರ ವಸತಿಗೃಹ ಮಾರ್ಗವಾಗಿ ಶಿವಪ್ಪ ಬಡಾವಣೆಯಲ್ಲಿ ನಿರ್ಮಿಸಲಾಗಿರುವ ಕಾಲುವೆ ಮೂಲಕ ಕೆರೆ ಸೇರುತ್ತಿದೆ.
ಒಳಚರಂಡಿ ಕಾಮಗಾರಿಗೆ ಚಾಲನೆ ನೀಡಿ ದ್ದ ಶಾಸಕ ಕೆ.ಮಹದೇವ್, ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಉಪಯೋಗಕ್ಕೆ ಲಭ್ಯತೆಯಾಗಲಿದೆ ಎಂದು ತಿಳಿಸಿದ್ದರು. ಆದರೆ ಶಾಸಕರ ಆಶ್ವಾಸನೆ ಇನ್ನೂ ಭರವಸೆಯಾಗಿಯೇ ಉಳಿದಿದೆ. ಪಟ್ಟಣದ ಹರವೆ-ಮಲ್ಲರಾಜಪಟ್ಟಣ, ನ್ಯಾಯಾಲಯ ಸಮೀಪ ಮತ್ತು ಮೆಲ್ಲಹಳ್ಳಿ ಬಳಿ ಕಲುಷಿತ ನೀರು ಸಂಗ್ರಹಕ್ಕಾಗಿ ನಿರ್ಮಿಸಲ್ಪಡುವ ವೆಟ್‌ವೆಲ್‌ಗಳು ನಿರ್ಮಾಣ ಹಂತದಲ್ಲಿದ್ದು ಈವರೆಗೂ ಪೂರ್ಣಗೊಂಡಿಲ್ಲ.
ಪಟ್ಟಣ ವ್ಯಾಪ್ತಿಯಲ್ಲಿ ನಿತ್ಯ ಸಂಗ್ರಹವಾಗುವ ಕಲುಷಿತ ನೀರು ಮಸಣಿಕಮ್ಮ ದೇವಾಲಯ ಬಳಿ, ಬಿ.ಎಂ.ರಸ್ತೆಯಲ್ಲಿರುವ ವಾಸವಿ ಪ್ಯಾಲೇಸ್ ಹಿಂಭಾಗ, ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಕಾಲುವೆ ಮೂಲಕ ಹಾಗೂ ಕನ್ನಂಬಾಡಿಯಮ್ಮ ದೇವಾಲಯ ಬಳಿ ಇರುವ ಪೆಟ್ರೋಲ್ ಬಂಕ್ ಸಮೀಪದ ಅಡಿಕೆ ತೋಟ ಸೇರಿದಂತೆ ನಾಲ್ಕು ಕಡೆ ಅರಸನ ಕೆರೆ ಸೇರುತ್ತಿದೆ. ಕಲುಷಿತ ನೀರಿನೊಂದಿಗೆ ತ್ಯಾಜ್ಯ ಪದಾರ್ಥಗಳೂ ಕೆರೆ ಸೇರುತ್ತಿರುವುದರಿಂದ ಕೆಲವೊಮ್ಮೆ ಸಾರ್ವಜನಿಕರು ರಸ್ತೆ ಬದಿಯಲ್ಲಿ ನಡೆದು ಹೋಗುವಾಗ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಇದೆ. ಕೆರೆಯಲ್ಲಿನ ಮೀನುಗಳನ್ನು ಕೊಂಡುಕೊಳ್ಳಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ. ಕಲುಷಿತ ನೀರಿನಲ್ಲಿರುವ ಮೀನನ್ನು ತಿಂದಲ್ಲಿ ಆರೋಗ್ಯ ಸಮಸ್ಯೆ ಉಂಟಾಗಬಹುದೆಂಬ ಆತಂಕ ಅವರನ್ನು ಕಾಡುತ್ತಿದೆ.
ಕಿರನಲ್ಲಿ ಗ್ರಾಮದ ಬಳಿ ಕಲುಷಿತ ನೀರು ಶುದ್ಧೀಕರಣದ ಘಟಕದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ವೆಟ್‌ವೆಲ್‌ಗಳಲ್ಲಿ ಸಂಗ್ರಹಗೊಳ್ಳುವ ಕಲುಷಿತ ನೀರನ್ನು ಪೈಪ್‌ಲೈನ್ ಮೂಲಕ ಕಲುಷಿತ ನೀರು ಶುದ್ಧೀಕರಣದ ಘಟಕದವರೆಗೂ ಕೊಂಡೊಯ್ಯಬೇಕಿದೆ. ಈ ವ್ಯವಸ್ಥೆ ಆರಂಭಗೊಂಡರಷ್ಟೇ ಕಲುಷಿತ ನೀರು ಕೆರೆಗೆ ಹರಿದು ಹೋಗುವುದು ತಪ್ಪಲಿದೆ.
ಎರಡು ವರ್ಷದಲ್ಲಿ ಪೂರ್ಣಗೊಳ್ಳಬೇಕಾಗಿದ್ದ ಒಳಚರಂಡಿ ಕಾಮಗಾರಿ 5 ವರ್ಷಗಳಾದರೂ ಈವರೆಗೂ ಮುಕ್ತಾಯಗೊಳ್ಳದಿ ರುವುದು ಸಾರ್ವಜನಿಕರಲ್ಲಿ ಅಸಹನೆ ಮೂಡಿಸಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪುರಸಭೆ ವ್ಯಾಪ್ತಿಯ ಒಳಚರಂಡಿ ಕಾಮಗಾರಿಯನ್ನೂ ಪೂರ್ಣಗೊಳಿಸಬೇಕು ಎಂಬುದು ಶಾಸಕರ ಇರಾದೆ. ಆದರೆ ಕೆಲವು ತಾಂತ್ರಿಕ ಸಮಸ್ಯೆ ಮತ್ತು ವಿಳಂಬ ನೀತಿಯಿಂದಾಗಿ ಮುಂದಿನ ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವುದು ಅನುಮಾನ.
ಒಟ್ಟಾರೆ ಈ ಎಲ್ಲ ಅವ್ಯವಸ್ಥೆಗಳಿಂದಾಗಿ ಕೆರೆ ನೀರು ಕಲುಷಿತಗೊಳ್ಳುತ್ತಿದ್ದು, ಜಲಚರಗಳು, ಪಶು-ಪಕ್ಷಿಗಳು ಮತ್ತು ಜಾನುವಾರುಗಳ ಆರೋಗ್ಯದ ಸಮಸ್ಯೆ ಬಿಗಿಡಾಯಿಸುತ್ತಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತು ಶೀಘ್ರ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.
ಕೆಲವು ತಾಂತ್ರಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳಿಂದಾಗಿ ಪುರಸಭೆ ವ್ಯಾಪ್ತಿಯ ಒಳಚರಂಡಿ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ. ಬೆಟ್ಟದಪುರ ರಸ್ತೆ, ನ್ಯಾಯಾಲಯದ ಸಮೀಪ ಮತ್ತು ಮೆಲ್ಲಹಳ್ಳಿ ಬಳಿ ವೆಟ್‌ವೆಲ್‌ಗಳ ನಿರ್ಮಾಣ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಕಿರನಲ್ಲಿ ಗೇಟ್ ಬಳಿ ಕೊಳಚೆ ನೀರು ಶುದ್ಧೀಕರಣ ಘಟಕದ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೆರಡು ತಿಂಗಳಿನಲ್ಲಿ ಒಳಚರಂಡಿ ವ್ಯವಸ್ಥೆ ಕಾರ್ಯರಂಭ ಮಾಡುವ ವಿಶ್ವಾಸವಿದೆ.
ಕೆ.ಮಹೇಶ್, ಪುರಸಭೆ ಅಧ್ಯಕ್ಷ, ಪಿರಿಯಪಟ್ಟಣ
ಮಾಜಿ ಶಾಸಕ ಕೆ.ವೆಂಕಟೇಶ್ ಅವರ ಅಧಿಕಾರವಧಿಯಲ್ಲಿ ಕೆರೆಯ ಸುತ್ತಲೂ ವಾಯು ವಿಹಾರಕ್ಕಾಗಿ ಅಂದಾಜು ಒಂದು ಕೋಟಿ ರೂ.ವೆಚ್ಚದಲ್ಲಿ ವಾಕಿಂಗ್ ಪಾತ್ ನಿರ್ಮಿಸಲಾಗಿತ್ತು. ಪುರಸಭೆ ಅಧಿಕಾರಿಗಳು ವಾಕಿಂಗ್ ಪಾತ್ ಅನ್ನು ನಿರ್ವಹಣೆ ಮಾಡದಿರುವುದರಿಂದ ಗಿಡಗಂಟಿಗಳು ಬೆಳೆದಿವೆ. ವಾಕಿಂಗ್ ಪಾತ್‌ಗೆ ಅಳವಡಿಸಲಾಗಿದ್ದ ಟೈಲ್ಸ್‌ಗಳು ಅಲ್ಲಲ್ಲಿ ಕಿತ್ತು ಬಂದಿವೆ. ಕಲುಷಿತ ನೀರು ಕೆರೆಯನ್ನು ಸೇರದಂತೆ ಮಾಡಿದ್ದಲ್ಲಿ ಅರಸನ ಕೆರೆಯನ್ನು ಒಂದು ಉತ್ತಮವಾದ ಪ್ರವಾಸಿ ತಾಣವನ್ನಾಗಿ ಮಾಡಬಹುದು.
ಪಿ.ಎಸ್.ಹರೀಶ್ ರೋಟರಿ ಐಕಾನ್ಸ್ ಸಂಸ್ಥೆಯ ಕಾರ್ಯದರ್ಶಿ, ಪಿರಿಯಾಪಟ್ಟಣ