ಜಿಲ್ಲೆ

ಅರವಿಂದ ಕುಲಕರ್ಣಿಗೆ ಸ್ನೇಹ ರಂಗ ಪ್ರಶಸ್ತಿ

ಧಾರವಾಡ: ಹನುಮಂತ ಡಂಬಳ ನೆನಪಿನಲ್ಲಿ ಸ್ನೇಹ ಪ್ರತಿಷ್ಠಾನ ನೀಡುವ ಸ್ನೇಹ ರಂಗ ಪ್ರಶಸ್ತಿಗೆ ಬೆಳಗಾವಿಯ ರಂಗ ಸಂಪದದ ಅಧ್ಯಕ್ಷ, ನಟ, ನಿರ್ದೇಶಕ ಡಾ. ಅರವಿಂದ ಕುಲಕರ್ಣಿ ಭಾಜನರಾಗಿದ್ದಾರೆ.
ಫೆ. 26ರಂದು ಇಲ್ಲಿನ ರಂಗಾಯಣ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಬೆಳಗ್ಗೆ 10.30ಕ್ಕೆ ಏರ್ಪಡಿಸಿರುವ ಸಮಾರಂಭದಲ್ಲಿ ನಟ ಎಸ್.ಎನ್. ಸೇತುರಾಮ, ನಟ, ನಿರ್ದೇಶಕ ಶ್ರೀಪತಿ ಮಂಜನಬೈಲು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಹರ್ಷ ಡಂಬಳ ತಿಳಿಸಿದ್ದಾರೆ.
ಡಾ. ಅರವಿಂದ ಕುಲಕರ್ಣಿ ಮೂಲತಃ ಬೆಳಗಾವಿ ಜಿಲ್ಲೆಯವರು. ಪ್ರಾಥಮಿಕ ಶಾಲೆಯಲ್ಲೇ ರಂಗಭೂಮಿ ಪ್ರವೇಶಿಸಿದ ಅವರು, ಅನೇಕ ರಂಗ ತಂಡಗಳೊಂದಿಗೆ ಕ್ರಿಯಾಶೀಲರಾಗಿದ್ದುಕೊಂಡು ನಾಟಕಗಳಲ್ಲಿ ಪಾತ್ರವಹಿಸಿದ್ದರು. ಧಾರವಾಡ, ಬೆಳಗಾವಿ ಹಾಗೂ ನಾಡಿನ ಇತರ ಸ್ಥಳಗಳಲ್ಲಿ ನಡೆದ ರಂಗ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ರಂಗಭೂಮಿಯ ಸಕ್ರೀಯ ನಟರಾದರು.
ಸದ್ಯ ಬೆಳಗಾವಿ ರಂಗ ಸಂಪದ ತಂಡದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅನೇಕ ನಾಟಕಗಳನ್ನು ನಿರ್ದೇಶಿಸಿದ ಅನುಭವ ಇವರದು. ಇತ್ತೀಚಿಗೆ ಪಂಚಕನ್ಯಾಸ್ಮರೇನಿತ್ಯನಾಟಕವನ್ನು ನಿರ್ದೇಶಿಸಿ ರಾಜ್ಯಾದ್ಯಂತ ಪ್ರದರ್ಶನ ಮಾಡಿದ್ದಾರೆ.