ಬಾಗಲಕೋಟೆ: ವೈದ್ಯಕೀಯ ಕ್ಷೇತ್ರದ ಶಸ್ತçಚಿಕಿತ್ಸೆಯಲ್ಲಿ ಅರವಳಿಕೆ ತಜ್ಞರ ಪಾತ್ರ ಮುಖ್ಯವಾಗಿದ್ದು ಅವರು ವಿಷಯ ಪರಿಣಿತಿಯ ಜೊತೆಗೆ ಉತ್ತಮ ಆಡಳಿತಗಾರರಾಗಿಯೂ ಕಾರ್ಯನಿರ್ವಹಿಸಬೆಕಿದೆ’ ಎಂದು ಭಾರತೀಯ ಅರವಳಿಕೆ ಶಾಸ್ತ್ರಜ್ಞರ ಸಂಘದ ಮಾಜಿ ಅಧ್ಯಕ್ಷರು ಮತ್ತು ವಿಶ್ರಾಂತ ಕುಲಪತಿಗಳಾದ ಡಾ.ಪಿ.ಎಫ್.ಕೊಟೂರ ಹೇಳಿದರು.
ನಗರದ ಬಿ.ವಿ.ವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅರವಳಿಕೆಶಾಸ್ತ್ರ ವಿಭಾಗ ಮತ್ತು ಭಾರತೀಯ ಅರವಳಿಕೆಶಾಸ್ತ್ರಜ್ಞರ ಸಂಘದ ಕರ್ನಾಟಕ ರಾಜ್ಯ ಶಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಎರಡು ದಿನಗಳ ಅರವಳಿಕೆಶಾಸ್ತçದ ಸ್ನಾತಕೋತ್ತರ ಪರೀಕ್ಷೆ ಸಂಬಂಧಿತ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಮಾತನಾಡಿದರು.
ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆ ಸಂದರ್ಭ ವೈದ್ಯಕೀಯ ಪ್ರಕರಣಗಳನ್ನು ವ್ಯವಸ್ಥಿತವಾಗಿ ಪ್ರಸ್ತುತ ಪಡಿಸಲು ತರಬೇತಿಯು ಈ ಕಾರ್ಯಾಗಾರದಿಂದ ದೊರೆಯುತ್ತದೆ. ಜೊತೆಗೆ ಇದು ಶಿಕ್ಷಕರಿಗೂ ಕಲಿಕಾ ತರಬೇತಿಯಾಗಲಿದೆ. ಅರವಳಿಕೆಶಾಸ್ತ್ರದ ವಿದ್ಯಾರ್ಥಿಗಳು ಇಂಥ ಕಾರ್ಯಾಗಾರಗಳಲ್ಲಿ ಭಾಗವಹಿಸುವುದರಿಂದ ಗುಣಮಟ್ಟದ ಮಾಹಿತಿಯನ್ನು ಪಡೆಯಬಹುದಾಗಿದೆ. ಎಲ್ಲ ವೈದ್ಯರಿಗೆ ಅರವಳಿಕೆ ತಜ್ಞರ ಅವಶ್ಯಕತೆಯಿದ್ದು ಶಸ್ತ್ರಚಿಕಿತ್ಸೆಗಳಲ್ಲಿ ಅರವಳಿಕೆತಜ್ಞರು ಉತ್ತಮ ಆಡಳಿತಗಾರರಾಗಿ ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ ಎಂದರು.
ಬಿ.ವಿ.ವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಅವರು ‘ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಅವರ ಆಶಯದಂತೆ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಇಂತಹ ಕಾರ್ಯಾಗಾರವನ್ನು ನಮ್ಮ ವೈದ್ಯಕೀಯ ಮಹಾವಿದ್ಯಾಲಯದಿಂದ ಆಯೋಜಿಸಲಾಗಿದೆ. ಪರೀಕ್ಷೆ ಕುರಿತು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಸಹಾಯವಾಗಲಿದೆ. ’ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತೀಯ ಅರವಳಿಕೆಶಾಸ್ತಜ್ಞರ ಸಂಘದ ಕರ್ನಾಟಕ ಶಾಖೆಯ ಅಧ್ಯಕ್ಷ ಡಾ.ಶಿವಕುಮಾರ ಕುಂಬಾರ ಅವರು ‘ವೈದ್ಯಕೀಯ ಕ್ಷೇತ್ರದಲ್ಲಿ ಅರವಳಿಕೆ ತಜ್ಞರ ಪಾತ್ರ ತುಂಬ ಮಹತ್ವದ್ದಾಗಿದೆ. ಯುವ ಅರವಳಿಕೆತಜ್ಞರು ರೋಗಿಗಳ ಆರೋಗ್ಯದತ್ತ ಹೆಚ್ಚು ಕಾಳಜಿ ವಹಿಸಬೇಕು. ಪ್ರಶಸ್ತಿ ಗೌರವಗಳಿಗೆ ಮನ್ನಣೆ ನೀಡದೆ ವೃತ್ತಿಗೆ ನ್ಯಾಯ ಒದಗಿಸಿ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಮ್.ಸಜ್ಜನ (ಬೇವೂರ), ಪ್ರಾಚಾರ್ಯ ಡಾ.ಅಶೋಕ ಮಲ್ಲಾಪೂರ, ವೈದ್ಯಕೀಯ ಅಧೀಕ್ಷಕಿ ಡಾ.ಭುವನೇಶ್ವರಿ ಯಳಮಲಿ, ಆಯ್.ಎಸ್.ಎ ಅಕಾಡೆಮಿಕ್ ಕೌನ್ಸಿಲ್ ಚೇರಮನ್ ಡಾ.ಗುರುಲಿಂಗಪ್ಪಾ ಪಾಟೀಲ, ಆಯ್.ಎಸ್.ಎ ಸೆಕ್ರೆಟರಿ ಡಾ.ಶಿವಕುಮಾರ, ಆಯ್.ಎಸ್.ಎ ಪದಾಧಿಕಾರಿಗಳಾದ ಡಾ.ಶ್ರೀನಿವಾಸನ, ಡಾ.ಸಂಧ್ಯಾ, ಡಾ.ಅನಿಲಕುಮಾರ, ಸಮ್ಮೇಳನದ ಅಧ್ಯಕ್ಷ ಡಾ.ಶಿವಾನಂದ ಹುಲಕುಂದ ಮತ್ತು ಕಾರ್ಯದರ್ಶಿ ಡಾ.ಛಾಯಾ ಜೋಶಿ, ಉಪಸ್ಥಿತರಿದ್ದರು.