ಜಿಲ್ಲೆ

ಅರಳಿಕಟ್ಟೆ ಮೇಲೆ ಮಕ್ಕಳಿಗೆ ಪಾಠ : ಸರ್ಕಾರಿ ಶಾಲೆ ಕಟ್ಟಡ ಖಾಸಗಿಯವರ ಪಾಲು, ಸರ್ಕಾರಿ ಜಾಗವಿದ್ದರೂ ಶಾಲೆ ನಿರ್ಮಿಸಲಾಗದ ಪರಿಸ್ಥಿತಿ

ರಮೇಶಾಚಾರಿ, ರೋಜಾರ್ನಹಳ್ಳಿಕ್ರಾಸ್​ ಶ್ರೀನಿವಾಸಪುರ ತಾಲೂಕು ಬಂಗವಾದಿಯಲ್ಲಿ ನ್ಯಾಯಾಲಯ ಆದೇಶದಂತೆ ಸರ್ಕಾರಿ ಶಾಲಾ ಕಟ್ಟಡ ಖಾಸಗಿಯವರ ವಶವಾಗಿದ್ದು, 60ಕ್ಕೂ ಹೆಚ್ಚು ಮಕ್ಕಳು ಮರದ ಕೆಳಗೆ ಪಾಠ ಕೇಳುವ ದುಸ್ಥಿತಿ ಎದುರಾಗಿದೆ. ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 50 ವರ್ಷದ ಹಿಂದೆ ನಿರ್ಮಿಸಿದ್ದ 6 ಕೊಠಡಿಗಳ ಶಾಲಾ ಕಟ್ಟಡ ನ್ಯಾಯಾಲಯ ತೀರ್ಪಿನಂತೆ ನಂಜುಂಡಗೌಡ ಎಂಬುವವರ ವಶವಾಗಿದೆ. ಅಂದು ಕಟ್ಟಡವನ್ನು ನಿರ್ಮಿಸಿದವರು ಜಾಗ ಸರ್ಕಾರಕ್ಕೆ ಸೇರಿದೆಯಾ, ಖಾಸಗಿಯವರದಾ ಎಂದು ನೋಡದೆ ಹೋದದ್ದೇ ಈಗಿನ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಕೆಲವು ದಿನಗಳಿಂದ ಈಚೆಗೆ ಗ್ರಾಮದ ಹಾಲಿನ ಡೇರಿ ಕಟ್ಟಡದಲ್ಲಿ ತರಗತಿಗಳನ್ನು ನಡೆಸಲಾಗುತ್ತಿತ್ತು. ಆದರೆ ಡೇರಿಯವರು ಕಟ್ಟಡ ತಮಗೇ ಬೇಕೆಂದು ಹೇಳಿದ್ದರಿಂದ ಶಿಕ್ಷಕರು ವಿಧಿಯಿಲ್ಲದೆ ಗ್ರಾಮದ ಅರಳಿಕಟ್ಟೆ ಮೇಲೆ ಮರದ ನೆರಳಲ್ಲಿ ಮಕ್ಕಳನ್ನು ಕುಳ್ಳಿರಿಸಿಕೊಂಡು ಪಾಠಗಳನ್ನು ಮಾಡುತ್ತಿದ್ದಾರೆ. ಮಳೆ ಬಂದರೆ ಮಕ್ಕಳು ಮನೆಗಳಿಗೆ ತೆರಳಬೇಕಾಗುತ್ತದೆ. ಶಿಕ್ಷಕರು ಯಾರದಾದರೂ ಮನೆಯಲ್ಲಿ ಆಶ್ರಯ ಪಡೆಯಬೇಕಾಗುತ್ತದೆ. ಗ್ರಾಮದಲ್ಲಿ ಸರ್ಕಾರಿ ಜಮೀನು ಇದೆ. ಆದರೆ ಕೆಲವರು ತಿಪ್ಪೆಗಳನ್ನು ಹಾಕಿಕೊಂಡು ತಮ್ಮದೇ ಜಾಗ ಎಂದು ವಾದಿಸುತ್ತಿದ್ದಾರೆ. ಗ್ರಾಮಸ್ಥರು ಶಾಲೆ ನಿಮಾರ್ಣಕ್ಕೆ ಸ್ಥಳಾವಕಾಶ ಒದಗಿಸಿದರೆ ಕಟ್ಟಡ ನಿಮಾರ್ಣಕ್ಕೆ ಮುಂದಾಗುತ್ತೇವೆ ಎಂಬುದು ಶಿಕ್ಷಣ ಇಲಾಖೆ ಅಧಿಕಾರಿಗಳ ಅಭಿಪ್ರಾಯ. ಆದರೆ ಕಟ್ಟಡ ನಿಮಾರ್ಣವಾಗುವ ತನಕ ಮಕ್ಕಳ ಪಾಡೇನು ಎಂಬ ಆತಂಕ ಪಾಲಕರನ್ನು ಕಾಡುತ್ತಿದೆ. ಗ್ರಾಮದಲ್ಲಿ ತಿಪ್ಪೆಗಳು ಇರುವ ಕಡೆ 2 ಎಕರೆ ಸರ್ಕಾರಿ ಜಮೀನಿದೆ. ಕೂಡಲೇ ಕ್ರಮ ಕೈಗೊಂಡು ಜಾಗ ಆಕ್ರಮಿಸಿಕೊಂಡವರನ್ನು ಹೊರಹಾಕಿ ಶಾಲೆ ಕಟ್ಟಲು ಅನುವು ಮಾಡಿಕೊಡಬೇಕು ಎಂದು ಹಲವು ಗ್ರಾಮಸ್ಥರು ಒತ್ತಾಯಿಸಿದ್ದರಿಂದ ವಾರದ ಹಿಂದೆ ಗ್ರಾಮಕ್ಕೆ ಡಿಡಿಪಿಐ ಕೃಷ್ಣಮೂರ್ತಿ, ಶ್ರೀನಿವಾಸಪುರ ತಹಸೀಲ್ದಾರ್​ ಶರೀನ್​ತಾಜ್​, ಸರ್ವೇಯರ್​ ಮುನಿರೆಡ್ಡಿ, ಇಒ ಆನಂದ್​, ಬಿಇಒ ಉಮಾದೇವಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಿದರೆ ಒತ್ತುವರಿ ತೆರವುಗೊಳಿಸಿ ಶೀಘ್ರ ಶಾಲಾ ಕಟ್ಟಡ ನಿರ್ಮಿಸಬಹುದಾಗಿದೆ.

ಮರದ ಕೆಳಗೆ ಮಕ್ಕಳು ಪಾಠ ಕೇಳುತ್ತಿರುವುದು ಗ್ರಾಮಸ್ಥರಾದ ನಮಗೆ ನಾಚಿಕೆಯಾಗಬೇಕು. ಶಾಲೆ ನಿಮಾರ್ಣಕ್ಕೆ ಎಲ್ಲರೂ ಸಹಕರಿಸಬೇಕು. ಸಧ್ಯಕ್ಕೆ ಡೇರಿ ಮತ್ತು ಸಮುದಾಯ ಭವನದಲ್ಲಿ ತರಗತಿಗಳನ್ನು ನಡೆಸಲು ಪ್ರಯತ್ನಿಸುತ್ತೇವೆ. ತಾಲೂಕು ಮತ್ತು ಜಿಲ್ಲಾಡಳಿತ ತ್ವರಿತಗತಿಯಲ್ಲಿ ಶಾಲೆ ನಿರ್ಮಿಸಿಕೊಡಬೇಕು. ಯಳೇಗೌಡ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಂಗವಾದಿ ಗ್ರಾಮ, ಶ್ರೀನಿವಾಸಪುರ ತಾಲೂಕು