ಜಿಲ್ಲೆ

ಅರಮನೆಯಲ್ಲಿ ಆಯುಧ ಪೂಜೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಮಂಗಳವಾರ ಕಳೆಗಟ್ಟಿತ್ತು.


ಮೈಸೂರು ರಾಜಮನೆತನದವರು ಸಾಂಪ್ರದಾಯಿಕವಾಗಿ ಹಬ್ಬ ಆಚರಿಸಿದರು. ಹಲವು ಶತಮಾನಗಳಿಂದ ಯದುವಂಶದ ಅರಸರು ಆಯುಧಪೂಜೆ ಹಾಗೂ ಆಯುಧಪೂಜೆಗೆ ಪೂರಕವಾಗಿರುವ ಬನ್ನಿಪೂಜೆಯನ್ನು ಶಾಸ್ತ್ರಬದ್ಧವಾಗಿ ಶ್ರದ್ಧೆಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಅಂತೆಯೇ, ಈ ಸಲವೂ ಶ್ರದ್ಧಾ, ಭಕ್ತಿಯೊಂದಿಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜಾ ವಿಧಿವಿಧಾನವನ್ನು ನೆರವೇರಿಸಿದರು.


ಅರಮನೆಯಲ್ಲಿ ಬೆಳಗ್ಗೆ 6ರಿಂದಲೇ ಪೂಜಾ ಕೈಂಕರ್ಯಗಳು ಪ್ರಾರಂಭಗೊಂಡವು. ಮೊದಲಿಗೆ ಪಟ್ಟದ ಆನೆ, ಕುದುರೆ, ಒಂಟೆ, ಹಸುಗಳು ಆನೆಬಾಗಿಲಿಗೆ ಆಗಮಿಸಿದವು. ನಂತರ ಅರಮನೆಯಲ್ಲಿ ಚಂಡಿಹೋಮ ನಡೆಸಲಾಯಿತು. ಈ ಸಂದರ್ಭ ಅರಮನೆಯ ಖಾಸಗಿ ಆಯುಧಗಳನ್ನು ಅರಮನೆ ಹೊರ ಆವರಣದಲ್ಲಿರುವ ಕೋಡಿ ಸೋಮೇಶ್ವರ ದೇವಾಲಯಕ್ಕೆ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಲಾಯಿತು.


ಚಂಡಿಕಾ ಹೋಮ, ಪೂರ್ಣಾಹುತಿ ನಂತರ ಪಟ್ಟದ ಆನೆ, ಕುದುರೆ, ಒಂಟೆ, ಹಸು, ಅರಮನೆಯ ವಾಹನಗಳಿಗೆ ಪೂಜೆ ಮಾಡಲಾಯಿತು. ಕಲ್ಯಾಣ ಮಂಟಪದಲ್ಲಿ ಆಯುಧಗಳಿಗೆ ಪೂಜೆ ಅರ್ಪಿಸಲಾಯಿತು.


ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಯದುವೀರ ಪುತ್ರ ಆದ್ಯವೀರ್, ತ್ರಿಷಿಕಾದೇವಿ ಆಯುಧಾ ಪೂಜಾ ಸಂಭ್ರಮ ವೀಕ್ಷಿಸಿದರು. ಸಂಜೆ ಯದುವೀರ ಕೊನೆಯ ದಿನದ ಖಾಸಗಿ ದರ್ಬಾರ್ ನಡೆಸಿದರು. ನಂತರ ಸಿಂಹಾಸನಕ್ಕೆ ಅಳವಡಿಸಿದ್ದ ಸಿಂಹದ ಮೂರ್ತಿಯನ್ನು ತೆಗೆಯಲಾಯಿತು. ಅರಮನೆ ಆವರಣದಲ್ಲಿ ನಡೆದ ಆಯುಧ ಪೂಜೆಯನ್ನು ವೀಕ್ಷಿಸಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರಿದ್ದರು.


ಆನೆಗಳಿಗೆ ಪೂಜೆ:
ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ದಸರಾ ಗಜಪಡೆಗೂ ಪೂಜೆ ಸಲ್ಲಿಸಲಾಯಿತು. ಅರಮನೆಯ ಸೋಮೇಶ್ವರ ದೇವಾಲಯದ ಮುಂಭಾಗ ಅಂಬಾರಿ ಆನೆ ಅಭಿಮನ್ಯು ಮತ್ತು ತಂಡಕ್ಕೆ ಪೂಜೆ ನೆರವೇರಿಸಿ ನಂತರ ಹಣ್ಣು, ಬೆಲ್ಲ ನೀಡಲಾಯಿತು.