ಮೈಸೂರು: ಬೆಂಗಳೂರ ಅರಮನೆ ಮೈದಾನದ ಬಳಕೆ ಮತ್ತು ನಿಯಂತ್ರಣಕ್ಕಾಗಿ ಅಧಿನಿಯಮ ರೂಪಿಸಿದ್ದು ಸಿದ್ದರಾಮಯ್ಯ ಸರ್ಕಾರವಲ್ಲ. ಎಚ್.ಡಿ.ದೇವೇಗೌಡ ಸರ್ಕಾರ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.
ಎಚ್.ಡಿ.ದೇವೇಗೌಡರು ಸಿಎಂ ಆಗಿದ್ದಾಗ 1996ರಲ್ಲಿ ಈ ಅಧಿನಿಯಮ ಜಾರಿಗೆ ಬಂದಿದೆ. ಇದನ್ನು ಪ್ರಶ್ನಿಸಿ ಜಯಚಾಮರಾಜ ಒಡೆಯರ್ ಅವರ 5 ಜನ ವಾರಸುದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದರು. ಸರ್ಕಾರ ಕ್ರಮವನ್ನು ಹೈಕೋರ್ಟ್ ಸಹ ಎತ್ತಿ ಹಿಡಿದಿತ್ತು. ಬಳಿಕ ಸುಪ್ರೀಂಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ನಡುವೆ, ರಸ್ತೆ ಅಗಲೀಕರಣಕ್ಕಾಗಿ 475 ಎಕರೆ ವ್ಯಾಪ್ತಿಯ ಅರಮನೆಯ 15.36 ಎಕರೆ ಜಾಗ ಬಳಸಿಕೊಳ್ಳಲು ಸುಪ್ರೀಂಕೋರ್ಟ್‌ಗೆ ಬಿ.ಎಸ್.ಯಡಿಯೂರಪ್ಪ ಸರ್ಕಾರವು ಮಧ್ಯಾಂತರ ಅರ್ಜಿ ಸಲ್ಲಿಸಿತು. 2014ರಲ್ಲಿ ಇದಕ್ಕೆ ಸಮ್ಮಿತಿ ದೊರೆಯಿತು.
ಭೂ ಪರಿಹಾರ ರೂಪದಲ್ಲಿ ಟಿಡಿಆರ್(ಅಭಿವೃದ್ಧಿ ಹಕ್ಕುಗಳ ವರ್ಗಾವಣೆ) ಮೊತ್ತ ಮಾರುಕಟ್ಟೆ ದರಕ್ಕಿಂತ ಮೂರು ಪಟ್ಟಿನ ಪ್ರಮಾಣಪತ್ರವನ್ನು ನೀಡಲು ತೀರ್ಮಾನಿಸಿತು. ಆದರೆ, ಯಡಿಯೂರಪ್ಪ ಸರ್ಕಾರವು ಇದನ್ನು ನೀಡದಿದ್ದರಿಂದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಯಿತು. ಈ ವಿಷಯ ಈಗ ಸಚಿವ ಸಂಪುಟದಲ್ಲಿ ಚರ್ಚೆಯಾಗಿದೆಯಷ್ಟೇ. ಸಂಪೂರ್ಣ ಜಾಗವನ್ನು ಸ್ವಾಧೀನಕ್ಕೆ ಸುಗ್ರೀವಾಜ್ಞೆ ಹೊರಡಿಸಿಲ್ಲ ಎಂದರು.
ರಸ್ತೆ ಅಗಲೀಕರಣಕ್ಕೆ ಬಳಸಿಕೊಳ್ಳಲು 15.36 ಎಕರೆಗೆ 3,011 ಕೋಟಿ ರೂ. ಟಿಡಿಆರ್ ಅನ್ನು ಸುಪ್ರೀಂಕೋರ್ಟ್ ನಿಗದಿಪಡಿಸಿದ್ದು, ಒಂದು ಎಕರೆಗೆ 200 ಕೋಟಿ ರೂ. ಆಗಿದ್ದು, ಒಂದು ಚ.ಅಡಿಗೆ 50 ಲಕ್ಷ ರೂ. ಕೊಡಬೇಕಿದೆ. ಇದು ಬಹಳ ದುಬಾರಿಯಾಗಲಿದೆ. ಇಷ್ಟು ಜಾಗಕ್ಕೆ 1996ರಲ್ಲಿ 11 ಕೋಟಿ ರೂ. ಮಾರುಕಟ್ಟೆ ದರವಿತ್ತು.
ಇದೀಗ ಅದು 60 ಕೋಟಿ ರೂ.ಆಗಿದೆ. ಸುಪ್ರೀಂಕೋರ್ಟ್ ಪ್ರಕಾರ ಪರಿಹಾರ ಕೊಡಲು ಸಾಧ್ಯವಿಲ್ಲ. ಹೀಗಾಗಿ, ಅಂಡರ್‌ಪಾಸ್‌ಗೆ ಬಳಕೆಯಾಗಿರುವ ಕಾಲು ಎಕರೆಗೆ ಮಾತ್ರ 610 ಕೋಟಿ ರೂ. ಟಿಡಿಆರ್ ಪರಿಹಾರ ಕೊಟ್ಟಿದ್ದು, ಉಳಿದ ಜಾಗ ಬಳಕೆಯಿಂದ ರಾಜ್ಯ ಸರ್ಕಾರ ಹಿಂದೆ ಸರಿದಿದೆ ಎಂದರು.
‘ನಮ್ಮನ್ನು ಗುರಿ ಮಾಡಿ ತೊಂದರೆ ನೀಡಲಾಗುತ್ತಿದೆ’ ಎಂಬ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿಕೆ ಆಧಾರ ರಹಿತ. 2013ರಿಂದ 18ರವರೆಗೆ, ಈಗಿನ ಒಂದು ಮುಕ್ಕಾಲು ವರ್ಷ ಸಿಎಂ ಆಗಿ ಅಧಿಕಾರದಲ್ಲಿರುವ ಸಿದ್ದರಾಮಯ್ಯ ಅವರು, ಅರಮನೆ, ಅದರ ಆಸ್ತಿ, ರಾಜವಂಸ್ಥರ ಕುರಿತು ಒಂದೇ ಒಂದು ತೀರ್ಮಾನ ತೆಗೆದುಕೊಂಡಿಲ್ಲ. ಆದಾಗ್ಯೂ, ಅವರ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಹರಿಹಾಯ್ದರು.
‘ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲ ಅರಮನೆಗೆ ತೊಂದರೆ ನೀಡಲಾಗುತ್ತಿದೆ’ ಎಂಬ ಎಂಎಲ್‌ಸಿ ಎಚ್.ವಿಶ್ವನಾಥ್ ಹೇಳಿಕೆಗೆ ತೀಕ್ಷ್ಮವಾಗಿ ಉತ್ತರಿಸಿದ ಲಕ್ಷ್ಮಣ್ ಅವರು, 1996, 2012, 2021, 2022ರಲ್ಲಿ ಕಾಂಗ್ರೆಸ್ ಸರ್ಕಾರ ಇರಲಿಲ್ಲ. ಬಿಜೆಪಿ ಸರ್ಕಾರ ಇತ್ತು. ಯಾವ ರೀತಿ ತೊಂದರೆ ಕೊಡಲಾಗಿದೆ ಎಂಬುದನ್ನು ಮೊದಲು ಹೇಳಲಿ ಎಂದು ಸವಾಲು ಹಾಕಿದರು.
‘ಅರಮನೆಗೆ ತೊಂದರೆ ಕೊಡಲಾಗುತ್ತಿದೆ’ ಎಂದು ಎಚ್.ಡಿ.ಕುಮಾರಸ್ವಾಮಿ ಸುಳ್ಳು ಹೇಳುವ ಮೂಲಕ ಸಿದ್ದರಾಮಯ್ಯ ಅವರನ್ನು ಖಳನಾಯಕನ ರೀತಿ ಬಿಂಬಿಸಲು ಹುನ್ನಾರ ನಡೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು
ಶ್ರೀವತ್ಸರಿಗೆ ಸವಾಲು:
ಸಿಎಂ ವಿರುದ್ಧ ನಿತ್ಯ ಆರೋಪ ಮಾಡುವ ಟಿ.ಎಸ್.ಶ್ರೀವತ್ಸ ಅವರು ಕಳೆದ ಒಂದು ಕಾಲು ವರ್ಷದಲ್ಲಿ ಏನು ಕಡಿದು ಕಟ್ಟೆ ಹಾಕಿದ್ದಾರೆ. ಕೆ.ಆರ್. ಕ್ಷೇತ್ರಕ್ಕೆ ಏನು ಕೆಲಸ ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.