ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ನವೋಲ್ಲಾಸದ ನವರಂಗು ಅರಮನೆಯ ನಗರಿಯಲ್ಲಿ ಮೇಳೈಸಿತು..!
4ನೇ ದಿನವೂ ವೈಭೋಗದಲ್ಲಿ ನವರಾತ್ರಿ ಸಡಗರ ಮಿನುಗಿತು. ವಿವಿಧೆಡೆ ನಡೆದ ಸಾಲು ಸಾಲು ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡ ಸಾವಿರಾರು ಜನರು ಸಂಭ್ರಮಿಸಿದರು.
ಅರಮನೆ ಅಂಗಳದಲ್ಲಿ ವಿದೇಶಿಯರಿಂದ ಯೋಗ ಕಲರವ ಮೇಳೈಸಿತು. 500 ವಿದೇಶಿ ಯೋಗಪಟುಗಳು ಸಾಮೂಹಿಕವಾಗಿ ಯೋಗ ಪ್ರದರ್ಶನ ಮಾಡುವ ಮೂಲಕ ಗಮನ ಸೆಳೆದರು.
ಮಕ್ಕಳ ವೇದಿಕೆಯಾಗಬೇಕಿದ್ದ ‘ಚಿಗುರು ಕವಿಗೋಷ್ಠಿ’ಯಲ್ಲಿ ಚಿಗುರು ಮೀಸೆಯ ಯುವಕರು ಮೆರೆದರು. ಯುವಕ, ಯುವತಿಯರು ಸ್ಥಾನ ಪಡೆದುಕೊಳ್ಳುವ ಮೂಲಕ ಮಕ್ಕಳಿಗೆ ಅವಕಾಶ ಸಿಗದಂತೆ ಮಾಡಿದರು. ಇದು ಆಕ್ರೋಶಕ್ಕೆ ಕಾರಣವಾಯಿತು.
ಮಹಿಳಾ ದಸರಾದಲ್ಲಿ ಹಳ್ಳಿಗಾಡಿನ ಗ್ರಾಮೀಣ ಸೊಗಡು ಅನಾವರಣಗೊಂಡಿತು. ರಾಗಿ ಬೀಸುವ ಸ್ಪರ್ಧೆ, ಭತ್ತ ಕುಟ್ಟುವ ಸ್ಪರ್ಧೆ, ಹೂಕಟ್ಟುವ ಸ್ಪರ್ಧೆ, ಒಲೆ ರಹಿತ ಅಡುಗೆ ಸ್ಪರ್ಧೆಯಲ್ಲಿ ಉತ್ಸಾಸ ಮತ್ತು ತುರುಸಿನಿಂದ ನಡೆಯಿತು. ವಿವಿಧ ಆಟೋಟ ಸ್ಪರ್ಧೆಯಲ್ಲಿ ನಾರಿಯರು ಸಂಭ್ರಮದಿಂದ ಪಾಲ್ಗೊಳ್ಳುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಜಗನ್ಮೋಹನ ಅರಮನೆಯಲ್ಲಿ ನಡೆದ ಮಕ್ಕಳ ದಸರಾದಲ್ಲಿ ಚಿಣ್ಣರ ಚಿಲಿಪಿಲಿ ಕಳೆಗಟ್ಟಿತ್ತು. ಶಿಕ್ಷಣ ಮಧು ಬಂಗಾರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಸಡಗರದಲ್ಲಿ ಚಿಣ್ಣರು ಮಿಂದೆದ್ದರು.
ಮೊದಲ ಬಾರಿಗೆ ಆಯೋಜನೆ ಮಾಡಿದ್ದ ಮಹಿಳಾ ಕವಿಗೋಷ್ಠಿಯಲ್ಲಿ ವಿವಿಧ ಜಿಲ್ಲೆಗಳಿಂದ ಬಂದಿದ್ದ ಕವಿಯತ್ರಿಯರು ತಮ್ಮ ಕವಿತೆಗಳ ಮೂಲಕ ರಸದೌತಣವನ್ನು ಉಣಬಡಿಸಿದರು. ಅಧ್ಯಕ್ಷತೆ ವಹಿಸಿದ್ದ ಕವಯತ್ರಿ ಸವಿತಾ ನಾಗಭೂಷಣ್ ಅವರು, ಕವಿತೆಯ ಬೆನ್ನತ್ತಿ ನಾವು ಹೋಗಬೇಕು ವಿನಹ ಕವಿಗೋಷ್ಠಿ ಬೆನ್ನತ್ತಿ ಅಲ್ಲ ಎಂದು ಕವಿಗಳಿಗೆ ಕಿವಿಮಾತು ಹೇಳಿದರು.
ಸೂರ್ಯರಶ್ಮಿ ಮುಳುಗುತ್ತಿದ್ದಂತೆ ಅರಮನೆ ವೇದಿಕೆಯಲ್ಲಿ ಡಾ.ಕಿಕ್ಕೇರಿ ಕೃಷ್ಣಮೂರ್ತಿ, ಡಾ.ಅಪ್ಪಗೆರೆ ತಿಮ್ಮರಾಜು ಮತ್ತು ತಂಡದಿಂದ ಭಾವಗೀತೆ, ಜಾನಪದ ಗೀತೆಗಳ ಸಂಭ್ರಮ ಸಭಿಕರನ್ನು ಪುಳಕಿತಗೊಳಿಸಿತು. ಜತೆಗೆ, ಈ ಗಾಯಕರು ತಮ್ಮ ಕಂಠಸಿರಿಯ ಮೂಲಕ ನೆರೆದವರ ಮನದಲ್ಲಿ ಕನ್ನಡಾಭಿಮಾನವನ್ನು ಜಾಗೃತಗೊಳಿಸಿದರು. ಪೊಲೀಸ್ ಬ್ಯಾಂಡ್ ತಂಡದಿಂದ ಹೊರಹೊಮ್ಮಿದ ಸಂಗೀತ ನೆರೆದವರ ಮನಗೆದ್ದಿತು. ಪದ್ಮಶ್ರೀ ಶುಭ ಮುದ್ಗಲ್ ಅವರು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಮೂಲಕ ರಂಜಿಸಿದರು.
ಯುವ ಜನರನ್ನು ಹುಚ್ಚೆದ್ದು ಕುಣಿಸಿದ ಯುವ ದಸರಾಕ್ಕೆ ಚಲನಚಿತ್ರ ನಟ ಶಿವರಾಜ್ ಕುಮಾರ್ ಚಾಲನೆ ನೀಡಿದರು. ಬಳಿಕ ಸ್ಯಾಂಡಲ್‌ವುಡ್ ನೈಟ್ ಕಾರ್ಯಕ್ರಮದಲ್ಲಿ ಚಲನಚಿತ್ರ ನಟ-ನಟಿ, ಗಾಯಕರು ಪ್ರಸ್ತುತಪಡಿಸಿದ ನೃತ್ಯ, ಸಂಗೀತ, ಗಾನಲಹರಿ ಯುವ ಮನಸ್ಸಿನಲ್ಲಿ ಕಿಚ್ಚು ಹೆಚ್ಚಿಸಿತು.