ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ಗುರುವಾರ ಬೆಳಗ್ಗೆ ಟ್ರಿಣ್ ಟ್ರಿಣ್ ಸದ್ದು ಮಾರ್ದನಿಸಿತು. ನೂರಾರು ಜನರು ಸೈಕಲ್ ಸವಾರಿ ಮಾಡುತ್ತಾ ಪಾರಂಪರಿಕ ಕಟ್ಟಡಗಳ ಸೌಂದರ್ಯ, ಅದರ ಚರಿತ್ರೆಯನ್ನು ತಿಳಿದುಕೊಂಡರು.
ಪಾರಂಪರಿಕ ಸೈಕಲ್ ಸವಾರಿ(ಟ್ರಿಣ್-ಟ್ರಿಣ್) ಕಾರ್ಯಕ್ರಮ ಇದಕ್ಕೆ ವೇದಿಕೆಯಾಯಿತು. ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ವತಿಯಿಂದ ಇದನ್ನು ಆಯೋಜಿಸಲಾಗಿತ್ತು.
ಪುರಭವನದಿಂದ ಹೊರಟ ಸೈಕಲ್ ಸವಾರಿ ದೊಡ್ಡಗಡಿಯಾರ, ಅರಮನೆ, ಲ್ಯಾನ್ಸ್‌ಡೌನ್ ಕಟ್ಟಡ, ಪಾಲಿಕೆ ಕಟ್ಟಡ, ಸಂಸ್ಕೃತ ಪಾಠ ಶಾಲಾ ಕಟ್ಟಡ, ದೇವರಾಜ ಮಾರುಕಟ್ಟೆ ಇನ್ನಿತರ ಹಳೆಯ ಕಟ್ಟಡಗಳ ಬಳಿ ತೆರಳಿತು. ನುರಿತ ಮಾರ್ಗದರ್ಶಕರು ಆಯಾ ಕಟ್ಟಡಗಳ ಹಿನ್ನೆಲೆ, ಇತಿಹಾಸ, ಅದರ ಮಹತ್ವವನ್ನು ತಿಳಿಸಿಕೊಟ್ಟರು. ಹೀಗೆ ಐತಿಹಾಸಿಕ ಕಟ್ಟಡಗಳ ಸೌಂದರ್ಯ ವೀಕ್ಷಣೆಯೊಂದಿಗೆ ಸೈಕಲ್ ಸವಾರಿ ಒಟ್ಟೊಟ್ಟಿಗೆ ಚುರುಕಾಗಿ ನಡೆಯಿತು. ಇದು ನಗರದ ಚರಿತ್ರೆ ತಿಳಿದುಕೊಳ್ಳುವುದರೊಂದಿಗೆ ಸೈಕಲ್ ಸಂಸ್ಕೃತಿ ಅಭ್ಯಾಸಕ್ಕೂ ಉತ್ತೇಜಿಸಿತು.
60 ವರ್ಷದ ಒಳಗಿನ ಸಾರ್ವಜನಿಕರು ಹಾಗೂ 15 ವರ್ಷ ಮೇಲ್ಪಟ್ಟ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮೈಸೂರು, ಮಂಡ್ಯ, ಕೊಡಗು, ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳಿಂದ ಸುಮಾರು ನೂರಕ್ಕೂ ಹೆಚ್ಚು ಜನರು ಉತ್ಸಾಹದಿಂದ ಭಾಗವಹಿಸಿದ್ದರು.
ಸವಾರಿಗೆ ಹಸಿರು ನಿಶಾನೆ ತೋರಿದ ಸಚಿವ ಎಸ್.ಟಿ.ಸೋಮಶೇಖರ್ ಕೂಡ ಸ್ವಲ್ಪ ದೂರ ಸೈಕಲ್ ಸವಾರಿ ಮಾಡಿದರು. ಬಳಿಕ ಮಾತನಾಡಿದ ಅವರು, ದಸರಾ ಅಂಗವಾಗಿ ನಗರದಲ್ಲಿರುವ ಪಾರಂಪರಿಕ ಕಟ್ಟಡಗಳ ವೀಕ್ಷಣೆಗಾಗಿ ಸೈಕಲ್ ಸವಾರಿಯನ್ನು ಏರ್ಪಡಿಸಲಾಗಿದೆ. ಯುವಕರು, ಹಿರಿಯರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಸೈಕಲ್ ಸವಾರಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಶಾಸಕ ಎಲ್.ನಾಗೇಂದ್ರ ಸೇರಿದಂತೆ ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.