ಜಿಲ್ಲೆ

ಅರಮನೆ ಆವರಣದಲ್ಲಿ ಹರಿದ ಯುಗಾದಿ ಸಂಗೀತ ಸುಧೆ: ಗಾನಾಮೃತ ಬಡಿಸಿದ ಗಾಯಕ ನವೀನ್ ಸಜ್ಜು

ಮೈಸೂರು: ಅರಮನೆ ಅಂಗಳದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಯುಗಾದಿ ಸಂಗೀತೋತ್ಸವ ಕಳೆಗಟ್ಟಿತ್ತು. ಈ ಸಂಗೀತ ಮೇಳ ನವ ಸಂವತ್ಸರದ ಹಬ್ಬಕ್ಕೆ ನವ ಉಲ್ಲಾಸ ತಂದುಕೊಟ್ಟಿತು.

2ನೇ ದಿನವಾದ ಸಂಗೀತ ಕಾರ್ಯಕ್ರಮದಲ್ಲಿ ಗಾನಲಹರಿಯ ರಸದೌತಣ ಮುಂದುವರಿಯಿತು. ಸುಗಮ ಸಂಗೀತ, ಭರತನಾಟ್ಯ, ಚಿತ್ರಗೀತೆಗಳು ಮತ್ತು ಹಿನ್ನೆಲೆ ಗಾಯಕ ನವೀನ್ ಸಜ್ಜು ವಿಶಿಷ್ಟ ಕಂಠದ ಮೂಲಕ ಗಾನಾಮೃತ ಉಣಬಡಿಸಿದರು.

ಆರಂಭದಲ್ಲಿ ಉಪ್ಪುಂದ ರಾಜೇಶ್ ಪಡಿಯಾರ್ ಮತ್ತು ತಂಡ ‘ಕನ್ನಡವೇ ಸತ್ಯ ಸುಗಮ ಸಂಗೀತ’ ಕಾರ್ಯಕ್ರಮ ಪ್ರಸ್ತುತ ಪಡಿಸಿತು. ಬಳಿಕ ಅನನ್ಯ ಮತ್ತು ತಂಡದಿಂದ ಭರತನಾಟ್ಯ ಕಾರ್ಯಕ್ರಮ ಶಾಸ್ತ್ರೀಯ ಸಂಗೀತ ಲೋಕಕ್ಕೆ ಕರೆದುಕೊಂಡು ಹೋಯಿತು. ಲಯಕ್ಕೆ ಬದ್ಧವಾಗಿ ಭರತನಾಟ್ಯ ಪ್ರದರ್ಶಿಸಿದ ಕಲಾವಿದರ ಕಾಲ್ಗೆಜ್ಜೆಯ ಸದ್ದು ಮನತಟ್ಟಿತು.

ನಂತರ ಗಾಯಕ ವಿ.ರವಿಕುವಾರ್ ಮತ್ತು ತಂಡ ಚಲನಚಿತ್ರಗೀತೆ ಗಾಯನದ ಮೋಡಿ ಹರಿಸಿತು. ಮಲಯ ಮಾರುತ ಸಿನಿಮಾ ‘ಶಾರದೆ ದಯೇ ತೋರದೆ...’ ಗೀತೆಯನ್ನು ಸೊಗಸಾಗಿ ಹಾಡಿ ಪ್ರೇಕ್ಷಕರನ್ನು ಆಕರ್ಷಿಸಿದರು.

ದೇವರ ಗುಡಿ ಸಿನಿಮಾದ ‘ಮಾಮರವೆಲ್ಲೋ ಕೋಗಿಲೆಯೆಲ್ಲೋ ಏನೀ ಸ್ನೇಹ ಸಂಬಂಧ, ಎಲ್ಲಿಯದು ಈ ಅನುಬಂಧ’ ಎಂಬ ಗೀತೆಯನ್ನು ಹಾಡುವ ಮೂಲಕ ಯುಗಾದಿಯ ಶುಭ ಕೋರಿದರು. ಇದಾದ ಬಳಿಕ ಒಂದು ಗಂಟೆಗೂ ಹೆಚ್ಚು ಕಾಲ ಕನ್ನಡ ಸುಮಧುರ ಗೀತೆಗಳನ್ನು ಹಾಡಿ ರಂಜಿಸಿದರು.

ಬಳಿಕ ಹಿನ್ನೆಲೆ ಗಾಂುಕರಾದ ನವೀನ್ ಸಜ್ಜು ಮತ್ತು ತಂಡವೂ ಗಾನಾಮೃತ ನಡೆಸಿತು. ತಾವು ಹಾಡಿರುವ ಹಾಡುಗಳನ್ನು ವೇದಿಕೆಯ ಮೇಲೆ ಹಾಡಿ ಪ್ರೇಕ್ಷಕರನ್ನು ಕುಣಿಸಿದರು.

ಮೈಸೂರು ಅರಮನೆ ಮಂಡಳಿ ವತಿಯಿಂದ ಏರ್ಪಡಿಸಿರುವ ಮೂರು ದಿನಗಳ ಯುಗಾದಿ ಸಂಗೀತೋತ್ಸವ-ವಿಶ್ವಾವಸು ಸಂವತ್ಸರ-2025ಕ್ಕೆ ಭಾನುವಾರ ಚಾಲನೆ ದೊರೆತಿತ್ತು. ಹಿನ್ನೆಲೆ ಗಾಯಕರಾದ ಅಜಯ್ ವಾರಿಯರ್, ಇಂದು ನಾಗರಾಜ್, ಕಂಬದ ರಂಗಯ್ಯ, ಶಶಿಕಲಾ ಮತ್ತು ತಂಡ ಸಂಗೀತದ ಮೋಡಿ ಮಾಡಿತು. ಶಾಸಕರಾದ ಟಿ.ಎಸ್.ಶ್ರೀವತ್ಸ, ಕೆ. ಹರೀಶ್‌ಗೌಡ, ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಂ್ಯು, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಇತರರು ಇದ್ದರು.