ಜಿಲ್ಲೆ

ಅರಮನೆ ಅಂಗಳದಲ್ಲಿ ಪೊಲೀಸ್ ಬ್ಯಾಂಡ್ ನಿನಾದಕ್ಕೆ ಫಿದಾ

ಮಂಜುನಾಥ ತಿಮ್ಮಯ್ಯ

ಮಂಜುನಾಥ ತಿಮ್ಮಯ್ಯ ಮೈಸೂರು

ಝಗಮಗಿಸುವ ಅರಮನೆ ದೀಪಾಲಂಕಾರ, ಗೋಧಲಿ ಸಮಯದ ತಂಗಾಳಿಯ ಅಲೆಯಲ್ಲಿ ‘ಸಂಚಾರ ಸಂಗೀತವಾದ್ಯ’ ಮೇಳ ಮನಮೋಹಕವಾಗಿ ಕಂಗೊಳಿಸಿತು. ಜತೆಗೆ, ವಿವಿಧ ವಾದ್ಯಗಳಿಂದ ಹೊರಚಿಮ್ಮಿದ ರಾಗಲಹರಿಯ ನಿನಾದಕ್ಕೆ ಕಿವಿಗೊಟ್ಟು ಇಡೀ ಶ್ರೋತೃ ಸಮೂಹ ಮೂಕವಿಸ್ಮಿತವಾಯಿತು!

ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಅರಮನೆ ವೇದಿಕೆಯಲ್ಲಿ ಶುಕ್ರವಾರ ಸಂಜೆ ನಡೆದ ‘ಪೊಲೀಸ್ ಬ್ಯಾಂಡ್’ ಅಷ್ಟರ ಮಟ್ಟಿಗೆ ‘ಸಂಗೀತದ ಜೋಶ್’ ಸೃಷ್ಟಿಸಿದ್ದು ವಿಶೇಷ. ಕ್ರಮಬದ್ಧ, ಶಿಸ್ತುಬದ್ಧವಾಗಿ ನುಡಿಸಿದ ವ್ಯಾದಗಳಿಂದ ಮೂಡಿ ಬಂದ ನಿನಾದಕ್ಕೆ ನೆರೆದವರು ಮಂತ್ರಮುಗ್ಧರಾದರು.

ಇಲ್ಲಿ ಮಾತು ಮೌನವಾಗಿ ಬರೀ ಸಂಗೀತ ಮಾತ್ರ ಅರಮನೆ ಬೆಳಕಿನಲ್ಲಿ ಝೇಂಕರಿಸಿತು. ಇದರೊಂದಿಗೆ ಪೊಲೀಸರಲ್ಲಿ ಅಡಗಿರುವ ಸುಪ್ತ ಸಂಗೀತ ಪ್ರತಿಭೆಯೂ ತೆರೆಬಿಚ್ಚಿತು.

ರಾಜ್ಯದ ವಿವಿಧ ಜಿಲ್ಲೆಯ 380 ಪೊಲೀಸರು ಏಕಕಾಲದಲ್ಲಿ ಅದ್ಭುತವಾಗಿ ವಾದ್ಯ ನುಡಿಸಿ ಸೈ ಎನಿಸಿಕೊಂಡರು. ಅಲೆ-ಅಲೆಯಾಗಿ ಅಪ್ಪಳಿಸಿದ ಸಂಗೀತದ ಹೊಳೆಯಲ್ಲಿ ಮಿಂದೆದ್ದ ಪ್ರೇಕ್ಷಕರ ಸಮೂಹ ಮನಸೊರಗೊಂಡಿದ್ದು ಸುಳ್ಳಲ್ಲ...!

ಪ್ರಮುಖ ವಾಗ್ಗೇಯಕಾರರ ಮತ್ತು ಸುಪ್ರಸಿದ್ಧ ಕಂಪೋಸರ್‌ಗಳ ಶ್ರೇಷ್ಠ ಕೃತಿಗಳನ್ನು ತಮ್ಮದೆ ಆದ ಶುಶ್ರಾವ್ಯ ಸಂಯೋಜನೆಯೊಂದಿಗೆ ಪ್ರಸ್ತುತ ಪಡಿಸಿದ ಕೆಎಆರ್‌ಪಿ ಮೌಂಟೆಡ್ ಕಂಪನಿಯ ವಾದ್ಯವೃಂದವು ನಾಡಿನ ಸಂಸ್ಕೃತಿಯೊಂದಿಗೆ, ಸಂಗೀತದ ವೈಭವವನ್ನು ಪ್ರತಿಬಿಂಬಿಸಿತು.

ಚಾಮರಾಜೇಂದ್ರ ಒಡೆಯರ್ ಅವರು 1868ರಲ್ಲಿ ಸ್ಥಾಪಿಸಿದ ಅರಮನೆ ವಾದ್ಯವೃಂದ ನಂತರ 1951ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು ಪೊಲೀಸ್ ಬ್ಯಾಂಡ್ ಆಗಿ ರೂಪಾಂತರಗೊಂಡಿತು. ಆಂಗ್ಲ ಮತ್ತು ಕರ್ನಾಟಕ ವಾದ್ಯವೃಂದದಿಂದ ಸಾಮೂಹಿಕ ವಾದ್ಯಮೇಳ(ಮಾಸ್ ಬ್ಯಾಂಡ್) ಪ್ರತಿ ವರ್ಷದಂತೆ ಪ್ರದರ್ಶನ ನೀಡಿ ಸಭಿಕರ ಮನಗೆದ್ದಿತು.

ನಿಧಾನಗತಿಯಲ್ಲಿ ನಡಿಗೆಯೊಂದಿಗೆ ವಾದ್ಯ ನುಡಿಸಿಕೊಂಡು ಎಲ್ಲ ಪೊಲೀಸ್ ಬ್ಯಾಂಡ್‌ಗಳು ಅರಮನೆ ಅಂಗಳ ಪ್ರವೇಶಿಸಿದವು. ಗೌರವ ವಂದನೆ ಸಲ್ಲಿಸಿ, ‘ಭಾರತ ಕೇ ಜವಾನ್’ ಗೀತೆ ನುಡಿಸಿದವು. ಇಂಗ್ಲಿಷ್ ಬ್ಯಾಂಡ್‌ನಿಂದ ‘ಕದಂ ಕದಂ’ , ಲತಾ ಮಂಗೇಶ್ಕರ್ ಕಂಠಸಿರಿಯಿಂದ ಮೂಡಿ ಬಂದಿರುವ ವಂದೇ ಮಾತಂ ಗೀತೆ ನುಡಿಸಿದ್ದರೆ, ವಿಶಾಲ್ ಶೇಖರ್ ಸಂಯೋಜಿಸಿರುವ ಇದೇ ಗೀತೆಯನ್ನು ವಿಭಿನ್ನವಾಗಿ 2 ಹಂತದಲ್ಲಿ ನುಡಿಸಿ ಮೆಚ್ಚುಗೆಯನ್ನೂ ಪಡೆದುಕೊಳ್ಳಲಾಯಿತು.

ಕರ್ನಾಟಕ ವಾದ್ಯವೃಂದ ಮತ್ತು ಆಂಗ್ಲವಾದ್ಯವೃಂದ ಒಟ್ಟಿಗೆ ಸೇರಿ ದುರ್ಗಾ ದೇವಿ ಗೀತೆಯನ್ನು ನವರಸ ರಾಗದಲ್ಲಿ ಆದಿ ತಾಳದಲ್ಲಿ ಸೊಗಸಾಗಿ ನುಡಿಸಿದವು. 1986ರಲ್ಲಿ ಯೂರೋಪ್ ಸ್ವೀಡನ್‌ನ ರಾಕ್ ಬ್ಯಾಂಡ್ ಸಂಯೋಜನೆ ಮಾಡಿರುವ ದಿ ಫೈನಲ್ ಕೌನ್‌ಡೌನ್ ಗೀತೆಯನ್ನು ಪ್ರಸ್ತುತ ಪಡಿಸಲಾಯಿತು. ಕೋಲ್ಡ್‌ಫ್ಲೇಯ್ ಗೀತೆ ಸಹ ಮೊಳಗಿತು. ಶ್ರೀ ಗುರುಗುಹಾ ಗೀತೆಯನ್ನು ದೇವಕ್ರಿಯಾ ರಾಗದಲ್ಲಿ ರೂಪಕ ತಾಳದಲ್ಲಿ ನುಡಿಸಲಾಯಿತು.

ಗೀತೆಗಳಿಗೆ ಎಲ್ಲ ವೃಂದದವರು ವ್ಯಾದ ಬಾರಿಸುತ್ತಾ ತ್ವರಿತಗತಿಯಲ್ಲಿ ಹೆಜ್ಜೆ ಹಾಕಿದ್ದು ಮನಮೋಹಕವಾಗಿ ಕಂಡುಬಂತು. ಪ್ರತಿ ಹಾಡಿನ ಸಂಗೀತಕ್ಕೆ ಎಲ್ಲ ವೃಂದಗಳ ಸದಸ್ಯರು ಶಿಸ್ತುಬದ್ಧವಾಗಿ ವ್ಯಾದ ಬಾರಿಸುತ್ತ ನಿಧಾನ ಮತ್ತು ತ್ವರಿತಗತಿಯಲ್ಲಿ ನಡಿಗೆ ಹಾಕಿದ್ದು ಕಣ್ಮನ ಸೆಳೆಯಿತು. ಇಂಗ್ಲಿಷ್ ಬ್ಯಾಂಡ್ ಮತ್ತು ಕರ್ನಾಟಕ ಶಾಸ್ತ್ರೀಯ ವಾದ್ಯವೃಂದ ನಡುವೆ ನಡೆದ ಅದ್ಭುತವಾದ ಜುಗಲ್ ಬಂದಿ ಆಕರ್ಷಕವಾಗಿ ಮೂಡಿ ಬಂತು. ಐರೋಷ್ಯ ಸಂಗೀತ ಮತ್ತು ಶಾಸ್ತ್ರೀಯ ಸಂಗೀತದ ನಡುವೆ ಮುದ ನೀಡುವ ಸಂಗೀತ ಸಮರವೇ ನಡೆದಿದ್ದು ವಿಶೇಷ.

ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಗೀತೆಗಳು ರಿಂಗಣಿಸಿತು. ಇಂಗ್ಲಿಷ್ ಬ್ಯಾಂಡ್‌ನಿಂದ ರಂಗೀಲಾ ಸಿನಿಮಾದ ಜನಪ್ರಿಯ ಗೀತೆ ‘ತನ್ಹಾ ತನ್ಹಾ ಯಹಾಂ ಪೆ ಜೀನಾ’ ಮತ್ತು ಬಾಂಬೆ ಚಿತ್ರದ ‘ಕೆಹ್ನಾ ಹಿ ಕ್ಯಾ’ ಗೀತೆಯನ್ನು ಕೊಳಲು, ಪಿಟೀಲು ಮತ್ತು ಮ್ಯಾಂಡೋಲಿನ್ ವಾದ್ಯಗಳಿಂದ ಹೊರಹೊಮ್ಮಿದ ಸಂಗೀತಕ್ಕೆ ಸಿನಿರಸಿಕರ ಮನತಟ್ಟಿತು.

ಒಟ್ಟಿಗೆ ಮಿಳಿತಗೊಂಡ ಕರ್ನಾಟಕ ಶಾಸ್ತ್ರೀಯ ಮತ್ತು ಪಾಶ್ಚಿಮಾತ್ಯ ಸಂಗೀತವು ನೆರೆದವರನ್ನು ಕುಳಿತಲ್ಲಿಯೇ ಕುಣಿಯುವಂತೆ ಮಾಡಿತು.

ಡಿಸಿಜಿ ಪ್ರವೀಣ್ ಕುಮಾರ್ ನೇತೃತ್ವದಲ್ಲಿ ಸ್ಟಿಕ್ ಮೇಜರ್ ಶೋ ಕ್ವಿನ್ ಕಲರ್ಸ್ ಮೂಲಕ ಪ್ರೇಕ್ಷಕರನ್ನು ತಮ್ಮತ್ತ ಆಕರ್ಷಿಸಿದರು. ಕುಮಾರ್ ರೆಡ್ಡಿ ಹಾಗೂ ಶ್ರೀಧರ್ ನೇತೃತ್ವದಲ್ಲಿ ಇಂಡಿಯಾ ಗೆಟ್, ಪೈಪರ್ ರೈಫಲ್ಸ್, ಸ್ಕೈ ಬೋಟ್, ಸಾರೆ ಜಹಾಂಚೆ ಅಚ್ಛ ಹಾಡುಗಳು ಸಂಗೀತವನ್ನು ಉಣಬಡಿಸಿತು.

ಕರ್ನಾಟಕ ಹಾಗೂ ಇಂಗ್ಲಿಷ್ ಬ್ಯಾಂಡ್ ವಾದ್ಯವೃಂದ ತಂಡದಿಂದ ದುರ್ಗಾದೇವಿ ದುರಿತ ನಿವಾರಿಣಿ ಸಂಗೀತವನ್ನು ನವರಸ ಕನ್ನಡ ರಂಗದಲ್ಲಿ ನುಡಿಸಿದರು. ಲಯನಾದಮೃತವನ್ನು ಅಮೃತವರ್ಷಿಣಿ ರಾಗದಲ್ಲಿ ಹಾಗೂ ಶ್ರೀ ದುರ್ಗಾ ದೇವಕಾರ್ಯ ರಾಗದಲ್ಲಿ ನುಡಿಸಿ ಪ್ರೇಕ್ಷಕರನ್ನು ರಂಜಿಸಲಾಯಿತು. ಬ್ರಹ್ಮೋಸ್ ತಂಡದಿಂದ ಡ್ರಮ್ ವಾದವನ್ನು ಚಂದ್ರು ಹಾಗೂ ಶಿವಕುಮಾರ್ ನೇತೃತ್ವದಲ್ಲಿ ಸಮೂಹವಾಗಿ ಎಲ್ಲ ತಂಡದವರು ನುಡಿಸಿದರು. ವಿವಿಧ ಹಾಡುಗಳಿಗೆ ಲಯಬದ್ಧವಾಗಿ ಹೊರಹೊಮ್ಮಿದ ಸಂಗೀತಕ್ಕೆ ಪ್ರೇಕ್ಷಕರ ತಣಿಸಿತು. ಎಲ್ಲ ಹಾಡು ಆಕರ್ಷಕವಾಗಿ ಮೂಡಿ ಬಂದವು. ಸಮೂಹ ವಾದ್ಯ ಮೇಳದಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ್ದ 24 ಪೊಲೀಸ್ ಬ್ಯಾಂಡ್ ತಂಡಗಳು ಭಾಗವಹಿಸಿ ತಮ್ಮ ಸಂಗೀತ ಸುಧೆ ಹರಿಸಿದವು.

ಇಂತಹವೊಂದು ಅದ್ಭುತ ಕಾರ್ಯಕ್ರಮಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕರಾದ ತನ್ವೀರ್ ಸೇಠ್, ಜಿ.ಟಿ.ದೇವೇಗೌಡ, ಟಿ.ಎಸ್.ಶ್ರೀವತ್ಸ, ಎಂಎಲ್‌ಸಿ ಕೆ.ಶಿವಕುಮಾರ್, ಗ್ಯಾರಂಟಿ ಯೋಜನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಐಜಿಪಿ ಡಾ.ಬೋರಲಿಂಗಯ್ಯ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಎಸ್‌ಪಿ ಎನ್.ವಿಷ್ಣುವರ್ಧನ್ ಇನ್ನಿತರರು ಸಾಕ್ಷಿಯಾದರು.

ಜಾನಪದ ಗಾಯನಕ್ಕೆ ರಸಂಭಗ: ಕಲಾವಿದರಿಗೆ ಅವಮಾನ

ಡಾ.ಎಂ.ಮಳವಳ್ಳಿ ಮಹದೇವಸ್ವಾಮಿ ಜಾನಪದ ಗೀತೆ ಗಾಯನ ಕಾರ್ಯಕ್ರಮವನ್ನು ಆರಂಭದಲ್ಲೇ ಸ್ಥಗಿತಗೊಳಿಸಲಾಯಿತು. ವಿವಿಧ ಕಾರಣ ನೀಡಿ ಅರ್ಧಗಂಟೆ ಕಾರ್ಯಕ್ರಮವನ್ನು ತಡೆಹಿಡಿಯಲಾಯಿತು. ಬಳಿಕ ವೇದಿಕೆ ಏರಿದ ಇವರು, ‘ಚೆಲ್ಲಿದರು ಮಲ್ಲಿಗೆಯಾ’ ಗೀತೆಯನ್ನು ಪ್ರಸ್ತುತಪಡಿಸಿದರು.

ಬಳಿಕ ಪೊಲೀಸ್ ಬ್ಯಾಂಡ್ ಕಾರ್ಯಕ್ರಮಕ್ಕಾಗಿ ಮೈಕ್ ಚೆಕ್ ಮಾಡಲು 5 ನಿಮಿಷ ನೀಡಿ, ಬಳಿಕ ಗಾಯನ ಮುಂದುವರಿಸಬಹುದು ಎಂದು ನಿರೂಪಕರು ಹೇಳಿದರು. ಆದರೆ, ಮೈಕ್ ಚೆಕ್ ಮಾಡುತ್ತಲೇ ಅತ್ತ ಪೊಲೀಸ್ ಬ್ಯಾಂಡ್ ಕಾರ್ಯಕ್ರಮ ಶುರು ಮಾಡಲಾಯಿತು. ಇತ್ತ ಇವರು ವೇದಿಕೆಯಲ್ಲೇ ಕಾಯುವಂತೆ ಮಾಡಲಾಯಿತು.