ಗುಂಡ್ಲುಪೇಟೆ: ಕಾಡಾನೆಗಳು ದಾಳಿಯಿಂದ ಉಂಟಾಗಿರುವ ನಷ್ಟಕ್ಕೆ ಸ್ಥಳದಲ್ಲಿಯೇ ಪರಿಹಾರ ನೀಡುವಂತೆ ಒತ್ತಾಯಿಸಿ ರೈತ ಸಂಘದ ಒಕ್ಕೂಟ ಹಾಗೂ ಕುರುಬರಹುಂಡಿ ಗ್ರಾಮಸ್ಥರು ಬುಧವಾರ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅವರ ವಾಹನಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ವಲಯದ ಕಾಡಂಚಿನ ಗ್ರಾಮವಾದ ಕುರುಬರಹುಂಡಿಯ ರೇಚಪ್ಪ ಎಂಬುವರ ಜಮೀನಿಗೆ ಬುಧವಾರ ನಸುಕಿನ ವೇಳೆಯಲ್ಲಿ ಕಾಡಾನೆ ನುಗ್ಗಿದೆ. ಅಲ್ಲಿ ಬೆಳೆದಿದ್ದ ಬೆಳೆಗಳನ್ನು ನಾಶ ಮಾಡುವ ಜತೆಗೆ ಮನೆ ಮತ್ತು ಬೈಕ್ ಜಖಂಗೊಳಿಸಿದೆ. ಈ ಭಾಗದಲ್ಲಿ ಆನೆಗಳ ದಾಳಿ ತಡೆಗಟ್ಟುವಂತೆ ಹಲವಾರು ಬಾರಿ ಮಾಹಿತಿ ನೀಡಿದರೂ ಅರಣ್ಯಾಧಿಕಾರಿಗಳು ನಿರ್ಲಕ್ಷೃ ತೋರಿಸಿದ್ದರು. ಇದರ ವಿರುದ್ಧ ಆಕ್ರೋಶಗೊಂಡ ಗ್ರಾಮಸ್ಥರು ಮಹಜರು ನಡೆಸಲು ಬಂದ ಉಪ ವಲಯಾರಣ್ಯಾಧಿಕಾರಿ ಶಶಿಕುಮಾರ್ ಅವರನ್ನು ಮುತ್ತಿಗೆ ಹಾಕಿದರು.
ಸ್ಥಳಕ್ಕೆ ಹುಲಿ ಯೋಜನೆಯ ನಿರ್ದೇಶಕರು ಬಂದು ರೈತರ ಅಹವಾಲು ಸ್ವೀಕರಿಸಬೇಕು. ಬೆಳೆ ಹಾಗೂ ಆಸ್ತಿ ನಷ್ಟಕ್ಕೆ ಸ್ಥಳದಲ್ಲಿಯೇ ಪರಿಹಾರ ನೀಡಬೇಕು. ಕೂಡಲೇ ಆನೆಗಳು ಹೊರಬರುತ್ತಿರುವ ಪ್ರದೇಶಗಳಲ್ಲಿ ರೈಲ್ವೇ ಕಂಬಿ ಬ್ಯಾರಿಕೇಡ್ ಅಳವಡಿಸಬೇಕು ಎಂದು ಒತ್ತಾಯಿಸಿದರು.
ನಂತರ ಬಂದ ಎಸಿಎಫ್ ಸುರೇಶ್ ಗ್ರಾಮಸ್ಥರ ಆಕ್ರೋಶ ಎದುರಿಸಬೇಕಾಯಿತು. ಪ್ರತಿ ದಿನವೂ ಆನೆಗಳು ಕಾಡಿನಿಂದ ಹೊರಬರುತ್ತಿದ್ದರೂ ಅಧಿಕಾರಿಗಳು ಇವುಗಳನ್ನು ತಡೆಗಟ್ಟುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಹಿರಿಯ ಅಧಿಕಾರಿಗಳು ಬಾರದೆ ನಿಮ್ಮ ವಾಹನಗಳನ್ನು ಬಿಡುವುದಿಲ್ಲ ಎಂದು ಪಟ್ಟುಹಿಡಿದರು. ಅವರ ವಾಹನಕ್ಕೆ ಮುತ್ತಿಗೆ ಹಾಕಿದರು. ವಾಹನಗಳನ್ನು ಅಲ್ಲೇ ಬಿಟ್ಟು ಅಧಿಕಾರಿಗಳು ತೆರಳಿದರು. ರೈತ ಮುಖಂಡರಾದ ಹಸಗೂಲಿ ಮಹೇಶ್, ತಗ್ಗಲೂರು ನಾಗರಾಜು, ಮಂಚಹಳ್ಳಿ ಮಹೇಂದ್ರ, ಸತೀಶ್ ಮಹೇಶ್ ಸೇರಿದಂತೆ ಗ್ರಾಮಸ್ಥರು ಇದ್ದರು.