ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಗ್ರಾಮಾಂತರ ಜಿಲ್ಲೆಯಲ್ಲಿ ಅರಣ್ಯಕೃಷಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮುಂದಡಿ ಇಟ್ಟಿರುವ ಜಿಲ್ಲಾ ಸಾಮಾಜಿಕ ಅರಣ್ಯ ಇಲಾಖೆ ಇದೇ ಮಾದರಿಯಲ್ಲಿ ರೇಷ್ಮೆ ಬೆಳೆಗಾರರನ್ನು ಉತ್ತೇಜಿಸಲು ಇಲಾಖಾ ವ್ಯಾಪ್ತಿಯ ನರ್ಸರಿಗಳಲ್ಲಿ ರೇಷ್ಮೆ ಪ್ಲಾಂಟೇಷನ್‌ಗೆ ಆದ್ಯತೆ ನೀಡಿದೆ. ಈ ಮೂಲಕ ಜಿಲ್ಲೆಯಲ್ಲಿ ಮೊದಲ ಬಾರಿಗೆ ಅರಣ್ಯ ಕೃಷಿಯೊಂದಿಗೆ ರೇಷ್ಮೆ ಮಿಳಿತಗೊಳಿಸುವ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.
ಈಶ ೌಂಡೇಷನ್ ಸಹಯೋಗದಲ್ಲಿ ಈಗಾಗಲೇ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಶ್ರೀಗಂಧ, ರಕ್ತಚಂದನ, ಮಹಾಗನಿ, ಹೊನ್ನೆ, ಬೀಟೆ, ತೇಗದಂಥ ಸಸಿಗಳ ಪ್ಲಾಂಟೇಷನ್ ಮಾಡಿದ್ದು, ಜುಲೈ ವೇಳೆ ರೈತರಿಗೆ ಉಚಿತವಾಗಿ ವಿತರಿಸಲು ಸಿದ್ಧತೆ ನಡೆಸಿದೆ. ಇದಕ್ಕಾಗಿ ಈಗಾಗಲೇ ಜಿಲ್ಲೆಯಲ್ಲಿ 8 ಲಕ್ಷ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಅದೇ ರೀತಿ ಕೃಷಿ ಅರಣ್ಯ ಸಸಿಗಳ ವಿತರಣೆ ಜತೆಗೆ ರೇಷ್ಮೆ ಕೃಷಿ ಬೆಂಬಲಿಸಲು ರೇಷ್ಮೆ ಸಸಿಗಳ ಪ್ಲಾಂಟೇಷನ್ ಮಾಡಿದ್ದು, ಇದಕ್ಕೂ ಸಾವಿರಾರು ರೈತರು ನೋಂದಣಿ ಮಾಡಿಕೊಂಡಿದ್ದಾರೆ.
ರೇಷ್ಮೆಗೆ ಒತ್ತು: ಜಿಲ್ಲೆಯಲ್ಲಿ ರಾಗಿ ಪ್ರಧಾನ ಬೆಳೆಯಾಗಿದ್ದು, ಇದರೊಂದಿಗೆ ವಾಣಿಜ್ಯ ಬೆಳೆಗಳಿಗೆ ಒತ್ತು ನೀಡಲು ಜಿಲ್ಲಾಡಳಿತ ಚಿಂತಿಸಿದೆ. ಇದರ ಲವಾಗಿ ರೇಷ್ಮೆ ಇಲಾಖೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಸಹಯೋಗದಲ್ಲಿ ಅರಣ್ಯ ಕೃಷಿಯೊಂದಿಗೆ ರೇಷ್ಮೆಬೆಳೆಗೆ ಉತ್ತೇಜನ ನೀಡಲು ಕಾರ್ಯಕ್ರಮ ರೂಪಿಸಲಾಗಿದೆ. ರೇಷ್ಮೆ ಇಲಾಖೆಯಲ್ಲಿ ಸಸಿ ಪ್ಲಾಂಟೇಷನ್‌ಗೆ ಅವಕಾಶವಿಲ್ಲದ್ದರಿಂದ ಸಾಮಾಜಿಕ ಅರಣ್ಯ ವ್ಯಾಪ್ತಿಯ ನರ್ಸರಿಗಳಲ್ಲಿ ರೇಷ್ಮೆ ಸಸಿ ಪ್ಲಾಂಟೇಷನ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಶ ೌಂಡೇಷನ್ ಸಹಯೋಗ: ಜಿಲ್ಲೆಯಲ್ಲಿ ಅರಣ್ಯೀಕರಣಕ್ಕಾಗಿ ವರ್ಷದ ಹಿಂದೆ ಈಶ ೌಂಡೇಷನ್ ಆರಂಭಿಸಿದ ಕಾವೇರಿ ಕೂಗು ಅಭಿಯಾನಕ್ಕೆ ಜಿಲ್ಲಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಪ್ರತಿ ಪಂಚಾಯಿತಿಯಲ್ಲಿ ಸರ್ವೇ ನಡೆಸಿ ಅರಣ್ಯ ಕೃಷಿ ಅರಿವು ಮೂಡಿಸಿದ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲೂ ರೈತರು ಅರಣ್ಯಕೃಷಿಗೆ ಒಲವು ತೋರಿಸಿದ್ದಾರೆ. ಇದಕ್ಕೆ ಕೈಜೋಡಿಸಿರುವ ಸಾಮಾಜಿಕ ಅರಣ್ಯ ಇಲಾಖೆ ತನ್ನ ವ್ಯಾಪ್ತಿಯ ನರ್ಸರಿಗಳಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ಸಸಿಗಳನ್ನು ಬೆಳೆಸಿದ್ದು, ವಿತರಣೆಗೆ ಮಳೆಗಾಲ ಆರಂಭವಾಗುವುದನ್ನು ಎದುರು ನೋಡುತ್ತಿದೆ.
ವಿ1 ವೆರೈಟಿ: ರೇಷ್ಮೆ ಬೆಳೆಗಾರರಿಗೆ ಉತ್ತಮ ಆರ್ಥಿಕ ಲಾಭ ತಂದುಕೊಡಬಹುದಾದ ವಿ1 ವೆರೈಟಿಯ ರೇಷ್ಮೆ ಸಸಿಗಳ ಪ್ಲಾಂಟೇಷನ್ ಮಾಡಲಾಗಿದೆ. ರೇಷ್ಮೆ ಇಲಾಖೆಯ ತಾಂತ್ರಿಕ ಉಸ್ತುವಾರಿ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಸಸಿಗಳನ್ನು ಬೆಳೆಸಲಾಗಿದ್ದು, ಕೃಷಿ ಅರಣ್ಯದ ಸಸಿಗಳೊಂದಿಗೆ ರೇಷ್ಮೆ ಬೆಳೆಯಲು ಸಹಕಾರಿಯಾಗುವಂತೆ ಕಾರ್ಯಕ್ರಮ ರೂಪಿಸಲಾಗಿದೆ.
ಬಜೆಟ್‌ನಲ್ಲೂ ಒತ್ತು: ರಾಜ್ಯ ಸರ್ಕಾರದ ಬಜೆಟ್‌ನಲ್ಲೂ ರೇಷ್ಮೆ ಬೆಳೆ ಉತ್ತೇಜಿಸುವ ಸಂಬಂಧ ಒಲವು ತೋರಿದೆ, ದ್ವಿತಳಿ ಮೊಟ್ಟೆ ಉತ್ಪಾದಿಸಿ ಶೈತ್ಯೀಕರಿಸಲು ಪಿಪಿಪಿ ಯೋಜನೆಯಡಿ ದೇವನಹಳ್ಳಿಯಲ್ಲಿ 15 ಕೋಟಿ ರೂ.ವೆಚ್ಚದಲ್ಲಿ ಶೈತ್ಯಾಗಾರ ನಿರ್ಮಾಣಕ್ಕೆ ಅನುದಾನ ಮೀಸಲಿಟ್ಟಿರುವುದು ಗ್ರಾಮಾಂತರ ಜಿಲ್ಲಾ ರೇಷ್ಮೆ ಬೆಳೆಗಾರರಿಗೆ ವರದಾನವಾಗಲಿದೆ.
ನರೇಗಾ ನೆರವು: ಮಳೆಗಾಲ ಎದುರು ನೋಡುತ್ತಿರುವ ಇಲಾಖೆ ಅಧಿಕಾರಿಗಳು ಮಹಾತ್ಮಗಾಂಧಿ ಉದ್ಯೋಗಖಾತ್ರಿ ಯೋಜನೆ (ನರೇಗಾ)ಯಡಿ ಅರಣ್ಯಕೃಷಿ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ. ಜಿಲ್ಲಾ ಪಂಚಾಯಿತಿ ನರೇಗಾ ಯೋಜನೆ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿದ್ದು, ಈ ಯೋಜನೆಯಡಿ ಅರಣ್ಯ ಕೃಷಿ ಹಾಗೂ ರೇಷ್ಮೆಬೆಳೆ ಪ್ರೋತ್ಸಾಹಕ್ಕೆ ಎರಡೂ ಇಲಾಖೆಗಳು ವಿನೂತನ ಕಾರ್ಯಕ್ರಮ ರೂಪಿಸಿವೆ.
ಈಗಾಗಲೇ ಜಿಲ್ಲೆಯ ನಾಲ್ಕೂ ತಾಲೂಕುಗಳ ನರ್ಸರಿಗಳಲ್ಲಿ 8 ಲಕ್ಷ ಅರಣ್ಯಕೃಷಿಗೆ ಸಂಬಂಧಿಸಿದ ಸಸಿಗಳನ್ನು ಬೆಳೆಸಲಾಗಿದ್ದು, ಇದರೊಂದಿಗೆ 5 ಲಕ್ಷ ರೇಷ್ಮೆ ಸಸಿಗಳ ಪ್ಲಾಂಟೇಷನ್ ಮಾಡಲಾಗಿದೆ. ಜಿಪಂನಿಂದ ರೇಷ್ಮೆಇಲಾಖೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಸಹಯೋಗದಲ್ಲಿ ಅರಣ್ಯಕೃಷಿಯೊಂದಿಗೆ ರೇಷ್ಮೆ ಬೆಳೆ ಮಿಳಿತಗೊಳಿಸುವ ಯೋಜನೆ ರೂಪಿಸಲಾಗಿದೆ. ಮಳೆಗಾಲ ಎದುರು ನೋಡುತ್ತಿದ್ದು ಸಸಿಗಳ ವಿತರಣೆಗೆ ಸಿದ್ಧತೆ ನಡೆದಿದೆ. ಭಾಸ್ಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ