ಶಿರಹಟ್ಟಿ: ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಹಾಗೂ ತಾಲೂಕಿನ ಬಗರ್ಹುಕಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ತಹಸೀಲ್ದಾರ್ ಕಚೇರಿ ಎದುರು ಉತ್ತರ ಕರ್ನಾಟಕ ಮಹಾಸಭಾ ವೇದಿಕೆ ನೇತೃತ್ವದಲ್ಲಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಮಂಗಳವಾರ 2ನೇ ಪೂರೈಸಿತು.
ಸೋಮವಾರ ಧರಣಿ ನಿರತ ರೈತರೊಂದಿಗೆ ಅಪರ ಜಿಲ್ಲಾಧಿಕಾರಿ ಮಾರುತಿ ಎಂ.ಪಿ. ಅವರು ನಡೆಸಿದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಕೆ.ಆರ್. ಪಾಟೀಲ, ಸಿಪಿಐ ವಿಕಾಸ ಲಮಾಣಿ ಅವರು ಧರಣಿ ಕುರಿತು ಜಿಲ್ಲಾಧಿಕಾರಿ ಅವರಿಗೆ ಮನವರಿಕೆ ಮಾಡಿದ್ದರಿಂದ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಸೆ.21 ರಂದು ಜಿಲ್ಲಾ ಅರಣ್ಯ ಹಕ್ಕು ಸಮಿತಿ ಸಭೆ ನಡೆಸಲು ತೀರ್ವನಿಸಲಾಗಿತ್ತು. ಆದರೆ, ಇದಕ್ಕೆ ರೈತರು ಒಪ್ಪದೆ, ಅಲ್ಲಿಯವರೆಗೆ ಕಾಯಲು ಆಗುವುದಿಲ್ಲ ಎಂದು ಹೇಳಿದ್ದರಿಂದ ಸೆ.16 ರಂದು ಮಧ್ಯಾಹ್ನ 12 ಕ್ಕೆ ಜಿಲ್ಲಾ ಮಟ್ಟದ ಅರಣ್ಯ ಹಕ್ಕುಸಮಿತಿ ಸಭೆ ನಡೆಸಲು ತೀರ್ವನಿಸಲಾಯಿತು. ಇದಕ್ಕೆ ಧರಣಿ ನಿರತರು ಒಪ್ಪಿಗೆ ಸೂಚಿಸಿ, ‘ಸ್ವತಃ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಸಭೆ ಕುರಿತು ಮಾಹಿತಿ ನೀಡಬೇಕು’ ಎಂದು ಪಟ್ಟು ಹಿಡಿದರು. ಹೀಗಾಗಿ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಪ್ರಶಾಂತ ವರಗಪ್ಪನವರ ಸ್ಥಳಕ್ಕಾಗಮಿಸಿ ಸೆ.16 ರಂದು ಜಿಲ್ಲಾ ಮಟ್ಟದ ಏರ್ಪಡಿಸಿದ್ದು ಹೋರಾಟ ಸಮಿತಿ ಮುಖಂಡರು ಸಭೆಯಲ್ಲಿ ಭಾಗವಹಿಸುವಂತೆ ಕೋರಿದರು.
ಹೋರಾಟ ಸಮಿತಿ ಅಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, ಸಭೆಯಲ್ಲಿ ಕನಿಷ್ಠ 10 ಜನ ಮುಖಂಡರು ಭಾಗಿಯಾಗಲು ಅವಕಾಶ ನೀಡಬೇಕು. ನಮ್ಮ ಬೇಡಿಕೆಗಳಿಗೆ ಸ್ಪಂದನೆ ಸಿಗದಿದ್ದರೆ ಮುಂದಿನ ಹೋರಾಟ ಸ್ವರೂಪ ಬದಲಾಗುತ್ತದೆ. ಈ ಬಗ್ಗೆ ಸರ್ಕಾರದ ಕಣ್ತೆರೆಸುವ ಕೆಲಸ ಅಧಿಕಾರಿಗಳದ್ದಾಗಿದೆ. ಸೆ.16 ರವರೆಗೆ ಧರಣಿ ಮುಂದುವರಿಯಲಿದೆ ಎಂದು ಹೇಳಿದರು.
ಸಿಪಿಐ ವಿಕಾಸ ಲಮಾಣಿ, ಪಿಎಸ್ಐ ಪ್ರವೀಣ ಗಂಗೋಳ, ತಾಲೂಕು ಬಂಜಾರಾ ಸಮಾಜ ಅಧ್ಯಕ್ಷ ಶಿವಪ್ಪ ನೆಲೋಗಲ್, ಎನ್.ಟಿ. ಪೂಜಾರ, ಪುಂಡಲೀಕ ಲಮಾಣಿ, ಚಂದ್ರಕಾಂತ ಚವ್ಹಾಣ ಲಕ್ಷ್ಮಣ ಲಮಾಣಿ, ವೀರಣ್ಣ ಚವ್ಹಾಣ, ತಾವರೆಪ್ಪ ಲಮಾಣಿ, ಈಶ್ವರಪ್ಪ ಲಮಾಣಿ, ಚೆನ್ನಪ್ಪ ಹಿತ್ತಲಮನಿ, ಶಿವು ಲಮಾಣಿ, ನಾಮದೇವ ಮಾಂಡ್ರೆ, ಮಂಜುನಾಥ ಅರೆಪಲ್ಲಿ, ಶ್ರೀನಿವಾಸ ಬಾರಬರ ಇತರರಿದ್ದರು.