ಜಿಲ್ಲೆ

ಅರಣ್ಯ ಹಕ್ಕು ಕಾಯ್ದೆ ಸಮಸ್ಯೆಗೆ ಮುಕ್ತಿ

ಮುಂಡಗೋಡ: ನಮ್ಮ ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯ್ದೆ ಸಮಸ್ಯೆ ಬಹಳ ದಿನದಿಂದ ಇದೆ. ಬಹಳ ರಾಜಕೀಯ ಮುಖಂಡರು ಆಶ್ವಾಸನೆ ನೀಡಿದ್ದಾರೆ. ಆದರೆ, ಈವರೆಗೂ ಒಂದೂ ಕಾಯ್ದೆ ಕಾರ್ಯರೂಪಕ್ಕೆ ಬಂದಿಲ್ಲ. ಅರಣ್ಯ ಹಕ್ಕು ಕಾಯ್ದೆ ಮುಂದೆ ಏನು ಆಗಬೇಕು; ಅದನ್ನು ನಾವು ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.

ಪಟ್ಟಣದ ಸಾಯಿ ಮಂದಿರದಲ್ಲಿ ಬಿಜೆಪಿ ತಾಲೂಕು ಘಟಕದ ವತಿಯಿಂದ ಭಾನುವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ಜಿಲ್ಲೆಯಲ್ಲಿ ಬುಡಕಟ್ಟು(ಎಸ್.ಟಿ.) ಜನಾಂಗದಲ್ಲಿ ವಾಲ್ಮೀಕಿ, ಸಿದ್ದಿ, ಮೇದಾರ ಸಮುದಾಯಗಳಿವೆ. ಬುಡಕಟ್ಟು ಸಮಾಜದಲ್ಲಿ ಬದುಕುವ 4 ಸಮುದಾಯಗಳಿದ್ದು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ಈ ನಾಲ್ಕು ಪಂಗಡಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದ ನಂತರ ಅನುದಾನ ಮತ್ತು ಮೀಸಲಾತಿ ಹೆಚ್ಚು ಮಾಡುವಂತೆ ಮನವಿ ಸಲ್ಲಿಸುತ್ತೇವೆ ಮತ್ತು ಈ ಬಗ್ಗೆ ಪರಿಷತ್​ನಲ್ಲಿ ಮಾತನಾಡುತ್ತೇವೆ ಎಂದರು.

ವನವಾಸಿ ಕಲ್ಯಾಣದಲ್ಲಿ ಸುಮಾರು 32 ವರ್ಷದಿಂದ ಸೇವೆ ಮಾಡುತ್ತಿದ್ದ ನನ್ನನ್ನು ಸರ್ಕಾರ ನಾಮ ನಿರ್ದೇಶನ ಮಾಡಿದೆ. ಸಚಿವರು, ವಿಧಾನ ಪರಿಷತ್ ಸದಸ್ಯರಿಗೆ ಶಾಸಕರಂತೆ ಹೆಚ್ಚಿನ ಅನುದಾನ ಬರುವುದಿಲ್ಲ. ಬಂದಿರುವ ಅನುದಾನವನ್ನು ಉತ್ತಮವಾಗಿ ಸದ್ಬಳಕೆ ಮಾಡುತ್ತೇನೆ ಎಂದರು.

ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ ಮಾತನಾಡಿ, ರಾಜಕೀಯ ಪಕ್ಷದಲ್ಲಿ ಗುರುತು ಮಾಡಿಕೊಂಡು ಅಧಿಕಾರಕ್ಕೆ ಬರುವುದು ಬಹಳ ಕಡಿಮೆ. ಶ್ರೀಮಂತರು ಮತ್ತು ಹಣದ ಬಲ ಇರುವವರು ನೋಡಿದ್ದೇವೆ. ಆದರೆ, ಬಿಜೆಪಿಯಲ್ಲಿ ಅಧಿಕಾರದ ಆಸೆ ಇಲ್ಲದೆ ಸಂಘಟನೆ ಮಾಡಿಕೊಂಡು ಬರುವವರನ್ನು ಗುರುತಿಸಿ ಅಧಿಕಾರ ಕೊಡುವುದನ್ನು ಪ್ರಧಾನಿ ಮೋದಿಯವರಿಂದ ನೋಡುತ್ತಿದ್ದೇವೆ ಎಂದರು. ಈ ವೇಳೆ ಜಿ.ಪಂ. ಸದಸ್ಯ ಎಲ್.ಟಿ. ಪಾಟೀಲ, ಗುಡ್ಡಪ್ಪ ಕಾತೂರ, ಬಸವರಾಜ ಓಶಿಮಠ, ರಮೇಶ ರಾಯ್ಕರ, ಜಯರಾಮ ಸಿದ್ದಿ, ಪ್ರಕಾಶ ಸಿದ್ದಿ, ನಾಗಭೂಷಣ ಹಾವಣಗಿ, ಉಮೇಶ ಬಿಜಾಪುರ, ವೀಣಾ ಓಶಿಮಠ, ಫಣಿರಾಜ ಹದಳಗಿ, ಅಶೋಕ ಗೋಕರ್ಣ, ಗುರು ಕಾಮತ ಇತರರಿದ್ದರು.