ಜಿಲ್ಲೆ

ಅರಣ್ಯ ಸಂರಕ್ಷಣೆಗೆ ಇಲಾಖೆಯೊಂದಿಗೆ ಕೈಜೋಡಿಸಿ

ಹಳಿಯಾಳ: ಆಧುನಿಕ ಯುಗದಲ್ಲಿ ಅರಣ್ಯ ಹಾಗೂ ಪರಿಸರ ಸಂರಕ್ಷಣೆಯು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ನಮ್ಮ ಬದುಕಿಗೆ ಹಾಗೂ ಉಳಿವಿಗೆ ಅತ್ಯವಶ್ಯಕವಾಗಿರುವ ಅರಣ್ಯವನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದ್ದು ಈ ಪವಿತ್ರ ಕಾಯಕದಲ್ಲಿ ಇಡೀ ಸಮಾಜವು ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಹಳಿಯಾಳ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ ಡಾ.ಅಜ್ಜಯ್ಯಾ ಜಿ.ಆರ್. ಹೇಳಿದರು.

ಶುಕ್ರವಾರ ಹಳಿಯಾಳ ಅರಣ್ಯ ವಿಭಾಗದ ಆವರಣದಲ್ಲಿ ನಡೆದ ಅರಣ್ಯ ಇಲಾಖೆ ಹುತಾತ್ಮರ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬರಗಾಲ ಹಾಗೂ ನೆರೆಹಾವಳಿ, ಪ್ರವಾಹ, ಭೂಕಂಪ ಇತ್ಯಾದಿ ಸಂಭವಿಸಲು ಪ್ರಕೃತಿ ಅಸಮತೋಲನವೇ ಕಾರಣ. ಇವುಗಳ ನಿಯಂತ್ರಣವಾಗಬೇಕಾದರೇ ಅರಣ್ಯ ಸಂಪತ್ತಿನ ಸಂರಕ್ಷಣೆ ಅತ್ಯವಶ್ಯಕವಾಗಿದೆ. ಅರಣ್ಯ ಸಂರಕ್ಷಣೆಯಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಪಡೆಯಲು ಸರ್ಕಾರ 1988 ಕಾನೂನು ಜಾರಿಗೊಳಿಸಿತು. ಅರಣ್ಯ ಇಲಾಖೆಯು ಸರ್ವರ ಸಹಮತ ಹಾಗೂ ಸಹಕಾರದೊಂದಿಗೆ ಅರಣ್ಯ ಸಂರಕ್ಷಣೆಯಲ್ಲಿ ತೊಡಗಿದೆ ಎಂದರು.

ಪುಷ್ಪ ನಮನ: ಡಿಎಫ್​ಒ ಡಾ. ಅಜ್ಜಯ್ಯಾ ಜಿ.ಆರ್, ಹಳಿಯಾಳ ಎಸಿಎಫ್ ಶಿವಶರಣಯ್ಯಾ, ಗಣೇಶಗುಡಿ ಎಸಿಎಫ್ ನಂಜುಂಡಪ್ಪಾ ಎಚ್.ಬಿ, ದಾಂಡೇಲಿ ಸರ್ಕಾರಿ ಮರಮುಟ್ಟಿ ಸಂಗ್ರಹಾಲಯದ ಎಸಿಎಫ್ ಎಸ್.ಎಸ್. ನಿಂಗಾಣಿ, ಎಪಿಪಿ ಅಜಿತ್ ಜಿನಗೌಡಾ, ಸಿಪಿಐ ಡಾ. ಮೋತಿಲಾಲ ಪವಾರ, ವಲಯ ಅರಣ್ಯಾಧಿಕಾರಿಗಳ ಸಂಘದ ಪರವಾಗಿ ಜೊಯಿಡಾ ವಲಯ ಅರಣ್ಯಾಧಿಕಾರಿ ಸಿ.ಜಿ. ನಾಯ್ಕ, ಉಪ ವಲಯ ಅರಣ್ಯಾಧಿಕಾರಿಗಳ ಸಂಘದ ಪರವಾಗಿ ಸಂತೋಷ ಜಿ, ಲಿಪಿಕ ನೌಕರರ ಸಂಘದ ಪರವಾಗಿ ದೀಪಕ ಗರಗ, ಅರಣ್ಯ ರಕ್ಷಕರ-ವೀಕ್ಷಕರ ಸಂಘದ ಪರವಾಗಿ ಯೋಗೇಶ ನಾಯ್ಕ, ಗ್ರುಪ ಡಿ ನೌಕರರ ಪರವಾಗಿ ನಾಗಮ್ಮಾ ನಾಟೇಕರ, ವಾಹನ ಚಾಲಕರ ಸಂಘದ ಪರವಾಗಿ ಎನ್.ಪಿ. ದಳವಾಯಿ, ತಾ.ಪಂ. ಪರವಾಗಿ ಬೆನಿತ್ ಪಣ್ಸೆಕರ ಹುತಾತ್ಮ ಸ್ಮಾರಕಕ್ಕೆ ಪುಷ್ಮ ನಮನ ಸಲ್ಲಿಸಿ ಗೌರವಿಸಿದರು.

ವಿರ್ನೆಲಿ ವಲಯ ಅರಣ್ಯಾಧಿಕಾರಿ ಬಸವರಾಜ ಅರಣ್ಯ ಸಂರಕ್ಷಣೆಯಲ್ಲಿ ಹುತಾತ್ಮರಾದವರ ಹೆಸರುಗಳನ್ನು ಓದಿದರು. ಹಳಿಯಾಳ ವಲಯ ಅರಣ್ಯಾಧಿಕಾರಿ ಮಹೇಶ ಸಿ. ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.