ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಆಯೋಜಿಸಿದ್ದ ಹುತಾತ್ಮಾ ದಿನಾಚರಣೆಯಲ್ಲಿ ಭಾಗವಹಿಸಿದ್ದ ಅರಣ್ಯ ಇಲಖಾ ಸಿಬ್ಬಂದಿ. 
ಜಿಲ್ಲೆ

ಅರಣ್ಯ ರಕ್ಷಣೆ ಪ್ರತಿಯೊಬ್ಬರ ಹೊಣೆ

ಗುಂಡ್ಲುಪೇಟೆ: ಅರಣ್ಯ ಸಂರಕ್ಷಣೆ ಕೇವಲ ಇಲಾಖೆಗೆ ಸೀಮಿತವಾಗದೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹಿರಿಯ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಧೀಶ ಬಸವರಾಜ ಎಚ್. ತಳವಾರ್ ಹೇಳಿದರು.

ಬಂಡೀಪುರದ ಸ್ವಾಗತ ಕೇಂದ್ರದಲ್ಲಿ ಸೋಮವಾರ ಅರಣ್ಯ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮರಿಗೆ ಗೌರವ ಸಲ್ಲಿಸಿ ಮಾತನಾಡಿದರು.

ದೇಶದ ಗಡಿಗಳಿಂದ ಶತೃಗಳು ಬಾರದಂತೆ ಯೋಧರು ಕಾವಲು ಕಾಯುತ್ತಿದ್ದರೆ, ಅರಣ್ಯ ರಕ್ಷಕರು ಮನುಷ್ಯನ ಬದುಕಿಗೆ ಅಗತ್ಯವಾದ ಅರಣ್ಯವನ್ನು ಕಾಯುತ್ತಿದ್ದಾರೆ. ಅದರ ಫಲವಾಗಿ ಇಂದು ಉಸಿರಾಡಲು ಉತ್ತಮ ಗಾಳಿ ಸಿಗುತ್ತಿದೆ. ಸಿಬ್ಬಂದಿ ತಮ್ಮ ಕರ್ತವ್ಯ ಸಂದರ್ಭದಲ್ಲಿ ಆನೆ ದಾಳಿ, ಬೆಂಕಿ ಹಾಗೂ ಕಾಡುಗಳ್ಳರಿಂದ ಸಾವಿಗೀಡಾಗಿದ್ದಾರೆ. ಅರಣ್ಯ ನಾಶದಿಂದ ಮನುಕುಲ ವಿನಾಶದತ್ತ ಸಾಗುವ ಅಪಾಯವಿದೆ. ಆದ್ದರಿಂದ ಅರಣ್ಯ ಸಂರಕ್ಷಣೆ ಅರಣ್ಯ ಇಲಾಖೆಗೆ ಸೀಮಿತವಾಗಿದ್ದಲ್ಲ ಅದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂದರು.

ಹುಲಿ ಯೋಜನೆಯ ಕ್ಷೇತ್ರ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್ ಮಾತನಾಡಿ, ಅರಣ್ಯ ರಕ್ಷಕರು ಸಿಬ್ಬಂದಿಗಳು ಜೀವನದ ದೃಷ್ಠಿಯಲ್ಲಿ ಮುಂಜಾಗ್ರತೆಯಿಂದ ಕರ್ತವ್ಯ ನಿರ್ವಹಿಸಬೇಕು. ಹಿಂದೆ ಸ್ಮಗ್ಲರ್, ಮರಗಳ್ಳರ ತೊಂದರೆ ಇತ್ತು. ಇತ್ತೀಚಿನ ದಿನಗಳಲ್ಲಿ ಮಾನವ ಪ್ರಾಣಿ ಸಂಘರ್ಷದಿಂದ ದೇಶದಲ್ಲಿ 280 ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದರು.

ಪೊಲೀಸ್ ಬ್ಯಾಂಡ್ ವಾದನದೊಂದಿಗೆ ಕುಶಾಲ ತೋಪು ಹಾರಿಸಿ ಹುತಾತ್ಮರಿಗೆ ಗೌರವ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿಧನರಾದ ಕುಟುಂಬಸ್ಥರಿಗೆ ಗೌರವಿಸಿ ಸಹಾಯಧನ ನೀಡಲಾಯಿತು.

ಹಿರಿಯ ಪ್ರಧಾನ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಧೀಶ ಶಿವಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ನವೀನ್, ರವೀಂದ್ರ, ಕೆ.ಪರಮೇಶ್, ಆರ್‌ಎಫ್‌ಒ ದೀಪಾ, ಮಂಜುನಾಥ್, ನವೀನ್ ಕುಮಾರ್, ನರೇಶ್, ಕೆ.ಪಿ.ಸತೀಶ್, ಶ್ರೀನಿವಾಸನಾಯ್ಕ ಇತರರು ಇದ್ದರು.