ಜಿಲ್ಲೆ

ಅರಣ್ಯ ಭೂಮಿ ಭೂಗಳ್ಳರ ಪಾಲು!, ಬರೋಬ್ಬರಿ 897 ಎಕರೆ ಒತ್ತುವರಿ, ನಕಲಿ ದಾಖಲೆ ಸೃಷ್ಟಿಸಿ ಲೂಟಿ

ಚಿಕ್ಕಬಳ್ಳಾಪುರ: ಅಂತರ್ಜಲಮಟ್ಟ ಕುಸಿತ, ಮಳೆಯ ಅಭಾವ, ಕೊಳವೆಬಾವಿ ವೈಫಲ್ಯ ಸೇರಿ ಹಲವು ಸಮಸ್ಯೆಗಳಿಂದ ಕಂಗೆಟ್ಟಿರುವ ಬಯಲುಸೀಮೆ ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆಯ ನಿರಂತರ ಕಾರ್ಯಕ್ರಮಗಳ ನಡುವೆಯೂ ಅರಣ್ಯ ಪ್ರದೇಶದ ಅಕ್ರಮ ಒತ್ತುವರಿ ಅವ್ಯಾಹತವಾಗಿದೆ. ಬರೋಬ್ಬರಿ 897 ಎಕರೆ ಅರಣ್ಯ ಪ್ರದೇಶ ಭೂಗಳ್ಳರ ಪಾಲಾಗಿದೆ!

ಜಿಲ್ಲೆಯಲ್ಲಿ 77,050 ಹೆಕ್ಟೇರ್ ಅರಣ್ಯ ಪ್ರದೇಶ ಇದೆಯಾದರೂ ಸರಾಸರಿ ಲೆಕ್ಕದಲ್ಲಿ ಶೇ.16 ಅರಣ್ಯ ಪ್ರದೇಶ ಕಡಿಮೆ ಇದೆ. ಇದರ ನಡುವೆ 897.40 ಹೆಕ್ಟೇರ್ ಪ್ರದೇಶ ಒತ್ತುವರಿಯಾಗಿರುವುದು ಅರಣ್ಯ ಇಲಾಖೆ ಸರ್ವೇಯಲ್ಲಿ ಬೆಳಕಿಗೆ ಬಂದಿದೆ ಎನ್ನುತ್ತಾರೆ ಚಿಕ್ಕಬಳ್ಳಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಅರಸಲನ್.

ಒಂದೆಡೆ ಅರಣ್ಯ ಜಾಗೃತಿಯ ಭಾಷಣಗಳು ಕೇಳಿಬರುತ್ತಿದ್ದರೆ ಮತ್ತೊಂದೆಡೆ ಭೂಗಳ್ಳರು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಗಿಡ-ಮರಗಳನ್ನು ನೆಲಸಮಗೊಳಿಸಿ ಹಲವು ವರ್ಷಗಳಿಂದ ಅಧೀನದಲ್ಲಿರುವ ಸ್ವಂತ ಭೂಮಿಯಂತೆ ತೋರಿಸುತ್ತಿರುವ ಪ್ರಕರಣಗಳು ಹೆಚ್ಚಾಗಿದೆ ಎನ್ನುವುದು ಇಲಾಖೆಯ ಮಾತು.

ವರ್ಷದಿಂದ ವರ್ಷಕ್ಕೆ ಅರಣ್ಯ ಪ್ರದೇಶ ಕಡಿಮೆಯಾಗುತ್ತಿರುವುದರಿಂದ ಮಳೆಯ ಅಭಾವ ಪ್ರಮಾಣವೂ ಕುಸಿತಗೊಂಡು ಶಾಶ್ವತ ನೀರಾವರಿಗಾಗಿ ಪರಿತಪಿಸುವಂತಾಗಿದೆ, ಹಲವು ಕೆರೆಗಳು ಖಾಲಿ ಮೈದಾನಗಳಾಗಿ ಪರಿವರ್ತನೆಯಾಗಿವೆ. ಇಷ್ಟೆಲ್ಲದರ ನಡುವೆಯೂ ಅರಣ್ಯ ಮತ್ತು ಕೆರೆಗಳ ಅಕ್ರಮ ಒತ್ತುವರಿ, ಅಕ್ರಮ ಮರಳು ಮತ್ತು ಕಲ್ಲು ಗಣಿಗಾರಿಕೆ ರಾಜಾರೋಷವಾಗಿಯೇ ನಡೆಯುತ್ತಿದೆ.

ಗುರುತು ಹಿಡಿಯುವುದೇ ಕಷ್ಟ!: ಅಭಿವೃದ್ಧಿಯ ನೆಪದಲ್ಲಿ ಗ್ರಾಮೀಣ ಭಾಗದಲ್ಲೂ ಭೂ ಪರಿವರ್ತನೆ ಮತ್ತು ನಿವೇಶನ ವಿಂಗಡನೆ ಪ್ರಮಾಣ ಮಿತಿ ಮೀರಿದೆ. ಜತೆಗೆ ರಾಜಕೀಯ ಪ್ರಭಾವ, ಲಂಚ ನೀಡಿ ದಾಖಲೆಗಳನ್ನು ತಿದ್ದಿ, ಭೂಮಿ ಲಪಟಾಯಿಸಿರುವ ವಂಚನೆ ಪ್ರಕರಣಗಳು ಬಹಳಷ್ಟಿದ್ದು, ಅರಣ್ಯ ಪ್ರದೇಶ ಎಂಬುದನ್ನು ಗುರುತು ಹಿಡಿಯುವುದೇ ಕಷ್ಟವಾಗಿರುವಷ್ಟರ ಮಟ್ಟಿಗೆ ಪ್ರಭಾವಿಗಳು ಭೂಮಿ ಪರಿವರ್ತನೆ ಮಾಡಿದ್ದಾರೆ. ಮತ್ತೆ ಅನೇಕರು ಜಾಗವನ್ನು ಸ್ವಾಧೀನದಲ್ಲಿಟ್ಟುಕೊಂಡು ಭೂ ಮಂಜೂರಾತಿಯ ನಿರೀಕ್ಷೆಯಲ್ಲಿದ್ದಾರೆ.

ತಾಲೂಕುವಾರು ಅರಣ್ಯ ಲೂಟಿ: ಶಿಡ್ಲಘಟ್ಟ, ಗೌರಿಬಿದನೂರು ಮತ್ತು ಚಿಕ್ಕಬಳ್ಳಾಪುರ ತಾಲೂಕಿನಲ್ಲಿಯೇ ಹೆಚ್ಚು ಅರಣ್ಯ ಒತ್ತುವರಿಯಾಗಿದೆ. ತೆರವಿಗೆ ಪ್ರತಿವರ್ಷ ಅಧಿಕಾರಿಗಳ ಸಭೆ, ಅಭಿಯಾನಗಳು ದಾಖಲೆಗಳಲ್ಲಿ ನಡೆಯುತ್ತಿವೆಯೇ ಹೊರತು ವಾಸ್ತವವಾಗಿ ಕಾರ್ಯರೂಪಕ್ಕೆ ಬರುತ್ತಿಲ್ಲ. ಕೆಲ ಅಧಿಕಾರಿಗಳು ದಿಟ್ಟ ನಿರ್ಧಾರ ಕೈಗೊಂಡರೂ ಪ್ರಭಾವಿಗಳ ಎದುರು ಕೈಕಟ್ಟಿ ಕೂರಬೇಕಿದೆ, ಇತರ ಇಲಾಖೆಗಳಿಂದ ಅಗತ್ಯ ಸಹಕಾರ ಸಿಗದೆ ತೆರವಿನ ಪ್ರಕ್ರಿಯೆ ಹೇಳಿಕೆಗಷ್ಟೇ ಸೀಮಿತವಾಗಿದೆ.

ಒತ್ತುವರಿ: ಶಿಡ್ಲಘಟ್ಟ 335.32 ಎಕರೆ, ಗೌರಿಬಿದನೂರಿನಲ್ಲಿ 255.45, ಗುಡಿಬಂಡೆಯಲ್ಲಿ 2.10, ಬಾಗೇಪಲ್ಲಿಯಲ್ಲಿ 58.37, ಚಿಂತಾಮಣಿಯಲ್ಲಿ 70.09, ಚಿಕ್ಕಬಳ್ಳಾಪುರದಲ್ಲಿ 176.07 ಎಕರೆ ಅರಣ್ಯ ಪ್ರದೇಶ ಒತ್ತುವರಿಯಾಗಿರುವುದು ಸರ್ವೇಯಲ್ಲಿ ತಿಳಿದುಬಂದಿದೆ.

ಬಗರ್‌ಹುಕುಂ ವರ!: ಅರಣ್ಯ ಪ್ರದೇಶದ ಮೇಲೆ ಕಣ್ಣಿಟ್ಟಿರುವ ಲೂಟಿಕೋರರಿಗೆ ಬಗರ್‌ಹುಕುಂನ ಭೂ ಮಂಜೂರಾತಿ ಮತ್ತು ಸಾಗುವಳಿ ಚೀಟಿ ವಿತರಣೆ ವರವಾಗಿದೆ! ಖರಾಬು ಜಮೀನು ಗುರುತಿಸಿ, ಭೂಮಿ ಒತ್ತುವರಿ ಮಾಡಿಕೊಂಡು ಭೂ ಮಂಜೂರಾತಿ ಪಡೆಯುತ್ತಿದ್ದು ಪ್ರಶ್ನಿಸುವ ಸ್ಥಳೀಯರಿಗೆ ನಕಲಿ ದಾಖಲೆ ತೋರಿಸಿ, ಬೆದರಿಸಿ ಬಾಯಿ ಮುಚ್ಚಿಸಲಾಗುತ್ತಿದೆ.

ತಹಸೀಲ್ದಾರ್ ವರ್ಗಾವಣೆ, ಅಧಿಕಾರಿಗೆ ಬೆದರಿಕೆ!: ಅರಣ್ಯ ಪ್ರದೇಶದಲ್ಲಿ ಭೂಮಿ ಮಂಜೂರಾತಿಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಇತ್ತೀಚಿಗೆ ಜಿಲ್ಲೆಯ ತಹಸೀಲ್ದಾರ್ ಒಬ್ಬರನ್ನು ವರ್ಗಾವಣೆಗೊಳಿಸಲಾಗಿದೆ, ಜತೆಗೆ ನಿರಪೇಕ್ಷಣಾ ಪ್ರಮಾಣ ಪತ್ರ ನೀಡದ ಅರಣ್ಯ ಇಲಾಖೆ ಅಧಿಕಾರಿಗೆ ಪ್ರಭಾವಿಯೊಬ್ಬರು ಎತ್ತಂಗಡಿ ಮಾಡುವುದಾಗಿ ಬೆದರಿಸಿದ್ದಾರೆ. ಇನ್ನು ಅರಣ್ಯದಲ್ಲಿನ ಮರಗಳನ್ನು ಕಡಿದು, ಟ್ರ್ಯಾಕ್ಟರ್‌ನಲ್ಲಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ಗ್ರಾಪಂ ಪಿಡಿಒ ಮಾಲು ವಶಕ್ಕೆ ಪಡೆದುಕೊಂಡಿದ್ದು ರಾಜಕೀಯ ಪ್ರಭಾವಕ್ಕೆ ತಲೆಬಾಗಿ ದಂಡ ವಿಧಿಸಿ ಕೈಬಿಡಲಾಗಿದೆಯೇ ಹೊರತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಮನವಿಗಳು ಕಸದಬುಟ್ಟಿ ಸೇರಿವೆ.

ಅರಣ್ಯ ಪ್ರದೇಶದಲ್ಲಿನ ಮರಗಳನ್ನು ಕಡಿದು ಸಾಗಿಸುತ್ತಿದ್ದವರನ್ನು ಹಿಡಿದುಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ರಾಜಕೀಯ ಪ್ರಭಾವಕ್ಕೆ ಒಳಗಾಗಿ ಪ್ರಕರಣ ಮುಚ್ಚಿ ಹಾಕಲಾಗಿದೆ. ಪ್ರಭಾವಿಗಳ ಕೃಪಕಟಾಕ್ಷದಿಂದ ಕಾಡಿನ ಜಾಗ ಕೃಷಿ ಭೂಮಿಯಾಗಿ ಪರಿವರ್ತನೆಯಾಗಿದೆ. ಹೆಸರು ಹೇಳಲು ಇಚ್ಚಿಸದ ವ್ಯಕ್ತಿ, ಮಂಡಿಕಲ್, ಚಿಕ್ಕಬಳ್ಳಾಪುರ