ಬಾಳೆಹೊನ್ನೂರಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಜನದನಿ ಸಮಾವೇಶವನ್ನು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹಲಗೆ ಬಾರಿಸುವ ಮೂಲಕ ಉದ್ಘಾಟಿಸಿದರು. ಕಲ್ಕುಳಿ ವಿಠ್ಠಲ್ ಹೆಗ್ಡೆ, ಕೆ.ಎಲ್.ಅಶೋಕ್, ನೂರ್ ಶ್ರೀಧರ್, ಗೌಸ್ ಮೊಯಿದ್ದೀನ್ ಇದ್ದರು.  
ಜಿಲ್ಲೆ

ಅರಣ್ಯ ನೀತಿ ಬದಲಾಗದೆ ಮಲೆನಾಡಿಗೆ ಉಳಿಗಾಲವಿಲ್ಲ

ಜಿ. ಗಜೇಂದ್ರ

ಬಾಳೆಹೊನ್ನೂರು: ಮಾರಕ ಪರಿಣಾಮ ಉಂಟು ಮಾಡುವ ಎಲ್ಲಾ ಅರಣ್ಯ ನೀತಿ, ಯೋಜನೆಗಳು ಸಂಪೂರ್ಣ ಬದಲಾಗದೇ ಮಲೆನಾಡಿಗೆ ಉಳಿಗಾಲವಿಲ್ಲ ಎಂದು ಪರಿಸರ ತಜ್ಞ ಕಲ್ಕುಳಿ ವಿಠಲ್ ಹೆಗ್ಡೆ ಹೇಳಿದರು.

ಪಟ್ಟಣದ ಕಡ್ಲೇಮಕ್ಕಿ ಒಕ್ಕಲಿಗರ ಸಮುದಾಯ ಭವನದಲ್ಲಿ ಎದ್ದೇಳು ಕರ್ನಾಟಕ ಸಂಘಟನೆ ಭಾನುವಾರ ಆಯೋಜಿಸಿದ್ದ ಜನ ಸಾಮಾನ್ಯರ ಹಕ್ಕೊತ್ತಾಯಗಳನ್ನು ಜನ ಪ್ರತಿನಿಧಿಗಳ ಮುಂದಿಡುವ ಜನದನಿ ಸಮಾವೇಶದ ಸಮಾರೋಪದಲ್ಲಿ ಅವರು ಮಾತನಾಡಿದರು.
ಅರಣ್ಯ ರಾಷ್ಟ್ರೀಯ ಸಂಪತ್ತಾಗಿದ್ದು ಅದರ ಮೇಲೆ ರಾಜ್ಯ ಸರ್ಕಾರಗಳಿಗೆ ಯಾವುದೇ ಅಧಿಕಾರಗಳಿರುವುದಿಲ್ಲ. ರಾಜ್ಯ ಸರ್ಕಾರಗಳು ಭೂ ಮಂಜೂರಾತಿ ಮಾಡಬಹುದೇ ಹೊರತು ಅದನ್ನು ಡಿನೋಟಿೈ ಮಾಡಲು ಹಕ್ಕಿರುವುದಿಲ್ಲ. ಕಳೆದ ಆರು ದಶಕಗಳಿಂದ ಶರಾವತಿ ಮುಳುಗಡೆಯಾದ ಮೂರನೇ ತಲೆಮಾರಿನವರು ಇಂದಿಗೂ ವಾಸವಾಗಿದ್ದಾರೆ. ಹಿಂದೆ ಇದ್ದ ಸಿದ್ದರಾಮಯ್ಯ ಸರ್ಕಾರವು 59 ಡಿನೋಟಿಫಿಕೇಷನ್‌ಗಳನ್ನು ಮಾಡಿ 990 ಎಕರೆ ಜಾಗಗಳಿಗೆ ಮಂಜೂರಾತಿ ನೀಡಿದ್ದು ಅದಕ್ಕೆ ಉಚ್ಚ ನ್ಯಾಯಾಲಯದಿಂದ ತಾತ್ಕಾಲಿಕ ತಡೆಯಾಜ್ಞೆ ತಂದು ಬದುಕಿಕೊಂಡಿದ್ದಾರೆ ಎಂದರು.
ಮಲೆನಾಡಿನಲ್ಲಿ ಹೀಗೆ ಬದುಕಬೇಕೆಂದು ಕಸ್ತೂರಿ ರಂಗನ್ ವರದಿಯ ಮೂಲಕ ನೀತಿ ರೂಪಿಸಲು ಯಾವುದೇ ನೈತಿಕತೆ ಇಲ್ಲ. ಇಂದಿನ ಪರಿಸರ ನಾಶ, ಜಾಗತಿಕ ತಾಪಮಾನಗಳಿಗೆ ಮೂಲ ಕಾರಣ ಮಲೆನಾಡಿನ ಕಾಡುಗಳಲ್ಲ. ಕಾಡಿನಿಂದಲೇ ಪರಿಸರ ಸಮತೋಲನವಾಗುವುದಿಲ್ಲ. ಭೂಮಿ ಸದೃಢವಾಗಿರಬೇಕಾದರೆ ಅದರ ಮೂರು ಪಟ್ಟಿರುವ ಸಮುದ್ರ ನಿರ್ಮಲವಾಗಿರಬೇಕು. ನಗರ ವಾಸಿಗಳು, ಕಾರ್ಖಾನೆ ಹಾಗೂ ಆಧುನಿಕತೆಯಿಂದ ಸಮುದ್ರ ಕಲುಷಿತಗೊಂಡಿದೆ ಎಂದು ಹೇಳಿದರು.
ಕಸ್ತೂರಿರಂಗನ್ ವರದಿ ಜಾರಿ ಬಗ್ಗೆ ಅರಣ್ಯ ಸಚಿವರು ನೀಡಿದ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿ, ಮಂತ್ರಿಗಳಿಗೆ ಈ ವಿಷಯದ ಕುರಿತು ಯಾವುದೇ ಅಧ್ಯಯನ, ಹೋರಾಟ ಹಾಗೂ ಜನಸಾಮಾನ್ಯರ ಕಷ್ಟದ ಬಗ್ಗೆ ಅರಿವಿಲ್ಲ ಎಂದರು.
ಸಮಾವೇಶ ಉದ್ಘಾಟಿಸಿದ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್, ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿದರು.
ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷ ನೂರ್ ಶ್ರೀಧರ್, ಉಪಾಧ್ಯಕ್ಷ ಗೌಸ್ ಮೊಯಿದ್ದೀನ್, ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ.ಎಲ್.ಅಶೋಕ್ , ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರೆಗೋಡು, ಮುಖಂಡ ತಾರಾ ರಾವ್, ರಾಮುಕೌಳಿ, ಕಾಫಿ ಬೆಳೆಗಾರ ಎಂ.ಎಸ್.ಚೆನ್ನಕೇಶವ ಗೌಡ, ಸುರೇಶ್ ಭಟ್, ಮರಿಯಪ್ಪ, ರಾಮು ಇತರರಿದ್ದರು. ಕಣದಮನೆ ಜಗದೀಶ್ ಹೋರಾಟ ಗೀತೆಗಳನ್ನು ಹಾಡಿದರು.