ಗೋಣಿಕೊಪ್ಪಲು: ಅರಣ್ಯ ಇಲಾಖೆಯ ಕೆಲವು ಕಾನೂನಾತ್ಮಕ ಪ್ರಕ್ರಿಯೆಗಳಿಂದ ಆತಂಕಗೊಂಡಿರುವ ಪೊನ್ನಂಪೇಟೆ ತಾಲೂಕಿನ ಕೆ.ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ತೂರು ಕೊಲ್ಲಿ ಹಾಡಿಯ ನಿವಾಸಿಗಳನ್ನು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರು ಸೋಮವಾರ ಭೇಟಿ ಮಾಡಿ ಸಮಸ್ಯೆ ಆಲಿಸಿದರು.
ತಾವು ನೆಲೆ ಕಂಡುಕೊಂಡಿರುವ ನೆಲದ ಹಕ್ಕನ್ನು ಕಳೆದುಕೊಳ್ಳುವ ಕುರಿತು ಹಾಡಿ ನಿವಾಸಿಗಳು ಶಾಸಕರ ಬಳಿ ತೋಡಿಕೊಂಡರು.
ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ಈಗ ಉಂಟಾಗಿರುವ ಸಮಸ್ಯೆಯ ಕುರಿತು ಸರ್ಕಾರ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ, ಅರಣ್ಯ ಇಲಾಖೆಗೂ ಮಾನವೀಯತೆ ತೋರಲು ಸೂಚಿಸಲಾಗಿದೆ. ನಿವಾಸಿಗಳು ಭಯಪಡುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದರು.
ಸರ್ಕಾರದ ಮಟ್ಟದಲ್ಲಿ ಈ ಸಮಸ್ಯೆ ಇತ್ಯರ್ಥವಾಗುವವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಅರಣ್ಯ ಇಲಾಖೆಗೆ ಸೂಚಿಸಲಾಗಿದೆ. ಅರಣ್ಯ ನಿವಾಸಿಗಳು ತಾವು ಈಗ ವಾಸಿಸುತ್ತಿರುವ ವಿವಾದಿತ ಜಾಗದಲ್ಲಿ ಯಾವುದೇ ರೀತಿಯ ಹೊಸ ನಿರ್ಮಾಣ ಕಾರ್ಯಕ್ಕೆ ಮುಂದಾಗಬಾರದು. ಹೊರಗಿನವರ ಪ್ರವೇಶದ ಬಗ್ಗೆಯೂ ಜಾಗರೂಕರಾಗಿರುವಂತೆ ನಿವಾಸಿಗಳಿಗೆ ತಿಳಿಸಿದರು.
ಅರಣ್ಯ ನಿವಾಸಿಗಳ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ಅತಿ ಶೀಘ್ರದಲ್ಲಿ ಸೂಕ್ತ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದರು.
ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ, ಕೆ.ಬಾಡಗ ಗ್ರಾಮ ಪಂಚಾಯಿತಿ ಅಧ್ಯಕ್ಷ ರಿತೀಶ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಪೊನ್ನಂಪೇಟೆ ತಹಸೀಲ್ದಾರ್ ಮೋಹನ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಚಿಮ್ಮಣ್ಣಮಾಡ ರವಿ, ಕಟ್ಟಿ ಕಾರ್ಯಪ್ಪ, ಪಲ್ವಿನ್ ಪೂಣಚ್ಚ, ಅಜ್ಜಿಕುಟ್ಟಿರ ಗಿರೀಶ್, ಅರಣ್ಯ, ಪೊಲೀಸ್, ಐಟಿಡಿಪಿ ಅಧಿಕಾರಿಗಳು, ಹಾಡಿ ಮುಖಂಡರು ಮತ್ತಿತರ ಪ್ರಮುಖರು ಹಾಜರಿದ್ದರು.