ಜಿಲ್ಲೆ

ಅರಣ್ಯ, ಜಲ ಸಂರಕ್ಷಣೆ ನಿತ್ಯವೂ ನಡೆಯಲಿ:ಡಾ.ವಿಜಯ್ ಅಂಗಡಿ ಕರೆ

ಹಾಸನ: ಪ್ರತಿನಿತ್ಯವೂ ಪ್ರತಿಯೊಬ್ಬರು ನೀರಿನ ಮಿತಬಳಕೆ, ಪುನರ್ಬಳಕೆಯ ಕ್ರಮಗಳನ್ನು ಅನುಸರಿಸಬೇಕು. ಕೈ ತೊಳೆಯಲು, ಸ್ನಾನಕ್ಕೆ, ಬಟ್ಟೆ ತೊಳೆಯಲು ಅತೀ ಹೆಚ್ಚು ನೀರಿನ ಬಳಕೆ ಒಳ್ಳೆಯದಲ್ಲ. ಬಳಸಿದ ನೀರು ಮರುಬಳಕೆ ಆಗಬೇಕು. ನೀರನ್ನು ಪೂಜನೀಯ ಭಾವದಿಂದ ಕಾಣಬೇಕು. ಆರೋಗ್ಯಕ್ಕೆ ಹಿತವಾಗಿರುವ ಮಳೆ ನೀರನ್ನು ಸಂರಕ್ಷಿಸಬೇಕು ಎಂದು ಹಾಸನ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥರಾದ ಡಾ.ವಿಜಯ್ ಅಂಗಡಿ ಅವರು ಕರೆ ನೀಡಿದರು.
ಹಾಸನದ ಸರ್ಕಾರಿ ವಿಜ್ಙಾನ ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಅರಣ್ಯ ದಿನ ಮತ್ತು ವಿಶ್ವ ಜಲ ದಿನದ ನಿಮಿತ್ತ ಪದವಿ ವಿದ್ಯಾರ್ಥಿಗಳಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಯುವಕರು ಕೃಷಿಯನ್ನು ಕೈ ಬಿಡಬಾರದು. ಆಸಕ್ತಿಯಿಂದ ಕೃಷಿಯಲ್ಲಿ ತೊಡಗಿಸಿಕೊಂಡಾಗ ಸ್ಥಿತಿವಂತಿಕೆಯು ಬರುತ್ತದೆ. ಕೃಷಿ ವೃತ್ತಿಯು ಪರಿಸರದ ಒಳಿತಿಗೆ ಸಮಾಜದ ಹಿತಕ್ಕೆ ಪೂರಕವಾದುದು ಎಂದು ಕಿವಿ ಮಾತು ಹೇಳಿದರು.
ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಧರ್ಮೇಂದ್ರ ಅವರು ಮಾತನಾಡಿ, ಪ್ರತಿ ಜೀವಿಗೆ ಆಮ್ಲಜನಕದ ಅಗತ್ಯತೆ ಇದೆ. ಅರಣ್ಯಗಳು ಆಮ್ಲಜನಕದ ಕಾರ್ಖಾನೆಗಳು, 2012ರಲ್ಲಿ ವಿಶ್ವಸಂಸ್ಥೆಯು ಅರಣ್ಯ ಸಂರಕ್ಷಣೆಯ ಮಹತ್ವವನ್ನು ತಿಳಿಸಲು, ಅರಿಯಲು ಮಾರ್ಚ್ 21ರಂದು ವಿಶ್ವ ಅರಣ್ಯ ದಿನವನ್ನಾಗಿ ಘೋಷಿಸಿತು. ಈ ವರ್ಷದ ವಿಶ್ವ ಅರಣ್ಯ ದಿನದ ಉದ್ದೇಶ ಅರಣ್ಯ ಮತ್ತು ನಾವೀನ್ಯತೆ. ಇದು ಸುರಕ್ಷಿತ ಸಮಾಜಕ್ಕೆ ಪರಿಹಾರ. ಹಾಗೆಯೇ ಬಹುತೇಕ ಜೀವಿಗಳ ಜೀವವೇ ನೀರು. ನೀರಿಲ್ಲದೇ ಜೀವವೇ ಇಲ್ಲ. ಈ ವರ್ಷದ ವಿಶ್ವ ಜಲ ದಿನದ ಉದ್ದೇಶ- ಶಾಂತಿಗಾಗಿ ನೀರು. ನೀರಿನ ಕೊರತೆಯಾದಾಗ ಕಲಹಗಳು, ಕಷ್ಟಗಳು ಎದುರಾಗುತ್ತವೆ. ಈ ಹಿನ್ನೆಲೆಯಲ್ಲಿ ನೀರಿನಿಂದ ನಿರಾಳವಾಗಿರಿ ಎಂಬ ಘೋಷವಾಕ್ಯದೊಂದಿಗೆ ವಿಶ್ವ ಜಲ ದಿನವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ವಕೀಲರು, ಪರಿಸರ ಚಿಂತಕರಾದ ಎಚ್.ಎ. ಕಿಶೋರ್ ಕುಮಾರ್ ಅವರು ಮಾತನಾಡಿ, ಕಾಡು ಇದ್ದರೆ ನಾಡು, ಪಶ್ಚಿಮ ಘಟ್ಟಗಳಿಂದ, ಹಿಮಾಲಯಗಳಿಂದ ಮಳೆ ಸೃಷ್ಟಿಯಾಗಿ ನಾಡಿಗೆ ನೀರು ಸಿಗುತ್ತಿದೆ. ಪಶ್ಚಿಮ ಘಟ್ಟಗಳು ಸುಮಾರು 1200 ಕಿ.ಮೀ ದೂರದವರೆಗೂ ವಿಸ್ತರಿಸಿದ್ದು, 164000 ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಪಶ್ಚಿಮ ಘಟ್ಟಗಳಲ್ಲಿ 58 ನದಿಗಳು ಹುಟ್ಟುತ್ತವೆ. 47 ನದಿಗಳು ಪೂರ್ವಕ್ಕೆ ಹರಿಯುತ್ತವೆ. ಇವುಗಳ ಸಂರಕ್ಷಣೆಯೂ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಕಾಡುಗಳ ಸಂರಕ್ಷಣೆಯ ಕಾರ್ಯಗಳು ಹೆಚ್ಚೆಚ್ಚು ಅನುಷ್ಠಾನ ಆಗಬೇಕು. ಕೃಷಿಯಲ್ಲಿ ವಿಷ ಬಳಕೆಗೆ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಕೆಡಕುಗಳು ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಂಶುಪಾಲ ಎಸ್.ಎಚ್. ಗಂಗೇಗೌಡ, ಕಾಲೇಜಿನ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಸಿ.ಎಸ್.ಮೋಹನ್, ಡಾ.ಚೂಡಾಮಣಿ, ಸಫಾ ಸಕೂರ್ ಮತ್ತು ಯದುನಂದನ್ ಪಾಲ್ಗೊಂಡಿದ್ದರು.