ಕಾನಹೊಸಹಳ್ಳಿ: ಅರಣ್ಯ ಮತ್ತು ಮರ ಅಧಾರಿತ ಹಾಗೂ ಬಯಲುಸೀಮೆಗೆ ಯೋಗ್ಯವಾದ ಬೆಳವಲ, ನೇರಳೆ, ಹುಣಸೆ, ಸೀತಾಫಲ ಹಣ್ಣುಗಳನ್ನು ಬೆಳೆಸಲು ಅದ್ಯತೆ ನೀಡುವ ಮೂಲಕ ಉತ್ತಮ ಲಾಭ ಪಡೆಯಲು ಸಾಧ್ಯ ಎಂದು ಸಾವಯವ ಕೃಷಿಕ ಎಚ್.ವಿ.ಸಜ್ಜನ್ ತಿಳಿಸಿದರು.
ಹುಲಿಕೆರೆಯ ಸಜ್ಜನ್ ಕೃಷಿ ಆಶ್ರಮದಲ್ಲಿ ಹಸಿರಿನೊಂದಿಗೆ ಮಾತುಕತೆ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಹಣ್ಣುಗಳ ಗಿಡಗಳನ್ನು ಹೊಲದಲ್ಲಿ ಯೋಜನಾಬದ್ಧವಾಗಿ ಸಂಯೋಜನೆ ಮಾಡುವ ಮೂಲಕ ಸುಸ್ಥಿರ ಕೃಷಿ ಮಾಡಬೇಕು. ಅರಣ್ಯ ಕೃಷಿಯಿಂದ ಸಾಕಷ್ಟು ಲಾಭಗಳಿವೆ ಎಂದರು.
ಬರ ನಿರೋಧಕ ಹಣ್ಣಿನ ಮರಗಳನ್ನು ಬೆಳೆಸಿ, ಅವುಗಳ ಫಲದಿಂದ ಮೌಲವರ್ಧನೆ ಮಾಡುವುದನ್ನು ಕರಗತ ಮಾಡಿಕೊಳ್ಳಬೇಕು. ರೈತರು ಮಳೆಗಾಗಿ ಸದಾ ಮುಗಿಲು ನೋಡಬಾರದು. ಮಳೆ ಬಂದಾಗ ನೀರನ್ನು ಸಂಗ್ರಹಿಸಿ, ಹೊಲದಲ್ಲಿ ಇಂಗಿಸಿಕೊಳ್ಳಬೇಕು. ಕನಿಷ್ಠ ನೀರು ಬೇಡುವ ಹೆಚ್ಚು ಫಲ ನೀಡುವ ಕಾಡು ಜಾತಿಯ ಹಣ್ಣಿನ ಮರ-ಗಿಡಗಳನ್ನು ಬೆಳೆಸಬೇಕೆಂದು ಎಚ್.ವಿ.ಸಜ್ಜನ್ ಸಲಹೆ ನೀಡಿದರು.
ಕೃಷಿ ಆಶ್ರಮದ ಸಂಚಾಲಕ ಹಾಗೂ ಎಂ.ಎಸ್.ರಾಮಯ್ಯ ತಾಂತ್ರಿಕ ಕಾಲೇಜಿನ ಪ್ರಾಧ್ಯಾಪಕ ಡಾ.ಬಿ.ಎಂ.ನಾಗಭೂಷಣ ಮಾತನಾಡಿ, ಪ್ರತಿ ಕೃಷಿಕ ಅನುಭವದ ಗಣಿ ಅಗಿದ್ದು, ಅವರ ಗೆಲವಿನ ಹಿಂದೆ ಸಾಲು ಸಾಲು ಸೋಲುಗಳಿರುತ್ತವೆ. ಅಂತಹ ಅನುಭವಗಳೇ ಮತ್ತೊಬ್ಬರಿಗೆ ಮಾರ್ಗದರ್ಶನ ನೀಡುತ್ತವೆ. ಎಲ್ಲ ಕೃಷಿಕರು ಮುಕ್ತವಾಗಿ ಮಾತನಾಡಬೇಕು. ಕೃಷಿ ಸಮಸ್ಯೆಗಳನ್ನು ಪರಿಹರಿಸಲು ವೇದಿಕೆ ಕಲ್ಪಿಸುವ ಉದ್ದೇಶವೇ ಕೃಷಿ ಆಶ್ರಮದ ಚಿಂತನೆಯಾಗಿದೆ ಎಂದರು.
ನಾಡಿನ ವಿವಿಧ ಭಾಗದಿಂದ ಬಂದಿದ್ದ ರೈತರಿಗೆ ಗೋಶಾಲೆ, ಸೌರಶಾಖ ಪೆಟ್ಟಿಗೆ, ವಿಭೂತಿ ಘಟಕ, ವಿವಿಧ ಬೆಳೆ, ಜೀವಾಮೃತ, ಗೋ ಕೃಪಾಮೃತ, ಜೀವಾಮೃತ, ಸಸ್ಯ ಹಾಗೂ ಪ್ರಾಣಿ ಜನ್ಯ ದ್ರಾವಣಗಳ ತಯಾರಿಕೆ ಕುರಿತು ಮಾಹಿತಿ ನೀಡಲಾಯಿತು.
ಮಲ್ಲಿಕಾರ್ಜುನ ಹೊಸಪಾಳ್ಯ, ಸ್ವರೂಪ್ ಕೊಟ್ಟೂರು, ಪೂಜಾರಹಳ್ಳಿ ತಿಪ್ಪೇಸ್ವಾಮಿ, ಶಶಿಧರ ಗುರೂಜಿ, ರವಿತೇಜ, ವಸಂತ್ ಸಜ್ಜನ್, ಹೊಯ್ಸಳ ಅಪ್ಪಾಜಿ, ದಿವಾಕರಗೌಡ, ರವಿ, ಜಬೀವುಲ್ಲಾ, ಕೊಂಚಿ ಶಿವರುದ್ರಪ್ಪ, ಹುಲಿಕೆರೆ ಶರಣಪ್ಪ, ಬಸಯ್ಯಸ್ವಾಮಿ, ಅನ್ನಪೂರ್ಣಮ್ಮ, ಬಸವರಾಜ್ ಕನಕಗಿರಿ, ಅರವಿಂದ್, ಮೇಘರಾಜ್ ಇದ್ದರು.