ಮೈಸೂರು: ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಅಂಗವಾಗಿ ಅರಣ್ಯ ಇಲಾಖೆಯಿಂದ ನಗರದಲ್ಲಿ ಭಾನುವಾರ ಹುತಾತ್ಮರ ಸ್ಮಾರಕಕ್ಕೆ ಗಣ್ಯರಿಂದ ಪುಷ್ಪ ನಮನ ಸಲ್ಲಿಸಲಾಯಿತು.
ಅಶೋಕಪುರಂನಲ್ಲಿರುವ ಅರಣ್ಯ ಭವನ ಆವರಣದ ಲೇಟ್ ವೆಂಕಟಸ್ವಾಮಿ ಉದ್ಯಾನದಲ್ಲಿ 1966ರಿಂದ 2022 ರವರೆಗೆ ಕರ್ತವ್ಯದ ವೇಳೆ ಹುತಾತ್ಮರಾದ ರಾಜ್ಯದ 54 ಅರಣ್ಯ ಅಧಿಕಾರಿ, ಸಿಬ್ಬಂದಿ ಆತ್ಮಕ್ಕೆ ಶಾಂತಿ ಕೋರಲಾಯಿತು. ಪೊಲೀಸ್ ಬ್ಯಾಂಡ್‌ನಿಂದ ರಾಷ್ಟ್ರಗೀತೆ ನುಡಿಸಿದ್ದಲ್ಲದೇ ಗಾಳಿಯಲ್ಲಿ ಮೂರು ಸುತ್ತ ವಾಲಿ ಗುಂಡು ಹಾರಿಸುವ ಮೂಲಕ ಹುತಾತ್ಮರಿಗೆ ಗೌರವ ಸಲ್ಲಿಸಲಾಯಿತು.
ಪುಷ್ಪಗುಚ್ಚ ಇರಿಸಿ ಹುತಾತ್ಮರಿಗೆ ನಮನ ಸಲ್ಲಿಸಿದ ಬಳಿಕ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಎಪಿಸಿಸಿಎಫ್ ಜಗತ್‌ರಾಮ್ ಅವರು, ಪೊಲೀಸರಾಗಲೀ ಅಥವಾ ಅರಣ್ಯ ಸಿಬ್ಬಂದಿಯಾಗಲಿ ಹುತಾತ್ಮರಾದಾಗ ಅವರೆಲ್ಲ ಸೇವೆ, ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಸೀಮಿತಿ ಸಂಖ್ಯೆಯಲ್ಲಿದ್ದರೂ ಮಹತ್ವದ ಅರಣ್ಯ ಸಂಪತ್ತನ್ನು ಸಂರಕ್ಷಿಸುವ ಹೊಣೆಗಾರಿಕೆೊಂಂದಿಗೆ ಅರಣ್ಯ ಕಾವಲುಗಾರರ ಸೇವೆ ಶ್ರೇಷ್ಠ ಎಂದು ಗುಣಗಾನ ಮಾಡಿದರು.
ಹಸಿರು ಸೇನೆ ಎನಿಸಿರುವ ಅರಣ್ಯ ಸಿಬ್ಬಂದಿ ಕಾರ್ಯ ಶ್ಲಾಘನೀಯ. ಕರ್ತವ್ಯ ವೇಳೆ ಇದುವರೆಗೂ ತಮ್ಮ ಜೀವವನ್ನೇ ತ್ಯಾಗ ಮಾಡಿರುವ ಸಿಬ್ಬಂದಿ ಸೇವೆಯನ್ನು ಸ್ಮರಿಸಿ, ಗೌರವಿಸಬೇಕು. ಹಾಗೆಯೇ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೊರೆಯಬೇಕು. ಸಿಬ್ಬಂದಿ ಕರ್ತವ್ಯ ನಿಷ್ಠೆ ಮೆರೆಯಬೇಕು ಎಂದು ಹೇಳಿದರು.
ಡಿಸಿಎಫ್ ಕಮಲಾ ವಿ.ಕರಿಕಾಳನ್ ಅವರು 56 ವರ್ಷಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕರ್ತವ್ಯದ ವೇಳೆ ಮಡಿದ ಅರಣ್ಯ ಇಲಾಖೆಯ 54 ಸಿಬ್ಬಂದಿ ಹೆಸರನ್ನು ಓದಿ ಮಡಿದರವ ಆತ್ಮಕ್ಕೆ ಶಾಂತಿ ಕೋರಿದರಲ್ಲದೇ. ಕುಟುಂಬದವರಿಗೆ ಸಾಂತ್ವದ ಮಾತುಗಳನ್ನಾಡಿದರು.
ಮೈಸೂರು ವೃತ್ತದ ಮುಖ್ಯ ಅರಣ್ಯಾಧಿಕಾರಿ ಡಾ.ಮಾಲತಿ ಪ್ರಿಯಾ, ಡಿಸಿಎಫ್‌ಗಳಾದ ಕರಿಕಾಳನ್, ಶ್ರೀಧರ್, ಪ್ರಸನ್ನಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಸಮರ್ಪಿಸಿ ಗೌರವ ಸೂಚಿಸಿದರು.