ಜಿಲ್ಲೆ

ಅರಣ್ಯ ಇಲಾಖೆಯ ಗಣಿಗಡಿಗಳ ಪರಿಶೀಲನೆ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಕರ್ನಾಟಕ-ಆಂಧ್ರಪ್ರದೇಶ ರಾಜ್ಯಗಳ ಗಡಿ ಅರಣ್ಯ ಪ್ರದೇಶದಲ್ಲಿ 7ಬಿ-1 ಪ್ರವರ್ಗದ ಗಣಿಗಾರಿಕೆ ಗುತ್ತಿಗೆ ವಿಭಜನೆ ಪ್ರಕ್ರಿಯೆಯನ್ನು ಸಿಇಸಿ ತಂಡದ ಅಧಿಕಾರಿಗಳು ಜು. 4 ರಂದು ಪರಿಶೀಲಿಸಲಿದ್ದಾರೆ. ಜು. 5ರಂದು ಗಣಿ ಗುತ್ತಿಗೆದಾರರೊಂದಿಗೆ ಸಭೆ ನಡೆಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ, ಭೂದಾಖಲೆ, ಅರಣ್ಯ ಮತ್ತು ಗಣಿ ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸಿದ್ಧತೆಯಲ್ಲಿದ್ದಾರೆ. ಜೂ.27ರಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಗಣಿ ಗುತ್ತಿಗೆ ಪಡೆದವರಿಗೆ ಪತ್ರ ಬರೆಯಲಾಗಿತ್ತು. ಅಂತರರಾಜ್ಯ ಗಡಿಯಲ್ಲಿ ಬರುತ್ತಿರುವ ಬಿ-1 ದರ್ಜೆಯ 7 ಗಣಿಗಳ ಕುರಿತು ಸುರತ್ಕಲ್ ಎನ್.ಐ.ಟಿ.ಕೆ.ಯಲ್ಲಿ ಆಂಧ್ರಪ್ರದೇಶ, ಕರ್ನಾಟಕ ಅರಣ್ಯ ಇಲಾಖೆ, ಗಣಿ ಭೂವಿಜ್ಞಾನ ಇಲಾಖೆ, ಭೂದಾಖಲೆ ಇಲಾಖೆ ಅಧಿಕಾರಿಗಳು ಸಭೆ ನಡೆಸಿ ಸ್ಥಳ ಪರಿಶೀಲನೆಗೆ ಸಂಬಂಧಿಸಿದ ಅಧಿಕಾರಿಗಳು ಹಾಜರಾಗುವಂತೆ ತಿಳಿಸಿದ್ದಾರೆ. ಜು. 4 ರಂದು ಸರಿಯಾದ ದಾಖಲೆಗಳೊಂದಿಗೆ ಗಣಿಗಳ ಗುತ್ತಿಗೆ ಪಡೆದವರು ಹಾಗೂ ಗುತ್ತಿಗೆ ಪಡೆದಿದ್ದಲ್ಲಿ ಪೂರ್ವ ಗುತ್ತಿಗೆ ನಕ್ಷೆಗಳು ಮತ್ತು ದಾಖಲೆಗಳೊಂದಿಗೆ ಗಣಿ ತಪಾಸಣೆ ಸ್ಥಳಕ್ಕೆ ಹಾಜರಾಗಲು ತಿಳಿಸಲಾಗಿದೆ. ಜು.5ರಂದು ಸಂಡೂರು ದೋಣಿಮಲೈನಿ ಎನ್.ಎಂ.ಡಿ.ಸಿ ಅತಿಥಿ ಗೃಹದಲ್ಲಿ ಸಿಇಸಿ ಅಧಿಕಾರಿಗಳು ಸಭೆ ನಡೆಸಲಿದ್ದಾರೆ. ಈ ಸಭೆಗೆ ಗಣಿ ಗುತ್ತಿಗೆದಾರರು ಕಡ್ಡಾಯವಾಗಿ ಹಾಜರಾಗಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಗಣಿಗಾರಿಕೆ ಸಮೀಕ್ಷೆ ಮತ್ತಿತರ ತೊಂದರೆಗಳಿದ್ದಲ್ಲಿ ಸಭೆಯಲ್ಲಿ ಭಾಗವಹಿಸಿ ಮನವಿ ಸಲ್ಲಿಸುವಂತೆ ಪತ್ರದಲ್ಲಿ ಸೂಚಿಸಲಾಗಿದೆ. ಈಗಾಗಲೇ ನಡೆದ ಸಭೆಯಲ್ಲಿ ಅಧಿಕಾರಿಗಳು ಗಣಿ ಗುತ್ತಿಗೆದಾರರಿಂದ ದಾಖಲೆಗಳನ್ನು ಸಂಗ್ರಹಿಸಿಸಲಾಗಿದೆ. ಸಿಇಸಿ ಏಳು ಗಣಿಗಳನ್ನು ಎ, ಬಿ ಮತ್ತು ಸಿ ವರ್ಗಗಳಾಗಿ ವರ್ಗೀಕರಿಸಿ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದೆ.