ರೋಣ: ತಾಲೂಕಿನ ಅರಣ್ಯ ರಕ್ಷಕರ ವಸತಿಗೃಹ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಆಹ್ವಾನವಿದ್ದರೂ ಸೌಜನ್ಯಕ್ಕೂ ಆಗಮಿಸದ ಅರಣ್ಯ ಇಲಾಖೆಯ ಸಿಬ್ಬಂದಿಯ ಬೇಜವಾಬ್ದಾರಿತನಕ್ಕೆ ಜಿಪಂ ಹಾಗೂ ತಾಪಂ ಸದಸ್ಯರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಕೆಆರ್ಐಡಿಎಲ್ನಿಂದ ತಾಲೂಕಿನ ಬೆಳವಣಿಕಿ ಗ್ರಾಮದಲ್ಲಿ ಸೋಮವಾರ ಅರಣ್ಯ ಸಂರಕ್ಷಕರ ಗೃಹ ನಿರ್ಮಾಣ ಕಾರ್ಯದ ಭೂಮಿ ಪೂಜೆ ಕಾರ್ಯಕ್ರಮ ಏರ್ಪಡಿಲಾಗಿತ್ತು. ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಹಾಗೂ ಉದ್ಘಾಟನಾ ನಾಮಫಲಕದಲ್ಲಿ ಅರಣ್ಯ ಇಲಾಖೆಯ ಮುಖ್ಯ ಅರಣ್ಯ ಸಂರಕ್ಷಕ ಮಂಜುನಾಥ ಚವ್ಹಾಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಆರ್.ಎನ್. ನಾಗಶೆಟ್ಟಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾಧಿಕಾರಿ ಮನೋಹರ ಚಿತ್ತವಾಡಗಿ, ಕಾರ್ಯಪಾಲಕ ಇಂಜಿನಿಯರ್ ಪಿ.ಕೆ. ಮಲ್ಲಿಕಾರ್ಜುನಸ್ವಾಮಿ, ವಲಯ ಅರಣ್ಯಾಧಿಕಾರಿ ಪ್ರಕಾಶ ಪವಾಡಿಗೌಡ್ರ ಅವರ ಹೆಸರು ನಮೂದಿಸಿ, ಅವರಿಗೆ ಈ ಬಗ್ಗೆ ಸೂಚಿಸಿದ್ದರೂ ಕಾರ್ಯಕ್ರಮಕ್ಕೆ ಬಂದಿಲ್ಲ ಎಂದು ಬೆಳವಣಿಕಿ ಜಿಪಂ ಸದಸ್ಯ ಶಿವಕುಮಾರ ನೀಲಗುಂದ, ಬೆಳವಣಿಕಿ ತಾಪಂ ಸದಸ್ಯ ವಿರೂಪಾಕ್ಷಗೌಡ ಪಾಟೀಲ, ಯಾವಗಲ್ ತಾಪಂ ಸದಸ್ಯೆ ಹೇಮಾವತಿ ಕಡದಳ್ಳಿ ಆಕ್ರೋಶ ವ್ಯಕ್ತಪಡಿಸಿದರು. ಜಿಪಂ ಸದಸ್ಯ ಶಿವಕುಮಾರ ನೀಲಗುಂದ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಡಿಒ ಸೇರಿ ಅನೇಕ ಸಿಬ್ಬಂದಿಗಳ ವಸತಿ ಗೃಹಗಳ ನಿರ್ವಣಕ್ಕೆ ಸಾಕಷ್ಟು ಬೇಡಿಕೆಯಿದ್ದರೂ ವಸತಿ ಗೃಹಗಳು ನಿರ್ವಣವಾಗುತ್ತಿಲ್ಲ. ಆದರೆ, ನಮ್ಮ ಸರ್ಕಾರ ಅರಣ್ಯ ಇಲಾಖೆಯ ಸಿಬ್ಬಂದಿಯ ಅನುಕೂಲಕ್ಕಾಗಿ ವಿಶೇಷ ಮುತುವರ್ಜಿ ವಹಿಸಿ ವಸತಿ ಗೃಹಗಳನ್ನು ಮಂಜೂರು ಮಾಡಿಸಿಕೊಂಡು ಬಂದಿದ್ದರೂ ಭೂಮಿಪೂಜೆ ಕಾರ್ಯಕ್ರಮಕ್ಕೆ ಆಗಮಿಸದೆ ಉದ್ದಟತನ ಪ್ರದರ್ಶಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಗ್ರಾಪಂ ಅಧ್ಯಕ್ಷ ಹಣಮಂತಪ್ಪ ಸೈದಾಪೂರ, ಶರಣಪ್ಪ ಹದ್ಲಿ, ಶಿವಪ್ಪ ಹಾಲಭಾವಿ ಇತರರಿದ್ದರು.