ಆನೆ ದಾಳಿಯಿಂದ ಹಾಸಿಗೆ ಮೂಳೆಮುರಿತಕ್ಕೊಳಗಾಗಿರುವ ನಾಗೇಶ್ ಅವರ ಆರೋಗ್ಯವನ್ನು ಆರ್‌ಎಫ್‌ಒ ಮಂಜುನಾಥ್ ವಿಚಾರಿಸಿದರು. 
ಜಿಲ್ಲೆ

ಅರಣ್ಯ ಇಲಾಖೆ ವಿರುದ್ಧ ಆದಿವಾಸಿಗಳ ಆಕ್ರೋಶ

ಗುಂಡ್ಲುಪೇಟೆ: ಬಹಿರ್ದೆಸೆಗೆಂದು ಮನೆಯಿಂದ ಹೊರಬಂದ ಸಂದರ್ಭ ಆನೆ ದಾಳಿಯಿಂದ ಬೆನ್ನು ಮೂಳೆ ಮುರಿದು ಹಾಸಿಗೆ ಹಿಡಿದಿರುವ ಮೇಲುಕಾಮನಹಳ್ಳಿ ಹಾಡಿ ನಿವಾಸಿ ನಾಗೇಶ್‌ಗೆ ಅರಣ್ಯ ಇಲಾಖೆಯಿಂದ ಯಾವುದೇ ನೆರವು ನೀಡಿಲ್ಲ ಎಂದು ಆದಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೋಪಾಲಸ್ವಾಮಿಬೆಟ್ಟ ವಲಯದ ಕಚೇರಿ ಮೇಲುಕಾಮನಹಳ್ಳಿಯಿಂದ ಹೂಗಳತೆಯಲ್ಲಿದೆ. ಘಟನೆ ನಡೆದಾಗ ಯಾವುದೇ ಅಧಿಕಾರಿ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾನವೀತೆ ತೋರಲಿಲ್ಲ. 108 ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದು, ಮೂಳೆ ಮುರಿತದಿಂದ ಕಾಲು ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದಿದ್ದಾರೆ. ಹೆಚ್ಚಿನ ಚಿಕಿತ್ಸೆ ಕೊಡಿಸಲು ಹಣವಿಲ್ಲದಂತಾಗಿದ್ದು ಸಹಾಯ ಮಾಡುವಂತೆ ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ ಎಂದು ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.

ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವಾಗ ಆನೆ ದಾಳಿ ನಡೆಸಿ ಗಾಯಗೊಳಿಸಿತ್ತು. ಆದರೆ, ಎರಡು ದಿನಗಳ ನಂತರ ವಿಷಯ ತಿಳಿದಿದ್ದು ಆಸ್ಪತ್ರೆಗೆ ತೆರಳಿ ಮಾಹಿತಿ ಪಡೆಯಲಾಗಿದೆ. ಅಲ್ಲದೆ ಅಗತ್ಯ ಚಿಕಿತ್ಸೆ ಕೊಡಿಸುತ್ತಿದ್ದು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಗೋಪಾಲಸ್ವಾಮಿಬೆಟ್ಟ ವಲಯದ ಆರ್‌ಎಫ್‌ಒ ಮಂಜುನಾಥ್ ‘ವಿಜಯವಾಣಿ’ಗೆ ತಿಳಿಸಿದರು.