ಗುಂಡ್ಲುಪೇಟೆ: ಜಮೀನಿನಲ್ಲಿ ಬೆಳೆದಿರುವ ಮರಗಳನ್ನು ಕಡಿಯಲು ಅನುಮತಿ ನೀಡಲು ಅರಣ್ಯ ಇಲಾಖೆ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆಂದು ಆರೋಪಿಸಿ ತಾಲೂಕಿನ ಅಂಕಹಳ್ಳಿ ಗ್ರಾಮದ ಉಮೇಶ್(53) ಎಸಿಎಫ್ ಕಚೇರಿಯಲ್ಲಿ ಬುಧವಾರ ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದರು.
ಇದರಿಂದ ಕೆಲಕಾಲ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದರು. ಸದ್ಯ ಉಮೇಶ್ ಪ್ರಾಣಾಪಾಯದಿಂದ ಪಾರಾಗಿದ್ದು, ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಮ್ಮ ಜಮೀನಿನಲ್ಲಿ ಬೆಳೆದಿದ್ದ ಮರಗಳನ್ನು ಕಡಿಯಲು ಲೈಸೆನ್ಸ್ ಕೋರಿ ಉಮೇಶ್ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಬುಧವಾರ ಎಸಿಎಫ್ ಕಚೇರಿಗೆ ತೆರಳಿ ವಿಚಾರಿಸಿದಾಗ ಇನ್ನೂ ಫೈಲ್ ಬಂದಿಲ್ಲ ಎಂದು ಸಿಬ್ಬಂದಿ ತಿಳಿಸಿದರೆನ್ನಲಾಗಿದೆ. ಇದರಿಂದ ಬೇಸತ್ತ ಉಮೇಶ್ ಜತೆಯಲ್ಲಿ ತಂದಿದ್ದ ಕ್ರಿಮಿನಾಶಕವ್ನ ಸ್ಥಳದಲ್ಲೇ ಕುಡಿದಿದ್ದಾರೆ.
ಇದರಿಂದ ಕೆಲಕಾಲ ದಿಗ್ಭ್ರಾಂತರಾದ ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು. ಹೆಚ್ಚಿನ ಚಿಕಿತ್ಸೆಗೆ ನಂತರ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು.
ಅಧಿಕಾರಿ ಇಲ್ಲದೆ ವಿಳಂಬ: ಅರ್ಜಿ ಸಲ್ಲಿಸುವಾಗ ಕೆಲವು ಮಾಹಿತಿಗಳನ್ನು ನೀಡದ ಕಾರಣ ಕಡತ ಪೆಂಡಿಂಗ್ ಇಡಲಾಗಿತ್ತು. ಎಲ್ಲವನ್ನೂ ಸರಿಪಡಿಸಿ ಬಂಡೀಪುರದ ವಿಭಾಗೀಯ ಕಚೇರಿಗೆ ಕಡತ ಕಳುಹಿಸಿದ್ದರೂ ಅರಣ್ಯ ಸಂರಕ್ಷಣಾಧಿಕಾರಿ ಅವರು ಬೆಂಗಳೂರಿಗೆ ಹೋಗಿದ್ದರಿಂದ ಅನುಮತಿ ನೀಡಲು ವಿಳಂಬವಾಗಿದೆ. ಮಂಗಳವಾರ ಬಂಡೀಪುರಕ್ಕೆ ಹೋಗಿ ವಿಚಾರಿಸಿದ ಉಮೇಶ್, ಬುಧವಾರ ನಮ್ಮ ಕಚೇರಿಗೆ ಬಂದು ನಿಮಗೆ ಸರಿಯಾಗಿ ಪಾಠ ಕಲಿಸುತ್ತೇನೆ ನೋಡುತ್ತಿರಿ ಎಂದು ಜೇಬಿನಲ್ಲಿದ್ದ ಕ್ರಿಮಿನಾಶಕ ಕುಡಿದು ನೆಲಕ್ಕೆ ಉಗಿದರು. ಕೂಡಲೇ ಅವರನ್ನು ನಾವೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದೆವು ಎಂದು ಎಸಿಎಫ್ ರವೀಂದ್ರ ವಿಜಯವಾಣಿಗೆ ತಿಳಿಸಿದ್ದಾರೆ.