ಜಿಲ್ಲೆ

ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸ್ಥಳೀಯರ ತರಾಟೆ

ಕೊಳ್ಳೇಗಾಲ: ತಾಲೂಕಿನ ಜಾಗೇರಿ 174ಮೀಸಲು ಅರಣ್ಯ ಪ್ರದೇಶದಲ್ಲಿ ಒತ್ತುವರಿ ತೆರವಿಗೆ ಶುಕ್ರವಾರ ಮುಂದಾದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸ್ಥಳೀಯರು ಹಾಗೂ ರೈತ ಸಂಘದ ಮುಖಂಡರು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಈಗಾಗಲೇ ಜಂಟಿ ಸರ್ವೇಯಾಗಿದ್ದು ವರದಿ ಬರುವ ಮುನ್ನವೇ ರೈತರನ್ನು ಒಕ್ಕಲೆಬ್ಬಿಸುತ್ತಿದ್ದೀರಾ ಎಂದು ಕಿಡಿಕಾರಿದರು.

ಕೊಳ್ಳೇಗಾಲ ಬಫರ್ ವಲಯದ ಅರಣ್ಯಾಧಿಕಾರಿ ಭರತ್, ಇಲಾಖೆಯ ಸಿಬ್ಬಂದಿ ಹಾಗೂ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಸುಪ್ರೀತ್ ಸಹಾಯದಿಂದ ತೆರವು ಕಾರ್ಯಚರಣೆ ನಡೆಸಲು ಮುಂದಾಗಿದ್ದರು. ಏಳೇಟು ಜೆಸಿಬಿಗಳನ್ನು ಸ್ಥಳಕ್ಕೆ ತರಲಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದ ಸ್ಥಳೀಯರು, ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಶೈಲೇಂದ್ರ ಮತ್ತು ರೈತ ಮುಖಂಡರು ಜಾಗೇರಿ ಭಾಗದ ಸಾಗುವಳಿ ಜಮೀನು ವಿಚಾರ ಸರ್ಕಾರದ ಹಂತದಲ್ಲಿದೆ. ಈಗಾಗಲೇ ಸರ್ವೇ, ಕಂದಾಯ, ಅರಣ್ಯ ಇಲಾಖೆ ಜಂಟಿ ಸರ್ವೇ ನಡೆಸಿದೆ. ಆದರೆ, ಸರ್ವೇ ವರದಿ ಬಂದಿಲ್ಲ. ಯಾವ ತೀರ್ಮಾನವೂ ಆಗಿಲ್ಲ. ಆದರೆ, ಅರಣ್ಯಾಧಿಕಾರಿಗಳು ಏಕಾಏಕಿ ಬಂದು ಒತ್ತುವರಿ ತೆರವು ಮಾಡುತ್ತೇವೆ ಎಂದು ಜಮೀನನ್ನು ವಶಕ್ಕೆ ಪಡೆದುಕೊಳ್ಳಲು ಮುಂದಾಗಿದ್ದೀರಿ ಎಂದು ಅರಣ್ಯ ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಇಳಿದರು.

ಈ ವೇಳೆ ಆರ್‌ಎಫ್‌ಒ ಭರತ್ ಪ್ರತಿಕಿಯಿಸಿ, ಮೀಸಲು ಅರಣ್ಯಕ್ಕೆ ಸೇರಿದ ಸ್ಥಳವಾದ್ದರಿಂದ ತೆರವು ಕಾರ್ಯಾಚರಣೆ ನಡೆಸಲು ಬಂದಿದ್ದೇವೆ. ಇಲಾಖೆ ಮೇಲಧಿಕಾರಿಗಳಿಂದ ನಿರ್ದೇಶನ ಬಂದಿದೆ. ನಿಯಮದಂತೆ ಅರಣ್ಯ ಇಲಾಖೆ ನಡೆಯುತ್ತಿದೆ ಎಂದು ಸಮಜಾಯಿಷಿ ನೀಡಿದರು. ಜಿಲ್ಲಾಡಳಿತ ವ್ಯವಸ್ಥೆ ಇದ್ದರೂ ಏಕಾಏಕಿ ತೆರವು ಮಾಡಲು ಬರುವುದು ಎಷ್ಟು ಸರಿ. ಜಂಟಿ ಸರ್ವೇ ವರದಿಯ ಬಗ್ಗೆ ಸರ್ಕಾರ ತೀರ್ಮಾನ ಮಾಡುವವರೆಗೂ ರೈತರಿಗೆ ತೊಂದರೆ ನೀಡಬೇಡಿ ಎಂದು ರೈತ ಮುಖಂಡ ಶೈಲೇಂದ್ರ ಹೇಳಿದರು.

ಯತಾಸ್ಥಿತಿ ಕಾಪಾಡಿ:

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಬಸವರಾಜು ಅವರಿಗೆ ರೈತ ಮುಖಂಡರು ತಮ್ಮ ಅಳಲು ತೋಡಿಕೊಂಡರು. ಈ ವೇಳೆ ತಹಸೀಲ್ದಾರ್ ಬಸವರಾಜು ಮಾತನಾಡಿ, ರೈತರು ಧೃತಿಗೆಡುವ ಅವಶ್ಯವಿಲ್ಲ. ಈ ವಿಚಾರ ಬಗ್ಗೆ ಶೀಘ್ರದಲ್ಲಿ ಜಿಲ್ಲಾಧಿಕಾರಿಗಳು ಸರ್ಕಾರ ಹಂತದಲ್ಲಿ ಚರ್ಚಿಸಲಿದ್ದಾರೆ. ಅಲ್ಲಿಯವರೆಗೂ ಯತಾಸ್ಥಿತಿ ಕಾಪಾಡಿ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇವೆ. ರೈತರು ಸಹ ಹೆಚ್ಚುವರಿ ಒತ್ತುವರಿ ಮಾಡಕೂಡದು. ಸರ್ಕಾರದ ತೀರ್ಮಾನದ ಬಳಿಕ ಮುಂದಿನ ಕ್ರಮವಾಗಲಿದೆ ಎಂದರು. ನಂತರ, ಸ್ಥಳದಲ್ಲಿದ್ದ ರೈತ ಸಂಘಟನೆ ಪದಾಧಿಕಾರಿಗಳು, ಮುಖಂಡರು ಮತ್ತು ಗ್ರಾಮಸ್ಥರು ತೆರಳಿದರು.

ರೈತ ಸಂಘದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಭಾಸ್ಕರ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಾದಮ್ಮ, ಪರೆಯನಾಯಗಂ, ಮಹಾದೇವಪ್ಪ, ಚಾಲ್ಸ್, ಮುರುಗನ್, ಸತ್ತಿವೇಲು, ನಿಕೋಲಸ್ ಮತ್ತಿತರಿದ್ದರು.