ಸರಗೂರು ತಾಲೂಕಿನ ಬಿರ್ವಾಳ್ ಗ್ರಾಮದಿಂದ ಮುಳ್ಳೂರು ಗ್ರಾಮದವರೆಗೆ ರಸ್ತೆ ಕಾಮಗಾರಿ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಶಾಸಕ ಅನಿಲ್ ಚಿಕ್ಕಮಾದು ಶನಿವಾರ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. 
ಜಿಲ್ಲೆ

ಅರಣ್ಯ ಇಲಾಖೆ ಅಧಿಕಾರಿಗಳಿಗಾಗಿ ಎರಡು ತಾಸು ಕಾದ ಶಾಸಕ

ಎಂ.ರವಿ

ಸರಗೂರು: ರಸ್ತೆ ಕಾಮಗಾರಿ ಪರಿಶೀಲನೆಗೆಂದು ಸ್ಥಳಕ್ಕೆ ಬಂದ ಶಾಸಕ ಅನಿಲ್ ಚಿಕ್ಕಮಾದು ಮತ್ತು ಅಧಿಕಾರಿಗಳು ಅರಣ್ಯ ಇಲಾಖೆ ಅಧಿಕಾರಿಗಳ ಬರುವಿಕೆಗಾಗಿ ಎರಡು ತಾಸು ಕಾದು ಸುಸ್ತಾಗಿ ಬಳಿಕ ವಾಪಸ್ಸಾದರು.

ತಾಲೂಕಿನ ನುಗು ಜಲಾಶಯದ ಬಿರ್ವಾಳ್ ಬಳಿಯಿಂದ ಮುಳ್ಳೂರು ಗ್ರಾಮದವರೆಗೆ ಕಾಮಗಾರಿ ನಡೆಯುತ್ತಿತ್ತು. ರಸ್ತೆ ವಿಸ್ತರಣೆ ಹಾಗೂ ರಸ್ತೆ ಎತ್ತರ ಮಾಡಿಕೊಳ್ಳುವ ಸಲುವಾಗಿ ಬಿರ್ವಾಳ್ ಗ್ರಾಮದ ರೈತನ ಹಿಡುವಳಿ ಜಮೀನಲ್ಲಿ ಅವರು ಒಪ್ಪಿಗೆ ಪಡೆದು ಗುತ್ತಿಗೆದಾರ ಮಣ್ಣನ್ನು ಅಗೆದು ತೆಗೆಯುತ್ತಿದ್ದರು.

ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಈ ಜಮೀನು ಅರಣ್ಯ ಇಲಾಖೆ ಸೇರಿದ್ದು. ಜಮೀನಿಂದ ಮಣ್ಣು ತೆಗೆಯಬಾರದು ಎಂದು ಹೇಳಿದ್ದಾರೆನ್ನಲಾಗಿದೆ. ಇದರಿಂದ ರಸ್ತೆ ಕಾಮಗಾರಿ ಸ್ಥಗಿತಗೊಂಡು ಈ ವಿಚಾರವನ್ನು ಶಾಸಕರಿಗೆ ಗಮನಕ್ಕೆ ತರಲಾಗಿದೆ. ಶನಿವಾರ ಸಂಜೆ ಸ್ಥಳಕ್ಕೆ ಶಾಸಕ ಅನಿಲ್ ಚಿಕ್ಕಮಾದು, ತಹಸೀಲ್ದಾರ್ ರುಕಿಯಾ ಬೇಗಂ, ಪಿಎಸ್‌ಐ ನಂದೀಶ್‌ಕುಮಾರ್, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಅರಣ್ಯ ಇಲಾಖೆ ಅಧಿಕಾರಿಗಳ ಬರುವಿಕೆಗಾಗಿ ಕಾದು ಕುಳಿತರು.

ಗಂಟೆಗಟ್ಟಲೆ ಕಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಬರಲಿಲ್ಲ. ಇದರಿಂದ ಶಾಸಕರು ಕುಪಿತರಾದರು. ನಂತರ ಅವರು ಮಾತನಾಡಿ, ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಈ ರಸ್ತೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ಮೊದಲು ಕಂತಿನ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಿ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಗುಣಮಟ್ಟದ ಕಾಮಗಾರಿ ನಡೆಸಲಾಗುತ್ತಿದೆ. ಆದರೆ ಅರಣ್ಯ ಇಲಾಖೆಗೆ ಸೇರಿದೆ ಎಂದು ಹೇಳಿ ಅಧಿಕಾರಿಗಳು ರೈತನ ಜಮೀನಿಂದ ಮಣ್ಣು ತೆಗೆದು ರಸ್ತೆ ಎತ್ತರಗೊಳಿಸುವುದನ್ನು ಸ್ಥಗಿತಗೊಳಿಸಿದ್ದಾರೆ ಎಂದು ಹೇಳಿದರು.

ಬಳಿಕ ಎಸಿಎಫ್ ಸತೀಶ್ ಹಾಗೂ ಆರ್‌ಎಫ್‌ಒ ವಿವೇಕ್ ಅವರಿಗೆ ದೂರವಾಣಿ ಕರೆ ಮಾಡಿ, ರಸ್ತೆ ಕಾಮಗಾರಿಗಾಗಿ ಹಿಡುವಳಿ ಜಮೀನಲ್ಲಿ ಮಾತ್ರ ಮಣ್ಣನ್ನು ತೆರೆಯಲಾಗಿದೆ ಎಂದು ಸ್ಪಷ್ಟಪಡಿಸಿದರು.

ಶಾಸಕರ ಮಾತಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಪಂದಿಸದೆ ಉದ್ಧಟತನದಿಂದ ನಡೆದುಕೊಂಡರು. ಇದರಿಂದ ಬೇಸತ್ತ ಶಾಸಕರು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು. ಸ್ಥಳವು ರೈತನ ಹಿಡುವಳಿ ಜಮೀನು ಎಂದು ತಿಳಿದುಬಂದಿದ್ದು, ಇದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷೃ ಎದ್ದು ಕಾಣುತ್ತಿದೆ. ಈ ವಿಷಯವನ್ನು ಮೇಲಿನ ಅಧಿಕಾರಿಗಳ ಗಮನಕ್ಕೆ ತಂದು ಕ್ರಮವಹಿಸಲು ಸೂಚಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಕೊನೆಗೆ ಶಾಸಕರು ಸ್ಥಳದಿಂದ ತೆರಳಿದರು.

ಅರಣ್ಯ ಇಲಾಖೆ ಅಧಿಕಾರಿಗಳು ಶಾಸಕರನ್ನು ನಡೆಸಿಕೊಂಡ ರೀತಿಯ ಬಗ್ಗೆ ಸ್ಥಳದಲ್ಲಿದ್ದ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು.
ಕಸಾಪ ತಾಲೂಕು ಅಧ್ಯಕ್ಷ ಕೆಂಡಗಣ್ಣಸ್ವಾಮಿ, ಅಕ್ರಮ-ಸಕ್ರಮ ಸಮಿತಿ ಸದಸ್ಯ ಶಿವಶಂಕರ್, ಹಾದನೂರು ಗ್ರಾಪಂ ಉಪಾಧ್ಯಕ್ಷ ಪ್ರಕಾಶ್, ಮುಖಂಡರಾದ ನಿಂಗರಾಜು, ಶಶಿಕುಮಾರ್ ಇತರರಿದ್ದರು.