ಜಿಲ್ಲೆ

ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ

ಕುಶಾಲನಗರ: ಮಾನವ-ವನ್ಯಜೀವಿ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಂಗಳವಾರ ಏರ್ಪಡಿಸಿದ್ದ ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳ ವಿಶೇಷ ಸಮಿತಿ ಸಭೆಯಲ್ಲಿ ಗ್ರಾಮಸ್ಥರು, ರೈತರಿಂದ ಆಕ್ರೋಶ ವ್ಯಕ್ತವಾಯಿತು.


ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ಹೊಸಪಟ್ಟಣ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅರಣ್ಯ ಇಲಾಖೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜ್ ಕಿಶೋರ್ ಸಿಂಗ್ ನೇತೃತ್ವದ ಸಮಿತಿಯು ರೈತರು, ಬೆಳೆಗಾರರು, ಗ್ರಾಮಸ್ಥರಿಗೆ ಕಾಡಾನೆಗಳು ಸೇರಿದಂತೆ ವನ್ಯಜೀವಿಗಳಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಆಲಿಸಿತು.


ಸಭೆಯ ಆರಂಭದಲ್ಲೇ ಗ್ರಾಮಸ್ಥರು, ರೈತರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಕಾಟಾಚಾರಕ್ಕೆ ಸಭೆ ಕರೆಯಲಾಗಿದೆ. ಸಭೆ ಬಗ್ಗೆ ಸ್ಥಳೀಯ ಅಧಿಕಾರಿಗಳು ಗ್ರಾಮಸ್ಥರಿಗೆ ಸಮರ್ಪಕ ಮಾಹಿತಿ ನೀಡಿಲ್ಲ. ಇದರಿಂದ ನೊಂದವರು ಹೆಚ್ಚಿನ ಸಂಖ್ಯೆಯಲ್ಲಿ ಸೇರಲು ಸಾಧ್ಯವಾಗಿಲ್ಲ ಎಂದು ಆಕ್ರೋಶ ವ್ಯಕಪಡಿಸಿದರು.
ಸಭೆಯಲ್ಲಿ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಯ ಕರ್ನಲ್ ಮುತ್ತಣ್ಣ ಮಾತನಾಡಿ, ಕೆಲ ಸಲಹೆ ನೀಡಿದ ಸಂದರ್ಭ ಬೆಳೆಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಎನ್‌ಜಿಒಗಳನ್ನು ಹೊರಗಿಟ್ಟು ಸಭೆ ನಡೆಸುವಂತೆ ತಾಕೀತು ಮಾಡಿದರು.


ಬೆಳೆಗಾರ ನಂದ ಸುಬ್ಬಯ್ಯ ಮಾತನಾಡಿ, ಎನ್‌ಜಿಒಗಳನ್ನು ಸಭೆಯಿಂದ ದೂರವಿಡಿ. ಕಾಡಾನೆ, ವನ್ಯಜೀವಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಈ ಬಗ್ಗೆ ಅಗತ್ಯ ಗಮನಹರಿಸಬೇಕು. ಕೇವಲ ಕಾಡಾನೆಗಳು ಮಾತ್ರವಲ್ಲ, ಮಂಗ, ಕಾಡುಕೋಣ, ಚಿರತೆ, ನವಿಲು, ಕಾಡುಹಂದಿಗಳ ಹಾವಳಿಯೂ ಹೆಚ್ಚಾಗಿದೆ ಎಂದು ಆರೋಪಿಸಿದರು.
ವಾಲ್ನೂರು ತ್ಯಾಗತ್ತೂರು ಗ್ರಾಪಂ ಸದಸ್ಯ ಮನು ಮಹೇಶ್, ನದಿ ದಡದಲ್ಲಿ 8 ಕಿಮೀ ವ್ಯಾಪ್ತಿಯಲ್ಲಿ ಕೈಗೊಂಡಿರುವ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಕಾಮಗಾರಿಯಲ್ಲಿ ಒಟ್ಟು ಮೂರು ಪಟ್ಟಿಯನ್ನು ಅಳವಡಿಸಲು ಕೋರಿದರು.


ರಸಲ್ಪುರ ನಿವಾಸಿ ರವಿ, ಕಾಡಾನೆಗಳಿಂದ ನಾಶವಾದ ಬೆಳೆಗಳಿಗೆ ಸೂಕ್ತ ಪರಿಹಾರವಿಲ್ಲ. ಕಂದಕಗಳ ನಿರ್ಮಾಣದಿಂದ ಮಳೆ ನೀರು ಹರಿವಿಗೆ ಅಡ್ಡಿಯಾಗಿದೆ. ರಸಲ್ಪುರದಲ್ಲಿ ಆನೆ ಕಾರಿಡಾರ್‌ಗೆ ಸರ್ವೇ ಮಾಡಲಾಗಿದೆ. ಈ ಬಗ್ಗೆ ರೈತರಿಗೆ ಮಾಹಿತಿ ಇಲ್ಲ. ಹಾಗಾಗಿ ಇದನ್ನು ಕೈಬಿಡಬೇಕು. ಸುತ್ತಲೂ ಅರಣ್ಯ ಪ್ರದೇಶ ಮಧ್ಯದಲ್ಲಿ ಕೃಷಿಕರ ಬದುಕು ಹೈರಾಣಾಗಿದೆ ಎಂದು ಅಳಲು ತೋಡಿಕೊಂಡರು.


ಈ ಭಾಗದಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ. ಬೆಳೆನಾಶ, ಜೀವ ಹಾನಿಗಳು ನಿರಂತರವಾಗಿದೆ. ಅರಣ್ಯ ಇಲಾಖೆಯಿಂದ ಕೈಗೊಂಡ ರೈಲ್ವೆ ಕಂಬಿ ಅಳವಡಿಕೆ ಕಾಮಗಾರಿ ವೈಜ್ಞಾನಿಕವಾಗಿದ್ದು, ಈ ಬಗ್ಗೆ ಸೂಕ್ತವಾಗಿ ಗಮನಹರಿಬೇಕು ಎಂದು ನಂಜರಾಯಪಟ್ಟಣ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ಕೋರಿದರು.
ಗ್ರಾಪಂ ಸದಸ್ಯ ಆರ್.ಕೆ.ಚಂದ್ರ ಮಾತನಾಡಿದರು. ಸಂಘಟನೆಗಳು, ಸಂಘಸಂಸ್ಥೆಗಳ ಪ್ರಮುಖರು ಮಾನವ-ವನ್ಯಜೀವಿ ಸಂಘರ್ಷ ಪರಿಹಾರಕ್ಕೆ ಹಲವು ಸಲಹೆ- ಸೂಚನೆ ನೀಡಿದರು. ಸಭೆಯಲ್ಲಿ ಎಲ್ಲರ ಆಹವಾಲು ಆಲಿಸಿದ ರಾಜ್‌ಕಿಶೋರ ಸಿಂಗ್, ತಮಗೆ ದೊರೆತ ಸಲಹೆ, ಸೂಚನೆ, ಸಮಸ್ಯೆಗಳ ಬಗ್ಗೆ ಸಮರ್ಪಕ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಸಣ್ಣ ಪುಟ್ಟ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.


ವಿಶೇಷ ಸಮಿತಿಯ ವಿವಿಧ ವಿಭಾಗಗಳ ಎಪಿಸಿಸಿಎಫ್‌ಗಳಾದ ಬ್ರಿಜೇಶ್‌ಕುಮಾರ್, ರಂಗರಾವ್, ಶಾಶ್ವತಿ ಮಿಶ್ರಾ, ಕೊಡಗು ವೃತ್ತದ ಸಿಸಿಎಫ್ ಬಿ.ಎನ್.ಎನ್.ಮೂರ್ತಿ, ಮಡಿಕೇರಿ ವಿಭಾಗ ಡಿಸಿಎಫ್‌ಗಳಾದ ಎ.ಟಿ.ಪೂವಯ್ಯ, ಶಿವರಾಂ ಬಾಬು, ಎಸಿಎಫ್‌ಗಳಾದ ಎ.ಎ.ಗೋಪಾಲ್, ಮೊಹಿಸಿನ್ ಭಾಷಾ, ವಿವಿಧ ವಲಯಗಳ ಆರ್‌ಎಫ್‌ಒ, ಡಿಆರ್‌ಎಫ್‌ಒಗಳು ಇದ್ದರು.