ಜಿಲ್ಲೆ

ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ವಿರುದ್ಧ ಎಫ್‌ಐಆರ್

ಗುಂಡ್ಲುಪೇಟೆ: ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ಬೋನಿನಲ್ಲಿ ಬಂಧಿತರಾಗಿದ್ದ ಅರಣ್ಯ ಇಲಾಖೆ ಸಿಬ್ಬಂದಿ ನೀಡಿದ ದೂರಿಗೆ ಪ್ರತಿಯಾಗಿ ಗ್ರಾಮದ ಸಂತ್ರಸ್ತ ಮಹಿಳೆ ನೀಡಿದ್ದ ದೂರಿನ ಮೇಲೆ ಪಟ್ಟಣದ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಹುಲಿ ಹಿಡಿಯುವಂತೆ ಒತ್ತಾಯ ಮಾಡಿದ್ದಕ್ಕೆ ಸಿಟ್ಟಿಗೆದ್ದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಹತ್ಯೆಗೆ ಯತ್ನಿಸಿದ್ದಾರೆ ಎಂದು ಬೊಮ್ಮಲಾಪುರದ ಕಮಲಮ್ಮ ನೀಡಿದ ದೂರಿನ ಮೇರೆಗೆ ಅರಣ್ಯ ಇಲಾಖೆಯ 15 ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುಂಡ್ಲುಪೇಟೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್, ಪ್ರಭಾರ ಆರ್‌ಎಫ್‌ಒ ಶಿವಕುಮಾರ್, ಡಿಆರ್‌ಎಫ್‌ಒಗಳಾದ ಜ್ಞಾನಶೇಖರ್, ಕಾರ್ತಿಕ್ ಯಾದವ್, ಸಿಬ್ಬಂದಿ ಶಿವಣ್ಣ, ಸುಚಿತ್ರಾ, ಸುಬ್ರಹ್ಮಣ್ಯ, ನಾಗೇಶ, ಸೋಮು, ಪ್ರವೀಣ, ಮಣಿಕಂಠ, ವಿನಯ್ ಕುಮಾರ್, ಸಂತೋಷ, ರಾಜಪ್ಪ, ಬಸವೇಗೌಡ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಕೊಲೆ ಬೆದರಿಕೆ ಹಾಕಿದ ಬಗ್ಗೆ ಪ್ರಕರಣ ದಾಖಲಾಗಿದೆ.