ವಿಜಯಪುರ: ಲಾಕ್‌ಡೌನ್‌ನಿಂದಾಗಿ ಕಡುಬಡವರು ತುತ್ತು ಅನ್ನಕ್ಕೂ ಪರದಾಡುತ್ತಿದ್ದು, ಇಂಥ ಸಂದರ್ಭದಲ್ಲಿ ಸರ್ಕಾರದಿಂದ ಧಕ್ಕಬೇಕಾದ ಅಕ್ಕಿ-ಬೇಳೆ ಸಹ ಅನ್ಯರ ಪಾಲಾಗುತ್ತಿರುವ ಅಂಶ ಬೆಳಕಿಗೆ ಬಂದಿದೆ.
ಜಿಲ್ಲೆಯ ಅರಕೇರಿ ಗ್ರಾಮದಲ್ಲಿ ಬಡವರಿಗೆ ಹಂಚಿಕೆಯಾಗಬೇಕಿದ್ದ ಪಡಿತರವನ್ನು ನ್ಯಾಯ ಬೆಲೆ ಅಂಗಡಿಕಾರರು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಬಟಾಬಯಲಾಗಿದೆ. ಬಡವರ ಹೊಟ್ಟೆ ಸೇರಬೇಕಿದ್ದ ಅಕ್ಕಿ-ಬೇಳೆ ಹೋಟೆಲ್‌ಗಳಿಗೆ ಮಾರಾಟ ಮಾಡುತ್ತಿದ್ದಾಗ ಸಾರ್ವಜನಿಕರೇ ಹಿಡಿದು ವಾಸ್ತವ ಹೊರಹಾಕಿದ್ದಾರೆ.
ಸ್ಥಳೀಯ ಪಿಕೆಪಿಎಸ್‌ನಲ್ಲಿ ತೆರೆಯಲಾದ ನ್ಯಾಯ ಬೆಲೆ ಅಂಗಡಿಯಿಂದ ಹೋಟೆಲ್ ಉದ್ಯಮಿಯೊಬ್ಬ ಅಕ್ಕಿ-ಬೇಳೆ ಖರೀದಿಸಿ ಆಟೋದಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾನೆ. ಆತನನ್ನು ಹಿಡಿದು ವಿಚಾರಿಸಲಾಗಿ ಪಿಕೆಪಿಎಸ್‌ನ ಸೆಕ್ಟೆಟರಿ ಹಣಮಂತ ತಿವಾರಿಯೇ ತಮಗೆ ಮಾರಾಟ ಮಾಡಿದ್ದಾಗಿ ತಿಳಿಸಿದ್ದಾನೆ. ಮಾರಾಟ ಮಾಡಿದ ಸ್ಥಳ ತೋರಿಸುವಂತೆ ಸಾರ್ವಜನಿಕರು ಒತ್ತಾಯಿಸಿದಾಗ ಖರೀದಿ ಮಾಡಿದ ವ್ಯಕ್ತಿ ಪಿಕೆಪಿಎಸ್‌ಗೆ ಕರೆದುಕೊಂಡು ಹೋಗಿ ತೋರಿಸಿದ್ದಾನೆ. ಈತನಿಂದ ಸುಮಾರು 1 ಕ್ವಿಂಟಾಲ್ ಪಡಿತರ ವಶಕ್ಕೆ ಪಡೆಯಲಾಗಿದೆ. ಅಲ್ಲದೇ, ನ್ಯಾಯಬೆಲೆ ಅಂಗಡಿ ಮುಂದೆ ಜಮಾಯಿಸಿದ್ದ ಮಹಿಳೆಯರು ತಮಗೆ ವರ್ಷದಿಂದ ಬೇಳೆಯೇ ಸಿಕ್ಕಿಲ್ಲ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಆಹಾರ ಮತ್ತ ನಾಗರಿಕ ಸರಬರಾಜು ಉಪ ನಿರ್ದೇಶಕ ಸಿದ್ರಾಮ ಮಾರಿಹಾಳ ಇವರನ್ನು ಸಂಪರ್ಕಿಸಲಾಗಿ, ಪ್ರಕರಣ ಗಮನಕ್ಕೆ ಬಂದಿದೆ. ಪಡಿತರ ಧಾನ್ಯಗಳ ಪೈಕಿ ತನ್ನ ಪಾಲಿನ ಅಕ್ಕಿಯನ್ನು ಫಲಾನುಭವಿ ಖರೀದಿಸಿದ್ದಾನೆ. ಬಹಳ ದಿನಗಳಿಂದ ಸಂಗ್ರಹಿಸಿಡಲಾಗಿದ್ದ ತೊಗರಿ ಬೇಳೆ ಮಾರಿದ್ದು ಕಂಡು ಬಂದಿದೆ. ವರ್ಷದಿಂದ ತೊಗರಿ ಬೇಳೆ ಹಂಚಿಕೆ ನಿಲ್ಲಿಸಲಾಗಿದೆ. ಆಗ ಉಳಿದ ಬೇಳೆಕಾಳು ಮಾರಾಟ ಮಾಡಿದ್ದು ಕಂಡು ಬಂದಿದೆ. ಈ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.