ಹಾಸನ : ಅರಕಲಗೂಡು ಟಿಕೆಟ್ ಗೊಂದಲ ಕೊನೆಗೂ ಮುಗಿದಿದೆ. ಅರಕಲಗೂಡ ಕ್ಷೇತ್ರದ ಟಿಕೆಟ್ ತಮ್ಮ ಬೆಂಬಲಿತ ಅಭ್ಯರ್ಥಿಗಳಿಗೆ ಕೊಡಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರು. ಕೊನೆಗೂ ಡಿಕೆಶಿ ಅವರ ಹಠವೇ ಗೆದ್ದಿದ್ದು ತಮ್ಮ ಬೆಂಬಲಿತ ಅಭ್ಯರ್ಥಿ ಎಚ್.ಪಿ. ಶ್ರೀಧರ್‌ಗೌಡ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಬಲ ಅಕಾಂಕ್ಷಿಯಾಗಿದ್ದ ಸಿದ್ದರಾಮಯ್ಯ ಪರ ಅಭ್ಯರ್ಥಿ ಎಂ.ಟಿ. ಕೃಷ್ಣೇಗೌಡ ಅವರು ಟಿಕೆಟ್ ಸಿಗದಿದ್ದಕ್ಕೆ ಬಂಡಾಯವೆದ್ದು, ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಎಲ್ಲ ನಿರೀಕ್ಷೆಯಂತೆ ಆಗಿದಿದ್ದರೆ ಮೂರನೇ ಪಟ್ಟಿಯಲ್ಲಿಯೇ ಅರಕಲಗೂಡು ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಣೆಯಾಗುತ್ತಿತ್ತು. ಆದರೆ, ಡಿಕೆಶಿ ಹಠಕ್ಕೆ ಬಿದ್ದ ಪರಿಣಾಮ ಆ ಪಟ್ಟಿಯಲ್ಲಿ ಅರಕಲಗೂಡು ಕ್ಷೇತ್ರ ಕುತೂಹಲ ಕೆರಳಿಸಿತ್ತು. ಸಿದ್ದರಾಮಯ್ಯ ಅವರು ಈ ಕ್ಷೇತ್ರದಿಂದ ಆರ್ಥಿಕವಾಗಿ ಸದೃಢರಾಗಿರುವ ಎಂ.ಟಿ. ಕೃಷ್ಣೇಗೌಡ ಅವರನ್ನು ಕಣಕ್ಕೆ ಇಳಿಸಲು ತೀರ್ಮಾನಿಸಿದ್ದರು. ಕೆಪಿಸಿಸಿ ಮತ್ತು ಎಐಸಿಸಿ ವೀಕ್ಷಕರು ಕ್ಷೇತ್ರಕ್ಕೆ ಬಂದು ನಡೆಸಿದ ಸರ್ವೇಯಲ್ಲಿಯೂ ಕೃಷ್ಣೇಗೌಡರ ಹೆಸರೇ ಮುಂಚೂಣಿಯಲ್ಲಿತ್ತು. ಹೀಗಾಗಿ ಅವರಿಗೆ ಟಿಕೆಟ್ ಕೊಡುವುದು ಸೂಕ್ತ ಎಂಬುದು ಎಲ್ಲರ ತೀರ್ಮಾನವಾಗಿತ್ತು. ಮಲ್ಲಿಕಾರ್ಜುನ ಖರ್ಗೆ ಅವರು ಸಹ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದರು. ಆದರೆ, ‘ಹಾಸನದಲ್ಲಿ ಈಗಾಗಲೇ ಸಿದ್ದರಾಮಯ್ಯ ಅವರ ಬೆಂಬಲಿತ ಅಭ್ಯರ್ಥಿಯಾಗಿ ಕೆ.ಎಂ. ಶಿವಲಿಂಗೇಗೌಡರನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ ಅರಕಲಗೂಡು ಕ್ಷೇತ್ರದಲ್ಲಿ ನಮ್ಮ ಬೆಂಬಲಿತ ಅಭ್ಯರ್ಥಿಗೆ ಟಿಕೆಟ್ ಕೊಡಿ,’ ಎಂದು ಪಟ್ಟು ಹಿಡಿದ ಕಾರಣದಿಂದ ಎಐಸಿಸಿ ಡಿಕೆಶಿ ಮಾತಿಗೆ ಅಸ್ತು ಎನ್ನಲಾಗಿದೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.
ಕೊನೇ ದಿನದವರೆಗೆ ಕಾಯ್ದುಕೊಂಡ ಕೌತುಕ
ಕಾಂಗ್ರೆಸ್ ಬಿಡುಗಡೆ ಮಾಡಿದ ನಾಲ್ಕು ಪಟ್ಟಿಯಲ್ಲೂ ಅರಕಲಗೂಡು ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಣೆಯಾಗಿರಲಿಲ್ಲ. ನಾಮಪತ್ರ ಸಲ್ಲಿಕೆಗೆ ಗುರುವಾರ ಕೊನೇ ದಿನವಾಗಿತ್ತು. ಬುಧವಾರ ಮುಗಿದರೂ ಟಿಕೆಟ್ ಮಾತ್ರ ಘೋಷಣೆಯಾಗಲಿಲ್ಲ. ಯಾರಿಗೆ ಟಿಕೆಟ್ ಸಿಗಲಿದೆ ಎಂಬ ಕೌತುಕ ಅಕ್ಷರಶಃ ಇಬ್ಬರೂ ಆಕಾಂಕ್ಷಿತರೂ ಸೇರಿದಂತೆ ಕ್ಷೇತ್ರದ ಜನರಲ್ಲಿ ಮನೆ ಮಾಡಿತ್ತು. ಬುಧವಾರ ತಡರಾತ್ರಿ ಐದನೇ ಪಟ್ಟಿಯಲ್ಲಿ ಅರಕಲಗೂಡು ಕ್ಷೇತ್ರದಿಂದ ಶ್ರೀಧರ್‌ಗೌಡ ಅವರ ಹೆಸರನ್ನು ಘೋಷಣೆ ಮಾಡಿತ್ತು. ಗುರುವಾರ ಬೆಳಗ್ಗೆ 11.30ಕ್ಕೆ ಶ್ರೀಧರ್‌ಗೌಡ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಟಿಕೆಟ್ ಸಿಗುವ ವಿಶ್ವಾಸವಿತ್ತು
‘ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಸರ್ಕಾರಿ ಉದ್ಯೋಗ ತೊರೆದು ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೆ. ನನ್ನ ಅವಧಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪಕ್ಷದ ಸದಸ್ಯತ್ವ ನೋಂದಣಿ ಮಾಡಿಸಿದ್ದೇನೆ. ಕ್ಷೇತ್ರದಾದ್ಯಂತ ಪಾದಯಾತ್ರೆ ಮಾಡಿದ್ದೇನೆ. ವಿಶ್ವ ತಾಯಂದಿರ ದಿನ ಆಚರಿಸಿ, ಕ್ಷೇತ್ರದ ತಾಯಂದಿರ ಆಶೀರ್ವಾದ ಪಡೆದಿದ್ದೇನೆ. ಯುವಕರಿಗೆ ಹಾಗೂ ವಿದ್ಯಾವಂತರಿಗೆ ಪಕ್ಷ ಟಿಕೆಟ್ ನೀಡಲಿದೆ ಎಂಬ ವಿಶ್ವಾಸವಿತ್ತು. ಅದರಂತೆ ಟಿಕೆಟ್ ಸಿಕ್ಕಿದೆ. ಅವಕಾಶ ನೀಡಿದ ಕೆಪಿಸಿಸಿ ಅಧ್ಯಕ್ಷರಿಗೆ ಅಭಾರಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ಮಾಡಿ ಎಲ್ಲ ಮತದಾರರ ಆಶೀರ್ವಾದ ಪಡೆಯುತ್ತೇನೆ,’ ಎಂದು ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ. ಶ್ರೀಧರ್‌ಗೌಡ ಅವರು ವಿಜಯವಾಣಿಗೆ ತಿಳಿಸಿದರು.
ಯಾರಿಗೆ ಲಾಭ? ಯಾರಿಗೆ ನಷ್ಟ?
ಮೂರು ಬಾರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಎ.ಮಂಜು ಅವರಿಗೆ ಕ್ಷೇತ್ರದ ನಾಡಿಮಿಡಿತ ಹಾಗೂ ಚುನಾವಣೆಯ ಒಳಹೊರಗುಗಳ ಪಟ್ಟು ಚೆನ್ನಾಗಿ ಗೊತ್ತು. ಕಾಂಗ್ರೆಸ್ ಬಳಿಕ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡು ಕಳೆದೊಂದು ತಿಂಗಳಿನಿಂದಲೇ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಪ್ರತಿ ಹಳ್ಳಿ-ಹಳ್ಳಿಗೂ ತೆರಳಿ ಜನರ ಮನ ಗೆಲ್ಲಲು ಮುಂದಾಗಿದ್ದಾರೆ. ಗೆಲ್ಲುವ ಅಭ್ಯರ್ಥಿಯಾಗಿ ಎ.ಮಂಜು ಹೆಸರು ಕ್ಷೇತ್ರದ ಜನರ ಬಾಯಲ್ಲಿ ಕೇಳಿಬರುತ್ತಿದೆ.
ಇನ್ನು ಈ ಹಿಂದೆ 2013ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 32 ಸಾವಿರ ಮತಗಳನ್ನು ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದ ಯೋಗಾ ರಮೇಶ್ 2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಮೂರನೇ ಸ್ಥಾನ ಪಡೆದಿದ್ದರು. ಇದೀಗ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಸತತ ಎರಡು ಬಾರಿ ಸೋತಿರುವ ಅನುಕಂಪದ ಜತೆಗೆ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗಿರುವ ಎ.ಟಿ. ರಾಮಸ್ವಾಮಿ ಅವರ ಬೆಂಬಲ ಯೋಗಾ ರಮೇಶ್ ಅವರಿಗೆ ಆನೆ ಬಲ ಸಿಕ್ಕಂತಾಗಿದೆ. ಹೀಗಾಗಿ ಇವರ ಗೆಲುವು ಸಹ ಸನಿಹದಲ್ಲಿದೆ ಎಂದು ಹೇಳಲಾಗುತ್ತಿದೆ.
ಟಿಕೆಟ್ ಗೊಂದಲದಿಂದಾಗಿ ಕಾಂಗ್ರೆಸ್ ಬಗೆಗಿನ ನಿರೀಕ್ಷೆಗಳು ಬದಲಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಅಲ್ಲದೇ, ಕಾಂಗ್ರೆಸ್‌ನಿಂದ ಎಂ.ಟಿ. ಕೃಷ್ಣೇಗೌಡ ಅವರು ಬಂಡಾಯ ಎದ್ದಿರುವುದು ಕೈಗೆ ದೊಡ್ಡ ಹೊಡೆತ ಬೀಳಲಿದೆ ಎಂದು ಹೇಳಲಾಗುತ್ತಿದೆ. ಇಬ್ಬರ ಹೊಡೆದಾಟ ಮೂರನೆಯವರಿಗೆ ಲಾಭ ತಂದುಕೊಟ್ಟರೂ ಕೊಡಬಹುದು. ಇಲ್ಲ ಕ್ಷೇತ್ರದಲ್ಲಿ ಭಿನ್ನಮತ ಮರೆತು ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಶ್ರೀಧರ್‌ಗೌಡ ಪರ ಪ್ರಚಾರ ಮಾಡಿದರೆ ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳಿಗೆ ಸೋಲಿನ ರುಚಿ ತೋರಿಸಿದರೂ ತೋರಿಸಬಹುದು ಎನ್ನಲಾಗುತ್ತಿದೆ.
ಸಿದ್ದರಾಮಯ್ಯ ಕ್ಷೇತ್ರಕ್ಕೆ ಬಂದಾಗೆಲ್ಲ ಕಾಂಗ್ರೆಸ್ ಗೆಲುವು
ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ಅರಕಲಗೂಡು ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿದಾಗಲೆಲ್ಲಾ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ. 2004ರಲ್ಲಿ ಎ.ಮಂಜು ಬಿಜೆಪಿ ತೊರೆದು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದರು. ಆಗ ಕೇವಲ 600 ಮತಗಳ ಅಂತರದಿಂದ ಜೆಡಿಎಸ್ ಅಭ್ಯರ್ಥಿ ಎಟಿ ರಾಮಸ್ವಾಮಿ ವಿರುದ್ಧ ಪರಾಭವಗೊಂಡಿದ್ದರು. 2008ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿದಾಗ ಎ.ಮಂಜು ಗೆಲುವು ದಾಖಲಿಸಿದರು. ಆನಂತರ 2013ರಲ್ಲಿಯೂ ಸಿದ್ದರಾಮಯ್ಯ ಎ.ಮಂಜು ಪರ ಅಬ್ಬರದ ಪ್ರಚಾರ ಮಾಡಿದರು. ಆಗಲೂ ಕಾಂಗ್ರೆಸ್ ಭರ್ಜರಿ ಗೆಲುವು ದಾಖಲಿಸಿತು. 2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಪ್ರಚಾರಕ್ಕೆ ಬರಲಿಲ್ಲ. ಎ.ಮಂಜು ಅವರು ಸುಮಾರು 9ಸಾವಿರ ಮತಗಳ ಅಂತರದಿಂದ ಸೋತರು. ಈಗ ಸಿದ್ದರಾಮಯ್ಯ ಅವರು ಕ್ಷೇತ್ರಕ್ಕೆ ಬಂದು ಶ್ರೀಧರ್‌ಗೌಡ ಪರ ಪ್ರಚಾರ ಮಾಡಲಿದ್ದಾರಾ? ಎಂಬುದು ಯಕ್ಷಪ್ರಶ್ನೆಯಾಗಿದೆ. ಸಿದ್ದರಾಮಯ್ಯ ಅವರ ಪ್ರಚಾರ ಮೇಲೂ ಕಾಂಗ್ರೆಸ್ ಅಭ್ಯರ್ಥಿ ಸೋಲು-ಗೆಲುವು ನಿಂತಿದೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.