ಅರಕಲಗೂಡು : ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಬಿ.ಟಿ. ಜವರೇಗೌಡ ಅವರು ಮಂಗಳವಾರ ಕ್ಷೇತ್ರದಾದ್ಯಂತ ಸಾವಿರಾರು ಅಭಿಮಾನಿಗಳೊಂದಿಗೆ ಬೈಕ್ ರ‌್ಯಾಲಿ ನಡೆಸುವ ಮೂಲಕ ಭರ್ಜರಿ ಪ್ರಚಾರ ನಡೆಸಿದರು.
ಮಂಗಳವಾರ ಬೆಳಗ್ಗೆ ಬಸವನಹಳ್ಳಿಯಿಂದ ಆರಂಭಗೊಂಡ ಬೈಕ್ ರ‌್ಯಾಲಿ, ಬಸವಾಪಟ್ಟಣ, ರಾಮನಾಥಪುರ, ಹಳ್ಳಿಮೈಸೂರು, ಅರಕಲಗೂಡು ಪಟ್ಟಣಕ್ಕೆ ಮಧ್ಯಾಹ್ನದ ವೇಳೆಗೆ ಬಂದು ತಲುಪಿತು. ಪಟ್ಟಣದ ಅನಕೃ ವೃತ್ತದಲ್ಲಿ ಅಭಿಮಾನಿಗಳು ಜವರೇಗೌಡರಿಗೆ ಪುಷ್ಪಮಳೆ ಸುರಿಸಿ, ಬೃಹತ್ ಹೂವಿನ ಹಾರ ಹಾಕಿ ಸ್ವಾಗತಿಸಿದರು. ಬಳಿಕ ಮಲ್ಲಿಪಟ್ಟಣ ಮಾರ್ಗವಾಗಿ ಬೈಕ್ ರ‌್ಯಾಲಿ ಮುಂದುವರಿಯಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಎಪಿ ಅಭ್ಯರ್ಥಿ ಜವರೇಗೌಡ ಅವರು, ಇಲ್ಲಿನ ಚುನಾವಣೆ ಹೇಗೆ ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತು. ಬಲಾಢ್ಯರು, ಶಕ್ತಿವರು ಹಣದ ಮೂಲಕ ಚುನಾವಣೆ ಎದುರಿಸುತ್ತಿದ್ದಾರೆ. ಇಂತಹ ಶಕ್ತಿವಂತರ ನಡುವೆ ನಮ್ಮ ಸಾಮರ್ಥ್ಯವನ್ನು ತೋರಿಸುವ ಸಲುವಾಗಿ ಹಾಗೂ ಜನರ ಗಮನವನ್ನು ಸೆಳೆಯುವ ನಿಟ್ಟಿನಲ್ಲಿ ಈ ಬೈಕ್ ರ‌್ಯಾಲಿಯನ್ನು ಆಯೋಜನೆ ಮಾಡಲಾಗಿದೆ.
ಇಂದು ಆಮ್ ಆದ್ಮಿ ಪಕ್ಷ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಪಂಜಾಬ್ ಹಾಗೂ ದೆಹಲಿಯಲ್ಲಿ ನೀಡುತ್ತಿರುವ ಜನಪರ ಆಡಳಿತವನ್ನು ಮುಂದಿಟ್ಟುಕೊಂಡು ನಾನು ಈ ಕ್ಷೇತ್ರದ ಜನರಲ್ಲಿ ಮತಯಾಚನೆ ಮಾಡುತ್ತಿದ್ದೇನೆ. ರಾಜ್ಯದಲ್ಲಿ ಅರಕಲಗೂಡು ಕ್ಷೇತ್ರದಿಂದ ನನ್ನನ್ನು ಎಎಪಿಯಿಂದ ಶಾಸಕನಾಗಿ ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.
ಕಳೆದ ಎರಡು ಮೂರು ತಿಂಗಳಿನಿಂದ ನಾನು ಕ್ಷೇತ್ರದಾದ್ಯಂತ ತಿರುಗಾಡಿ ಪ್ರಚಾರ ನಡೆಸುತ್ತಿದ್ದೇನೆ. ಹೋದ ಕಡೆಯಲೆಲ್ಲಾ ಜನರು ಆತ್ಮೀಯವಾಗಿ ಸ್ವಾಗತ ಕೋರುತ್ತಾ, ಬೆಂಬಲ ವ್ಯಕ್ತಪಡಿಸಿದ್ದಾರೆ. ನಾನು ಜನರ ನಾಯಕನಲ್ಲ. ಇಲ್ಲಿನ ಜನರೇ ನನ್ನನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಅವರಿಗೆ ನಾನು ಚಿರಋಣಿಯಾಗಿದ್ದೇನೆ ಎಂದು ಹೇಳಿದರು.