ಜಿಲ್ಲೆ

ಅರಕಲಗೂಡು ಅಂಬೇಡ್ಕರ್ ಭವನ ಪೂರ್ಣಗೊಳಿಸದಿದ್ದರೆ ಹೋರಾಟ: ಕಾಂಗ್ರೆಸ್ ಎಚ್ಚರಿಕೆ

ಅರಕಲಗೂಡು: ಪಟ್ಟಣದಲ್ಲಿ ನನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನಕ್ಕೆ ಶಾಸಕರು ಶೀಘ್ರ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಎಚ್ಚರಿಕೆ ನೀಡಿದರು.

ಕಳೆದ‌ ಸಲ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಅಂಬೇಡ್ಕರ್ ಭವನ ಸ್ಥಾಪನೆಗೆ ೫ ಕೋಟಿ ರೂ ಮಂಜೂರು ಮಾಡಿ ೧.೫೦ ಕೋಟಿ ಹಣ ಬಿಡುಗಡೆ ಮಾಡಿದ್ದರು. ಕಳೆದ‌ ವಿಧಾನಸಭಾ ಚುನಾವಣೆ ವೇಳೆ‌ ಜನರ ವಿರೋಧ ಲೆಕ್ಕಿಸದೆ ಹಳೆಯ ಭವನ ಕೆಡವಿ ಹೊಸದಾಗಿ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಆಗ ಹಳೆಯ ಭವನ ತೆರವುಗೊಳಿಸದಂತೆ ಪ್ರತಿಭಟನೆ ನಡೆಸಿದ ಕೆಲವರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಲಾಯಿತು. ಆದರೆ ಕಾಮಗಾರಿ ಮಾತ್ರ ಈವರೆಗೂ ಮುಗಿಯದೆ ಕಳಪೆಯಾಗಿ ಅರ್ಧಕ್ಕೆ ನಿಂತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು.
ತಾಲೂಕು ಕಾಂಗ್ರೆಸ್ ಎಸ್ಸಿ, ಎಸ್ಟಿ ಘಟಕದ ಅಧ್ಯಕ್ಷ ಗಣೇಶ್ ವೇಲಾಪುರಿ ಮಾತನಾಡಿ, ಅಂಬೇಡ್ಕರ್ ಭವನ ಕಾಮಗಾರಿ ನಿಲ್ಲಲ್ಲು ಕಾಣದ ಕೈಗಳ ಕೈವಾಡವಿದ್ದು ಬಡ ಜನರ ಬದುಕಿನ ಮೇಲೆ ಚೆಲ್ಲಾಟವಾಡುತ್ತಿದ್ದಾರೆ. ಆರಂಭದಲ್ಲೇ ಕಾಮಗಾರಿ ಪೂರ್ಣಗೊಳಿಸಿದ್ದರೆ ಬಡ ಜನರು ಕಾರ್ಯಕ್ರಗಳನ್ನು ನಡೆಸಲು ಅನುಕೂಲವಾಗುತ್ತಿತ್ತು.

ಇದೀಗ ಕಾಮಗಾರಿ ವೆಚ್ಚ ಹೆಚ್ಚಾಗಿದೆ. ಹಾಗಾಗಿ ಇನ್ನೂ ಒಂದು ಕೋಟಿ ರೂ ಅನುದಾನವನ್ನು ಸರ್ಕಾರ ಹೆಚ್ಚುವರಿಯಾಗಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ತಾಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಪೃಥ್ವಿರಾಜ್ ಮಾತನಾಡಿ, ಅಂಬೇಡ್ಕರ್ ಭವನ ಇಲ್ಲದೆ ಹಿಂದುಳಿದ ಜನರು ಮದುವೆ ಸಮಾರಂಭಗಳನ್ನು ನಡೆಸಲು ೫೦ರಿಂದ ೬೦ ಸಾವಿರ ರೂ ದುಂದು ವೆಚ್ಚ ಮಾಡುವ‌ ದುಸ್ಥಿತಿ ಬಂದೊದಗಿದೆ. ಇಷ್ಟು ನಷ್ಟದ ಹಣವನ್ನು ಭರಿಸುವರು ಯಾರು? ಈಗ ಕೇವಲ ೫೦ ಲಕ್ಷಕ್ಕೂ ಕಡಿಮೆ ಅನುದಾನದಲ್ಲಿ ಕೆಲಸ ನಡೆಸಲಾಗಿದ್ದರೂ ೭೫ ಲಕ್ಷ ರೂ. ವ್ಯಯಿಸಿರುವುದಾಗಿ ಹೇಳುತ್ತಿದ್ದಾರೆ. ಕಳಪೆ ಕಾಮಗಾರಿ ನಡೆಸಿರುವ ಭೂ ಅಭಿವೃದ್ಧಿ ನಿಗಮದವರನ್ನು ಕಪ್ಪು ಪಟ್ಟಿಗೆ ಸೇರಿಸಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಸಂಬಂಧಿಸಿದವರು ಮೀನಮೇಷ ಎಣಿಸಿದರೆ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಆಕ್ರೋಶ‌ ವ್ಯಕ್ತಪಡಿಸಿದರು.

ಪಪಂ ಸದಸ್ಯರಾದ ಅನಿಕೇತನ್, ಪ್ರದೀಪ್ ಕುಮಾರ್, ಸುಬಾನ್‌ ಷರೀಫ್ ಗೋಷ್ಠಿಯಲ್ಲಿದ್ದರು.