ಅರಕಲಗೂಡು: ತಾಲೂಕಿನಲ್ಲಿ ಶುಕ್ರವಾರ ರಾತ್ರಿ ವರುಣನ ಆರ್ಭಟದಿಂದ ಹಲವೆಡೆ ವಾಸದ ಮನೆಗಳಿಗೆ ನೀರು ನುಗ್ಗಿ ಕೆರೆ-ಕಟ್ಟೆಗಳು ಒಡೆದು ಅಪಾರ ಪ್ರಮಾಣದ ಹಾನಿ ಉಂಟಾಗಿದೆ.
ಮಳೆ ಅಬ್ಬರದಿಂದ ಕೋರ್ಟ್ ಮುಂಭಾಗದ ಸಿಂಗಪಟ್ಲಮ್ಮದ ಕಾಂಪ್ಲೆಕ್ಸ್ ಮಳಿಗೆಗಳಿಗೆ ನೀರು ನುಗಿದೆ. ಚರಂಡಿ ಕಟ್ಟಿಕೊಂಡ ಪರಿಣಾಮ ಹಲವು ವ್ಯಾಪಾರಿ ಅಂಗಡಿಗಳು ಹಾಗೂ ವಕೀಲರ ಮಳಿಗೆಗಳಿಗೆ ನೀರು ನುಗ್ಗಿದ್ದು, ಕಂಪ್ಯೂಟರ್ ವಸ್ತುಗಳು ಹಾಗೂ ದಿನಸಿ ಅಂಗಡಿಗಳು ಹಾನಿಗೀಡಾಗಿವೆ. ಭಾನುವಾರ ದಿನವಿಡೀ ವ್ಯಾಪಾರಸ್ಥರು ಕಟ್ಟಡಗಳಿಗೆ ತುಂಬಿದ ನೀರು ತೋಡಿ ಒದ್ದೆಯಾಗಿದ್ದ ವಸ್ತುಗಳನ್ನು ಒಣಗಿಸುವಲ್ಲಿ ನಿರತರಾಗಿದ್ದರು.
ಪಟ್ಟಣದ ಬೈಪಾಸ್ ರಸ್ತೆಯ ರಾಜಕಾಲುವೆ ಬಳಿ ಮೇಲ್ಭಾಗದಿಂದ ಬರುವ ನೀರು ಸರಾಗವಾಗಿ ಹರಿಯದೆ ಚರಂಡಿ ಕಟ್ಟಿಕೊಂಡು ಕಟ್ಟಡಗಳು ಜಲಾವೃತವಾಗಿದ್ದವು. ಪ.ಪಂ. ವ್ಯಾಪ್ತಿಯ ಪೇಟೆ ಮಾಚಗೌಡನಹಳ್ಳಿ ಕಾಲನಿಯಲ್ಲಿ ವಾಸದ ಮನೆಗಳಿಗೆ ಮಳೆ ನೀರು ನುಗ್ಗಿ ಆಹಾರ ಧ್ಯಾನ್ಯಗಳು ಹಾಳಾಗಿದ್ದು ಸಾಕಷ್ಟು ಅವಾಂತರ ಸೃಷ್ಟಿಸಿತು.
ಶಾಲೆಗಳು ಜಲಾವೃತ: ಮಳೆಯಿಂದಾಗಿ ಕತ್ತಿಮಲ್ಲೇನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಕಾಂಪೌಂಡ್ ಕುಸಿದು ಬಿದ್ದಿದೆ. ಪೇಟೆ ಮಾಚಗೌಡನಹಳ್ಳಿ ಸರ್ಕಾರಿ ಶಾಲಾ ಆವರಣ ಸಂಪೂರ್ಣ ಜಲಾವೃತವಾಗಿದೆ.
ಒಡೆದ ಕೆರೆ-ಕಟ್ಟೆಗಳು: ವರುಣನ ಅಬ್ಬರಕ್ಕೆ ಕೆರೆ ಕಟ್ಟೆಗಳು ಭರ್ತಿಯಾಗಿ ಕೋಡಿ ಬಿದ್ದಿದ್ದು, ಕೆಲವೆಡೆ ಏರಿ ಒಡೆದು ಹಾಳಾಗಿವೆ. ಕತ್ತಿಮಲ್ಲೇನಹಳ್ಳಿ ಬಳಿ ಅಡಿಕೆ ಬೊಮ್ಮನಹಳ್ಳಿ ಏತ ನೀರಾವರಿ ನಾಲೆಯ ಏರಿ ಕುಸಿದಿದೆ. ಬೆಳವಾಡಿ ಹಿರಿಕೆರೆ ಕೋಡಿ ಬಿದ್ದು ಅಪಾರ ಪ್ರಮಾಣದ ನೀರು ರೈತರ ಜಮೀನುಗಳಿಗೆ ನುಗ್ಗಿದೆ. ಭತ್ತ, ಜೋಳ, ಅಡಿಕೆ, ತೋಟದ ಬೆಳೆಗಳು ಜಲಾವೃತವಾಗಿ ಹಾನಿಗೀಡಾಗಿವೆ. ಕೆಲವು ಕಡೆ ನೀರಿನ ರಭಸಕ್ಕೆ ಬೆಳೆಗಳು ಕೊಚ್ಚಿ ಹೋಗಿದೆ. ಕೋಟೆ ಕರ್ಪೂರವಳ್ಳಿ ಕೆರೆ ಒಡೆದು ಕೆಳ ಭಾಗದ ಅಡಿಕೆ ತೋಟದ ಬೆಳೆ ಸಂಪೂರ್ಣ ಜಲಾವೃತವಾಗಿದೆ.
ಸೀಬಳ್ಳಿ ಹಳ್ಳದಲ್ಲಿ ಮಳೆ ನೀರು ಹೊಳೆಯಾಗಿ ಹರಿದು ಹಾನಗಲ್ ಮಾರ್ಗದ ರಸ್ತೆ ಸಂಚಾರ ಕಡಿತಗೊಂಡಿದೆ. ಕೆರೆ ಕಟ್ಟೆಗಳು ಮತ್ತು ನಾಲೆಗಳು ತುಂಬಿ ಹರಿದು ಅಚ್ಚುಕಟ್ಟಿನ ಜಮೀನು ಮೇಲೆ ನೀರು ನುಗ್ಗಿ ಬೆಳೆ ಹಾಳಾಗಿದೆ ಎಂದು ರೈತರು ಅಳಲು ತೋಡಕೊಂಡಿದ್ದಾರೆ.
ಅಧಿಕಾರಿಗಳು ಭೇಟಿ: ಪೇಟೆ ಮಾಚಗೌಡಹಳ್ಳಿ ಕಾಲನಿ ಹಾಗೂ ಪಟ್ಟದಲ ಹಲವೆಡೆ ಮಳೆ ನೀರು ನುಗ್ಗಿ ಹಾನಿಗೀಡಾಗಿದ್ದ ಸ್ಥಳಕ್ಕೆ ಪಪಂ ಮುಖ್ಯಾಧಿಕಾರಿ ನಾಗೇಂದ್ರ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಮಳೆಯಿಂದಾಗಿ ಹಾನಿಗೀಡಾದ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರೇಡ್- 2 ತಹಸೀಲ್ದಾರ್ ಸಿ. ಸ್ವಾಮಿ ತಿಳಿಸಿದರು.
ಮಳೆ ವಿವರ: ತಾಲೂಕಿನಲ್ಲಿ ಭಾನುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಮಳೆ ಮಾಪಕದಲ್ಲಿ ಕಸಬಾ 110.1 ಮಿಮೀ ಅತ್ಯಧಿಕ ಮಳೆಯಾಗಿದೆ. ಮಲ್ಲಿಪಟ್ಟಣ 43.2, ದೊಡ್ಡಮಗ್ಗೆ 18.8, ಕೊಣನೂರು 37.2, ದೊಡ್ಡಬೆಮ್ಮತ್ತಿ 48.2, ಬಸವಾಪಟ್ಟಣ 59.4, ರಾಮನಾಥಪುರ 68.4 ಮಿಮೀ ಮಳೆ ಆಗಿದೆ.