ಜಿಲ್ಲೆ

ಅರಕಲಗೂಡಿನಲ್ಲಿ ದಸರಾ ಉತ್ಸವ; ಮನಸೆಳೆದ ವೀರಗಾಸೆ, ನೃತ್ಯ ಪ್ರದರ್ಶನ

ಅರಕಲಗೂಡು: ಕಣ್ಮನ ಸೆಳೆಯುವ ದೇವತೆಗಳ ಸಾಲು ಉತ್ಸವದ ಮೆರವಣಿಗೆ, ವಿವಿಧ ಕಲಾ ತಂಡಗಳ ಆಕರ್ಷಕ ನೃತ್ಯ ಪ್ರದರ್ಶನ, ಕಣ್ಣು ಕೋರೈಸುವ ವಿದ್ಯುತ್ ಬೆಳಕಿನ ಚಿತ್ತಾರದ ನಡುವೆ ಬುಧವಾರ ರಾತ್ರಿ ಅರಕಲಗೂಡು ದಸರಾ ಉತ್ಸವ ಸಡಗರ ಸಂಭ್ರಮದೊಂದಿಗೆ ಅತ್ಯಂತ ವೈಭವಯುತವಾಗಿ ನೆರವೇರಿತು.

ಗ್ರಾಮದೇವತೆ ದೊಡ್ಡಮ್ಮ ದೇವತೆ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ ಬಳಿಕ ಶಾಸಕ ಎ.ಟಿ. ರಾಮಸ್ವಾಮಿ ಹಾಗೂ ವಿವಿಧ ಮಠಾಧೀಶರು ಉತ್ಸವಗಳ ಮೆರವಣಿಗೆಗೆ ಚಾಲನೆ ನೀಡಿದರು. ವಿದ್ಯುತ್ ದೀಪಗಳಿಂದ ಅಲಂಕೃತ ಗೊಂಡಿದ್ದ ವಿವಿಧ ದೇವಾಲಯಗಳ ಉತ್ಸವಗಳು, ಸ್ಥಬ್ದಚಿತ್ರಗಳು ಸರತಿ ಸಾಲಿನಲ್ಲಿ ಬನ್ನಿ ಮಂಟಪದತ್ತ ಸಾಗಿದವು. ಉತ್ಸವಗಳ ಮುಂದೆ ಗಾರುಡಿ ಗೊಂಬೆ, ನಗಾರಿ ಕುಣಿತ, ಡೊಳ್ಳುಕುಣಿತ ಪೂಜಾ ಕುಣಿತ, ವೀರಭದ್ರ ಕುಣಿತ, ಪಟ ಕುಣಿತ, ಕೀಲುಕುದುರೆ, ನಾಸಿಕ್ ಡೋಲು, ಕೋಲಾಟ, ಚಿಟ್ಟಿ ಮೇಳ, ತಮಟೆ ವಾದ್ಯ, ಮಂಗಳವಾದ್ಯ, ಸ್ಯಾಕ್ಸೊಫೊನ್ ವಾದನ ಸೇರಿದಂತೆ ವಿವಿಧ ಕಲಾ ತಂಡಗಳು ಪ್ರದರ್ಶನ ನೀಡುತ್ತಾ ಸಾಗಿದವು.

ಉತ್ಸವಗಳ ಮೆರವಣಿಗೆ ಬಸ್ ನಿಲ್ದಾಣದ ರಸ್ತೆ ಯಲ್ಲಿ ಹೊರಟು ಅನಕೃ ವೃತ್ತದ ಮೂಲಕ ಪೇಟೆ ಮುಖ್ಯ ರಸ್ತೆಯಲ್ಲಿ ಸಾಗಿತು. ರಸ್ತೆಯ ಎರಡೂ ಬದಿಗಳ ಹಾಗೂ ಕಟ್ಟಡಗಳ ಮೇಲೇರಿ ಜನರು ಉತ್ಸವ ಹಾಗೂ ಕಲಾ ತಂಡಗಳ ಪ್ರದರ್ಶನವನ್ನು ಕಣ್ತುಂಬಿಕೊಂಡರು. ಪ್ರಮುಖ ವೃತ್ತಗಳಲ್ಲಿ ಕಲಾ ತಂಡಗಳ ಕುಣಿತಕ್ಕೆ ಜನರೂ ಹೆಜ್ಜೆ ಹಾಕಿ ಸಂಭ್ರಮಿಸಿದರು. ಉತ್ಸವ ಸಾಗುವ ದಾರಿಯಲ್ಲಿ ಸಂಘ ಸಂಸ್ಥೆಗಳು ಉಚಿತ ಉಪಹಾರ ಹಾಗೂ ತಂಪು ಪಾನೀಯಗಳನ್ನು ಕಲಾ ತಂಡಗಳಿಗೆ ಹಾಗೂ ಸಾರ್ವಾಜನಿಕರಿಗೆ ನೀಡುವ ಮೂಲಕ ಜನರ ಹಸಿವಿನ ದಾಹ ತಣಿಸಿದರು.

ಮೆರವಣಿಗೆಯಲ್ಲಿ ಬನ್ನಿ ಮಂಟಪಕ್ಕೆ ಬಂದ ಉತ್ಸವಗಳನ್ನು ಸ್ವಾಗತಿಸಿ ಸಾಲಿನಲ್ಲಿ ನಿಲ್ಲಿಸಲಾಯಿತು. ಬಳಿಕ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಬನ್ನಿ ಪೂಜೆ ನಡೆಸಲಾಯಿತು. ತಹಸೀಲ್ದಾರ್ ಕೆ.ಆರ್. ಶ್ರೀನಿವಾಸ್ ಕದಳಿ ಛೇದನ ನಡೆಸಿದರು. ಉತ್ಸವದಲ್ಲಿ ಬಂದಿದ್ದ ದೇವತೆಗಳಿಗೆ ಸ್ವಾಮೀಜಿಗಳ ನೇತೃತ್ವದಲ್ಲಿ ಬನ್ನಿ ಸಮರ್ಪಣೆ ಕಾರ್ಯ ನಡೆಯಿತು.

ಸಭೆಯಲ್ಲಿ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಸರಳ ರೀತಿಯಲ್ಲಿ ದಸರಾ ಉತ್ಸವಗಳನ್ನು ನಡೆಸಲಾಗಿತ್ತು. ಈ ಭಾರಿ ಅತ್ಯಂತ ವೈಭವ ಯುತವಾಗಿ 10 ದಿನಗಳ ಲಾಲ ವಿವಿದ ರೀತಿಯ ದಸರಾ ಅಚರಿಸಲಾಗಿದೆ. ಜನರ ಸಂಕಷ್ಟಗಳನ್ನು ದೂರಮಾಡಿ ನಾಡಿನಲ್ಲಿ ಸಮೃದ್ಧಿ ನೆಲೆಸುವಂತೆ ದೇವಿ ಆಶೀರ್ವದಿಸಲಿ ಎಂದರು.

ಚಿಲುಮೆ ಮಠದ ಮಠಾಧೀಶ ಹಾಗೂ ದಸರಾ ಸಮಿತಿ ಆಧ್ಯಕ್ಷ ಜಯದೇವ ಸ್ವಾಮೀಜಿ ಆಶೀರ್ವಚನ ನೀಡಿದರು.

2021ನೇ ಸಾಲಿನ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಉತ್ತಮ ಕನ್ನಡ ಚಲನ ಚಿತ್ರ ಪ್ರಶಸ್ತಿ ಗಳಿಸಿದ ದೊಡ್ಡಹಟ್ಟಿ ಬೋರೇಗೌಡ ಚಿತ್ರದ ನಿರ್ದೇಶಕ ತಾಲೂಕಿನ ಕಾಳೇನಹಳ್ಳಿ ಕೆಬ್ಬೇಕೊಪ್ಪಲು ಗ್ರಾಮದ ಕೆ.ಎಂ. ರಘು ಅವರಿಗೆ ದಸರಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅರೇ ಮಾದನಹಳ್ಳಿ ವಿಶ್ವಕರ್ಮ ಮೂಲ ಮಠದ ಶಿವಸುಜ್ಞಾನ ತೀರ್ಥ ಸ್ವಾಮೀಜಿ, ದೊಡ್ಡ ಮಠದ ಮಠಾಧೀಶ ಮಲ್ಲಿಕಾರ್ಜುನ ಸ್ವಾಮೀಜಿ, ಕೆಸವತ್ತೂರು ವಿರಕ್ತ ಮಠದ ಬಸವರಾಜೇಂದ್ರ ಸ್ವಾಮೀಜಿ, ಧರ್ಮ ಗುರುಗಳಾದ ಹಾಫೀಜ್ ನಯಾಜ್ ಅಹಮದ್, ಫಾದರ್ ಜಾನ್ ವಿನ್ ನಟರಾಜ್, ಪಪಂ ಅಧ್ಯಕ್ಷೆ ಶಾರದಾ ಪೃಥ್ವಿರಾಜ್, ಸದಸ್ಯರಾದ ಪ್ರದೀಪ್ ಕುಮಾರ್, ಅನಿಕೇತನ್, ಬಾಸಿದ್, ಅನುಷಾ ಇತರರಿದ್ದರು.

ಕಾರ್ಯಕ್ರಮದ ಸ್ಥಳದಲ್ಲಿ ಡಿಜೆ ಹಾಡಿಗೆ ಕುಣಿಯುತ್ತಿದ್ದ ಜನರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದ್ದರಿಂದ ಕೆಲಕಾಲ ಗದ್ದಲ ಏರ್ಪಟ್ಟಿತು.