ಅರಕಲಗೂಡು ತಾಲೂಕಿನ ಹೊನಗಾನಹಳ್ಳಿ ಗ್ರಾಮದಲ್ಲಿ ಮಳೆ ಗಾಳಿಗೆ ವಿದ್ಯುತ್ ಕಂಬ ಮತ್ತು ಮರ ರಸ್ತೆ ಅಡ್ಡಲಾಗಿ ಬಿದ್ದಿರುವುದು.  
ಜಿಲ್ಲೆ

ಅರಕಲಗೂಡಿನಲ್ಲಿ ಜಿಟಿ ಜಿಟಿ ಮಳೆ

ಅರಕಲಗೂಡು: ತಾಲೂಕಿನಲ್ಲಿ ಮುಂಗಾರು ಮಳೆ ಮುಂದುವರಿದಿದ್ದು, ಶನಿವಾರವೂ ಜಿಟಿ ಜಿಟಿ ಸುರಿಯಿತು.

ಶುಕ್ರವಾರ ರಾತ್ರಿ ಮಳೆ, ಗಾಳಿ ಹೊಡೆತಕ್ಕೆ ಹೊನಾಗನಹಳ್ಳಿ ಬಳಿ ರಸ್ತೆಗೆ ಅಡ್ಡಲಾಗಿ ವಿದ್ಯುತ್ ಕಂಬ ಹಾಗೂ ಮರವೊಂದು ಮುರಿದು ಬಿದ್ದು ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಶನಿವಾರ ಅರಣ್ಯ ಇಲಾಖೆ ಮತ್ತು ಸೆಸ್ಕ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ವಿದ್ಯುತ್ ಕಂಬ ಮತ್ತು ಮರವನ್ನು ತೆರವುಗೊಳಿಸಿದರು.

ಕಾಫಿ ಬೆಳೆಗೆ ವರದಾನ: ಅರೆ ಮಲೆನಾಡು ಪ್ರದೇಶವಾದ ಮಲ್ಲಿಪಟ್ಟಣ ಹೋಬಳಿಯಲ್ಲಿ ಉತ್ತಮ ಮಳೆಯಾಗಿದ್ದು, ರೈತರು ಕಾಫಿ ಗಿಡಗಳಿಗೆ ರಾಸಾಯನಿಕ ಗೊಬ್ಬರ ಹಾಕುತ್ತಿದ್ದಾರೆ. ಸದ್ಯಕ್ಕೆ ಬೀಳುತ್ತಿರುವ ಮಳೆ ಕಾಫಿ ಬೆಳೆಗೆ ಸಂಜೀವಿನಿಯಾಗಿದೆ. ಈ ಬಾರಿ ಮುಂಗಾರು ಮಳೆ ಕ್ಷೀಣಿಸಿದ್ದು, ಇದೀಗ ತಡವಾಗಿಯಾದರೂ ಉತ್ತಮವಾಗಿ ಬೀಳುತ್ತಿದ್ದು ಕಾಫಿ ಮತ್ತಿತರ ಬೆಳೆಗೆ ಅನುಕೂಲಕರವಾಗಿದೆ. ಕಾಫಿ ಬೆಳೆ ಬೆಳವಣಿಗೆಗೆ ರಸಗೊಬ್ಬರ ನೀಡಲಾಗುತ್ತಿದೆ ಎಂದು ಕಾಫಿ ಬೆಳೆಗಾರ ರಂಗಸ್ವಾಮಿ ತಿಳಿಸಿದರು.

ಬಿತ್ತನೆಯಾಗಿದ್ದ ಮುಸುಕಿನ ಜೋಳ, ಆಲೂಗಡ್ಡೆ, ಶುಂಠಿ ಬೆಳೆಗಳು ಕಳೆದೊಂದು ತಿಂಗಳಿನಿಂದ ಮಳೆ ಕೊರತೆಯಿಂದ ಬಾಡುತ್ತಿದ್ದವು. ಈ ಮಧ್ಯೆ ಒಂದೆರಡು ಬಾರಿ ತುಂತುರು ಮಳೆ ಬಿದ್ದಿತಾದರೂ ಭೂಮಿ ಹದವಾಗಿರಲಿಲ್ಲ. ಇದರಿಂದ ಬೆಳೆಗಳು ನೀರಿಲ್ಲದೆ ಒಣಗುತ್ತಿದ್ದವು. ಇದೀಗ ಸುರಿದ ಮಳೆಗೆ ಹಾಕಿರುವ ಜೋಳ, ಮೆಕ್ಕೆಜೋಳ, ಆಲೂಗಡ್ಡೆ ಬೆಳೆಗಳು ಚೇತರಿಸಿಕೊಳ್ಳತೊಡಗಿವೆ.

ಮಳೆ ಇಲ್ಲದ್ದರಿಂದ ಹಸಿರು ಮರೆಯಾಗಿ ಬಾಡತೊಡಗಿದ್ದವು. ಈ ವಾರದಲ್ಲಿ ಮಳೆಯಾಗದಿದ್ದರೆ, ಈ ಎಲ್ಲ ಬೆಳೆಗಳು ಪೂರ್ಣ ಕೈಕೊಡುತ್ತವೆ. ಇಳುವರಿಯೂ ಬರುವುದಿಲ್ಲ ಎಂದೇ ರೈತರು ಆತಂಕದಲ್ಲಿದ್ದರು. ಇಂತಹ ಸಂಕಷ್ಟ ಸನ್ನಿವೇಶದಲ್ಲಿ ವರುಣ ಕೃಪೆ ತೋರಿದ್ದರಿಂದ ಬೆಳೆಗಳು ಹಸಿರಾಗಿವೆ ಎಂದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.