ಜಿಲ್ಲೆ

ಅರಕನಹಳ್ಳದ ಬಳಿ ಕಾಡಾನೆ ಪ್ರತ್ಯಕ್ಷ

ಹನೂರು: ಪಟ್ಟಣದಿಂದ ಅಜ್ಜೀಪುರ ಗ್ರಾಮಕ್ಕೆ ತೆರಳುವ ಅರಕನಹಳ್ಳದ ಬಳಿ ಶನಿವಾರ ಸಂಜೆ ಕಾಡಾನೆಯೊಂದು ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕವನ್ನು ಉಂಟು ಮಾಡಿತು.

ಈ ಮಾರ್ಗವು ಮಲೆಮಹದೇಶ್ವರ ವನ್ಯಜೀವಿ ವಲಯದ ಹನೂರು ಬಫರ್ ವಲಯಕ್ಕೆ ಸೇರಿದೆ. ಬೇಸಿಗೆ ವೇಳೆ ಅರಣ್ಯ ಪ್ರದೇಶದೊಳಗೆ ನೀರಿನ ಕೊರತೆ ಉಂಟಾದಲ್ಲಿ ಮಾತ್ರ ಕಾಡಾನೆಗಳು ನೀರನ್ನು ಅರಸಿ ಅರಕನಹಳ್ಳಕ್ಕೆ ಆಗಮಿಸುತ್ತಿದ್ದವು. ಆದರೆ ಇತ್ತೀಚೆಗೆ ಈ ಮಾರ್ಗದಲ್ಲಿ ಕಾಡಾನೆಗಳು ರಸ್ತೆಗೆ ಆಗಮಿಸುತ್ತಿವೆ. ಕಳೆದ ತಿಂಗಳು 3 ಕಾಡಾನೆಗಳು ಅರಕನಹಳ್ಳದ ರಸ್ತೆ ಬದಿಯೇ ಆಗಮಿಸಿ ಕೆಲಕಾಲ ನಿಂತು ಸಾರ್ವಜನಿಕರಲ್ಲಿ ಆತಂಕವನ್ನು ಉಂಟು ಮಾಡಿತ್ತು. ಶನಿವಾರ ಇದೇ ಸ್ಥಳದ ಆಸುಪಾಸಿನಲ್ಲಿ ಕಾಡಾನೆಯೊಂದು ರಸ್ತೆಯನ್ನು ದಾಟುತ್ತಿದ್ದು, ಸಂಚರಿಸುತ್ತಿದ್ದ ವಾಹನ ಸವಾರರು ಅದರಲ್ಲೂ ಬೈಕ್ ಸವಾರರು ಆತಂಕಕ್ಕೆ ಒಳಗಾದರು. ಬಳಿಕ ಕಾಡಾನೆ ಕಾಡಿನತ್ತ ತೆರಳಿತು. ಕೆಲವರು ಕಾಡಾನೆಯ ಚಲನವಲವನ್ನು ಕುತೂಹಲದಿಂದ ವೀಕ್ಷಿಸಿ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.