ಜಿಲ್ಲೆ

ಅಯ್ಯಪ್ಪಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ

ಚಿತ್ರದುರ್ಗ: ಮೆದೇಹಳ್ಳಿ ರಸ್ತೆಯ ಅಯ್ಯಪ್ಪಸ್ವಾಮಿ ಸನ್ನಿಧಾನದಲ್ಲಿ ಭಾನುವಾರ ನವಗ್ರಹ ಸಹಿತ ಶ್ರೀರುದ್ರ ಹೋಮ, ಪೂರ್ಣಾಹುತಿ, ಶನಿವಾರ ಗಣಪತಿ ಅಥರ್ವ ಶೀರ್ಷ ಹೋಮ, ಪೂರ್ಣಾಹುತಿ ನಂತರ ಮಹಾಮಂಗಳಾರತಿ ಪೂಜೆ ನೆರವೇರಿದವು.

ಸ್ವಾಮಿಯ ದೇಗುಲದ ರಜತ ಮಹೋತ್ಸವ ಹಾಗೂ 2ನೇ ಮಹಾಕುಂಭಾಭಿಷೇಕದ ಅಂಗವಾಗಿ ಸಂಜೆ ನಡೆದ ಧಾರ್ಮಿಕ ಕಾರ್ಯಕ್ರಮವನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಕೋಟೆನಾಡು ಚಿತ್ರದುರ್ಗ ಭಾವ್ಯಕತ್ಯೆಯ ಶಕ್ತಿ ಕೇಂದ್ರವಾಗಿದೆ. ಇಲ್ಲಿನ ದೇಗುಲಗಳು, ಮಸೀದಿಗಳು, ಚರ್ಚ್‌ಗಳು, ಮಠಮಾನ್ಯಗಳು, ದರ್ಗಾಗಳು ಸರ್ವಧರ್ಮೀಯರನ್ನು ಪ್ರೀತಿಸುವ, ಸ್ವಾಗತಿಸುವ ತಾಣವಾಗಿವೆ ಎಂದು ಬಣ್ಣಿಸಿದರು.

ಭಾರತ ಮಾತೆ ಜಗಜ್ಜನನಿಯಾಗಿದ್ದು, ದೇಶವೂ ಶಾಂತಿಯ ತೋಟವಾಗಿದೆ. ಎಲ್ಲ ಜಾತಿ, ಧರ್ಮದವರು ಇಲ್ಲಿ ಕೂಡಿ ಬಾಳುತ್ತಿದ್ದಾರೆ. ವಿಶ್ವ ನಮ್ಮ ಸಂಸ್ಕೃತಿಯ ಕಡೆ ಮುಖ ಮಾಡಿದೆ. ಈ ಮಣ್ಣಿಗೆ ವಿಶೇಷ ಶಕ್ತಿ ಇದೆ ಎಂದರು.

ದೇಶವೂ ಸಂತರು, ಶರಣರು, ಸನ್ಯಾನಿಗಳು, ಮಹರ್ಷಿಗಳು, ತಪಸ್ವಿಗಳು, ಸೂಫಿಗಳು ಜನಿಸಿದ ಬೀಡಾಗಿದೆ. ಚಿತ್ರದುರ್ಗ ಸಹಬಾಳ್ವೆಗೂ ಹೆಸರಾಗಿದೆ. ಇದಕ್ಕೆ ದೇಗುಲದಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ಕೆ ಎಲ್ಲ ಸಮುದಾಯದವರು ಪಾಲ್ಗೊಳ್ಳುತ್ತಿರುವುದೇ ಉತ್ತಮ ನಿದರ್ಶನ ಎಂದು ಹೇಳಿದರು.

ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ಉತ್ತಮ ಕಾರ್ಯದಲ್ಲಿ ತೊಡಗಿದ್ದು, ಸಮಿತಿಯವರು ನಗರದ ವಿವಿಧ ಉದ್ಯಾನಗಳಲ್ಲಿ ತೆಂಗಿನ ಸಸಿ ನೆಡುವುದರ ಜೊತೆಗೆ ಕಲ್ಪವೃಕ್ಷವನ್ನು ಬೇರೆಯವರಿಗೂ ಉಡುಗೊರೆಯಾಗಿ ನೀಡಲಿ ಎಂದು ಸಲಹೆ ನೀಡಿದರು.

ವಕೀಲ ಪಾತ್ಯರಾಜನ್ ಮಾತನಾಡಿ, ಜಾತಿ-ಧರ್ಮ ಮೀರಿ ದೇವರ ಕಾರ್ಯದಲ್ಲಿ ನಿರತರಾಗಬೇಕು. ಈ ದೇಗುಲ ನಿರ್ಮಿಸಲು ಡಾ.ರಾಜ್‌ಕುಮಾರ್ ಅವರ ಸಂಗೀತ ಸಂಜೆ ಕಾರ್ಯಕ್ರಮ ಕೂಡ ಹಣ ಸಂಗ್ರಹಿಸುವಲ್ಲಿ ನೆರವಾಯಿತು. ದೇಗುಲವೂ ಅತ್ಯುತ್ತಮವಾಗಿ ನಿರ್ಮಾಣವಾಗಿದ್ದು, ಕೇರಳದ ಶಬರಿಮಲೆ ಮಾದರಿಯಲ್ಲೇ ಇರುವುದು ಸಂತಸದ ಸಂಗತಿ ಎಂದರು.

ಟ್ರಸ್ಟ್‌ನ ಅಧ್ಯಕ್ಷ ಶರಣ್‌ಕುಮಾರ್, ಬಸವೇಶ್ವರ ಟ್ರೇಡಿಂಗ್ ಕಂಪನಿಯ ಎಚ್.ಕೊಟ್ರೇಶ್ ಶ್ರೇಷ್ಟಿ, ಕರುನಾಡ ವಿಜಯಸೇನೆ ಅಧ್ಯಕ್ಷ ಕೆ.ಟಿ.ಶಿವಕುಮಾರ್, ಜಿಲ್ಲಾಸ್ಪತ್ರೆಯ ಶುಶ್ರೂಷಕ ಮಲ್ಲಣ್ಣ, ಮುಖಂಡ ಎಂ.ಸಿ.ಶಂಕರ್, ವರ್ತಕರಾದ ಉದಯಶೆಟ್ಟಿ, ಲಕ್ಷ್ಮಣ್ ಸೋನಿ, ಸುರೇಶ್ ಬಾಬು, ಗುತ್ತಿಗೆದಾರ ಮಂಜುನಾಥ್, ಆರ್ಯ ಈಡಿಗರ ಸಂಘದ ಅಧ್ಯಕ್ಷ ಜೀವನ್ ಇತರರಿದ್ದರು.