ಚಿತ್ರದುರ್ಗ: ಲಕ್ಷಾಂತರ ಮಾಲಾಧಾರಿಗಳ ಆರಾಧ್ಯ ದೈವ ಮೆದೇಹಳ್ಳಿ ರಸ್ತೆಯಲ್ಲಿ ಇರುವ ಅಯ್ಯಪ್ಪಸ್ವಾಮಿ ಸನ್ನಿಧಿಯಲ್ಲಿ ಬ್ರಹ್ಮೋತ್ಸವ ಕಾರ್ಯಕ್ರಮ ಸೋಮವಾರ ಆರಂಭವಾಗಿದ್ದು, ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ. 25ನೇ ವರ್ಷದ ಸಂಭ್ರಮಾಚರಣೆಗೆ ಶಬರಿಮಲೆ ಮಾದರಿಯಲ್ಲೇ ಪೂಜಾ ವಿಧಿವಿಧಾನಗಳು ನೆರವೇರಲಿವೆ.
ಅಯ್ಯಪ್ಪನ ದರ್ಶನಕ್ಕೆ ಶಬರಿಮಲೆ ಪುಣ್ಯಕ್ಷೇತ್ರಕ್ಕೆ ತೆರಳಲು ಸಾಧ್ಯವಾಗದ ಭಕ್ತರಿಗೆ ಅದೇ ಮಾದರಿಯ ಸ್ವಾಮಿಯ ಸುಂದರ ಮೂರ್ತಿ, ಐತಿಹಾಸಿಕ ಕೋಟೆನಗರಿಯ ದೇಗುಲ ಕೈ ಬೀಸಿ ಕರೆಯುತ್ತಿದೆ. ಕಣ್ತುಂಬಿಕೊಳ್ಳಲು ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ಅನುವು ಮಾಡಿಕೊಟ್ಟಿದೆ. ಸನ್ನಿಧಿಗೆ ಬಂದ ಅನೇಕ ಭಕ್ತರು ಒಳಿತನ್ನು ಕಂಡಿದ್ದಾರೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ.
ಡಿ. 16ರಿಂದ 21ರವರೆಗೂ ನಿತ್ಯ ಬೆಳಗ್ಗೆ 6ಕ್ಕೆ ಮಹಾಗಣಪತಿ ಹೋಮ, 7ಕ್ಕೆ ಸುದರ್ಶನ ಹೋಮ, ಅಭಿಷೇಕ, ಉಷಂ ಪೂಜೆ, 8.30ಕ್ಕೆ ನವಕಂ ಪಂಚಗವ್ಯಂ, 10ಕ್ಕೆ ಕಳಸ ಮತ್ತು 11ಕ್ಕೆ ಉಚ್ಛ ಪೂಜೆ, ಸಂಜೆ 6ಕ್ಕೆ ಅಂಕುರ, ಮೊಳ ಪೂಜೆ, 6.30ಕ್ಕೆ ದೀಪಾರಾಧನೆ, 7.30ಕ್ಕೆ ಭಗವತಿ ಸೇವಾ, ರಾತ್ರಿ 8ಕ್ಕೆ ಅತ್ತಳ ಪೂಜೆ ನೆರವೇರಿಲಿದೆ. ಪೂಜಾ ಮಹೋತ್ಸವಕ್ಕೆ ಚಾಲನೆ ನೀಡುವ ಮುನ್ನ ಧ್ವಜಸ್ಥಂಭ ಪೂಜೆ ಜರುಗಲಿದೆ. 22ರಂದು ಮಧ್ಯಾಹ್ನ 12ಕ್ಕೆ ಮಹಾ ಅನ್ನದಾನ ಸೇವೆ ನಡೆಯಲಿದೆ.
ಪ್ರತಿ ವರ್ಷ ಮಕರ ಸಂಕ್ರಾಂತಿ ಹಬ್ಬದಂದು 25ರಿಂದ 35 ಸಾವಿರ ಭಕ್ತರು ಸ್ವಾಮಿಯ ದರ್ಶನ ಪಡೆಯಲಿಕ್ಕಾಗಿ ಇಲ್ಲಿಗೆ ಬರುತ್ತಾರೆ. ಈ ವೇಳೆ ಸಂಜೆ ನಡೆಯುವ ಲಕ್ಷ ದೀಪೋತ್ಸವದಲ್ಲಿ ಸಾಲು-ಸಾಲಾಗಿ ಬೆಳಗುವ ಅಣತೆಗಳು ವೈಭವೋಪೇತ ದೃಶ್ಯಕ್ಕೆ ಸಾಕ್ಷಿಯಾಗಿದ್ದು, ಧಾರ್ಮಿಕ ಶ್ರದ್ಧಾ-ಭಕ್ತಿಯನ್ನು ಹೆಚ್ಚಿಸುತ್ತಿದೆ. ದೀಪ ಹಚ್ಚುವ ಸದ್ಭಕ್ತರು ಕುಟುಂಬ, ನಾಡಿನ ಒಳಿತಿಗಾಗಿಯೂ ಪ್ರಾರ್ಥಿಸುತ್ತಾರೆ. 2025ರ ಜ. 13ರಂದು ಸಂಜೆ 6ಕ್ಕೆ ಅಯ್ಯಪ್ಪಸ್ವಾಮಿಯ ಆಭರಣ ಮೆರವಣಿಗೆ, 14ರಂದು ಸಂಜೆ 6ಕ್ಕೆ ಲಕ್ಷ ದೀಪೋತ್ಸವ ಜರುಗಲಿದೆ.
ಕೇರಳದ ತಂತ್ರಿಗಳಿಂದ ಪೂಜೆ: ಶಬರಿಮಲೆಯಲ್ಲಿ ನಡೆಯುವಂತೆಯೇ ಇಲ್ಲಿನ ಅಯ್ಯಪ್ಪಸ್ವಾಮಿಗೆ ಕೇರಳದ ಪ್ರಧಾನತಂತ್ರಿ ವಿಷ್ಣುಭಟ್ಟಾದ್ರಿಪಾಡ್ ಅವರಿಂದ ತಂತ್ರಶಾಸ್ತ್ರದ ಮೂಲಕ ಆರು ದಿನದ ಬ್ರಹ್ಮೋತ್ಸವ ಮತ್ತು ಪಡಿಪೂಜೆ ಮಹೋತ್ಸವ ನೆರವೇರಿಸುತ್ತ ಬರಲಾಗಿದೆ. ದೇಗುಲದ ಪ್ರಧಾನ ಅರ್ಚಕ ಸತೀಶ್ ಶರ್ಮಾ, ಗುರುಸ್ವಾಮಿ ರಮೇಶ್ ಉಸ್ತುವಾರಿ ವಹಿಸಿದ್ದಾರೆ.
ರಾಜ್ಯದ ಯಾವುದೇ ಮೂಲೆಯಿಂದ ಬಂದರು ಮಾಲಾಧಾರಿಗಳಿಗೆ ಅಗತ್ಯ ವ್ಯವಸ್ಥೆ ಕಲ್ಪಿಸುವ ರಾಜ್ಯದ 2ನೇ ದೇಗುಲ ಇದಾಗಿದೆ. ಭಕ್ತರ ಸಂಖ್ಯೆ ಹೆಚ್ಚಾದರೂ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಲಾಗಿದೆ ಎಂದು ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಶರಣಕುಮಾರ್ ತಿಳಿಸಿದರು.
ಟ್ರಸ್ಟ್‌ನ ಉಪಾಧ್ಯಕ್ಷ ಮಲ್ಲಿಕಾರ್ಜುನ್, ಕಾರ್ಯದರ್ಶಿ ಎಂ.ಪಿ.ವೆಂಕಟೇಶ್, ರಮೇಶ್ ಸ್ವಾಮಿ (ಗುರುಸ್ವಾಮಿ), ನಿರ್ದೇಶಕರು, ಸದಸ್ಯರು ಸೇವೆ ಸಲ್ಲಿಸುತ್ತಿದ್ದಾರೆ.