ಜಿಲ್ಲೆ

ಅಯ್ಯಪ್ಪ ಸ್ವಾಮಿ ಉತ್ಸವ ಸಂಪನ್ನ

ಲಲಾಟಾಕ್ಷ ಎಸ್

ವಿರಾಜಪೇಟೆ: ವಿರಾಜಪೇಟೆ ಸಮೀಪದ ಹೆಗ್ಗಳ ಗ್ರಾಮದ ಎಡಮಕ್ಕಿಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವಾರ್ಷಿಕ ಮಹೋತ್ಸವವು ಶ್ರದ್ಧಾ ಭಕ್ತಿಯಿಂದ ಜರುಗಿತು.

ಶನಿವಾರ ಹಾಗೂ ಭಾನುವಾರ ಧಾರ್ಮಿಕ ಕಾರ್ಯಕ್ರಮದೊಂದಿಗೆ ಉತ್ಸವ ಸಂಪನ್ನಗೊಂಡಿತು. ಮೊದಲನೆಯ ದಿವಸ ಬೆಳಗ್ಗೆ ಗಣಪತಿ ಹೋಮ, ಧ್ವಜಾರೋಹಣ, ದೀಪಾರಾಧನೆ ನಡೆಯಿತು. ಸಂಜೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಉತ್ಸವದ ಎರಡನೆಯ ದಿನ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಬೆಳಗ್ಗೆಯಿಂದಲೇ ನಡೆದವು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಸೇವೆಯು ನಡೆಯಿತು. ಸಂಜೆ ದೀಪಾರಾಧನೆ ನಡೆದು ಬೇಟೋಳಿ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬೇಟೋಳಿಯಿಂದ ತಲಿಪೋಲಿ ಮೆರವಣಿಗೆಯು ಎಡಮಕ್ಕಿ ಸಾರ್ವಜನಿಕ ಮೈದಾನದವರೆಗೆ ಸಾಗಿ ದೇವಸ್ಥಾನ ಪ್ರವೇಶಿಸಿತು. ಮಹಿಳೆಯರು ಹಾಗೂ ಮಕ್ಕಳು ದೀಪವನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ನಂತರ ತಾಯಂಭಗಂ ಸೇವೆ ನಡೆಯಿತು.

ಅಯ್ಯಪ್ಪ ಮಾಲಾಧಾರಿಗಳಿಂದ ಭಜನೆ ಜರುಗಿತು. ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನದ ತಂತ್ರಿಗಳಾದ ಬ್ರಹ್ಮಶ್ರೀ ಮುಲ್ಲಪಲ್ಲಿ ಕೃಷ್ಣನ್ ನಂಬೂದಿರಿ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕರಾದ ವೇಣುಗೋಪಾಲ್ ಭಟ್ ನೇತೃತ್ವದಲ್ಲಿ ನಡೆಯಿತು. ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ವಿಜಯನ್, ಕಾರ್ಯದರ್ಶಿ ವಿನುತ, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಮಹೇಶ್, ಮಹಿ ಕೂರ್ಗ್ ಅವರಿಂದ ಸಿಡಿಮದ್ದು ಪ್ರದರ್ಶನ ನಡೆಯಿತು.