ಜಿಲ್ಲೆ

ಅಯೋಧ್ಯೆಯಲ್ಲಿ ವಾಲ್ಮೀಕಿ ಮಂದಿರ ನಿರ್ಮಿಸಿ

ಚಿತ್ರದುರ್ಗ: ಅಯೋಧ್ಯೆಯಲ್ಲಿ ಮಹರ್ಷಿ ವಾಲ್ಮೀಕಿ ಮಂದಿರ ನಿರ್ಮಿಸಲು ಕೇಂದ್ರ ಸರ್ಕಾರ, ಯುಪಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಚಿತ್ರನಾಯಕ ವೇದಿಕೆ ಅಧ್ಯಕ್ಷ ಕೆ.ಟಿ.ಪ್ರಶಾಂತ್‌ಕುಮಾರ್ ಒತ್ತಾಯಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ. 22ರಂದು ಶ್ರೀರಾಮನ ಭವ್ಯ ಮಂದಿರದೊಳಗಿನ ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ವಾಲ್ಮೀಕಿ ಮಹರ್ಷಿಗೂ ಸಮಾನ ಗೌರವ ಸಿಗುವಂತಾಗಲು ಮಂದಿರ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಹಿಂದು ಧರ್ಮದ ಮಹಾನ್ ಗ್ರಂಥ ರಾಮಾಯಣ ರಚಿಸಿದ ವಾಲ್ಮೀಕಿ ಅವರ ಗೌರವಾರ್ಥ ಈಗಾಗಲೇ ಅಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ, ಭೋಜನಾಲಯಕ್ಕೆ ಮಾತೆ ಶಬರಿ ಎಂದು ನಾಮಕರಣ ಮಾಡಿರುವುದು ಮಹನೀಯರಿಗೆ ಸಂದ ಗೌರವ ಎಂದರು.

ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ನಡೆ ಸ್ವಾಗತಾರ್ಹ. ಮಹರ್ಷಿ ವಾಲ್ಮೀಕಿ ಮಂದಿರ ಜೀರ್ಣೋದ್ಧಾರ ಮಾಡಿದರೆ, ಕೋಟ್ಯಂತರ ಭಕ್ತರ ಆರಾಧ್ಯ ದೈವ ಶ್ರೀರಾಮನಿಗೆ ನೀಡಿದಷ್ಟೇ ಗೌರವ ಮಹರ್ಷಿ ಅವರಿಗೂ ನೀಡಿದಂತಾಗುತ್ತದೆ. ಈ ಕುರಿತು ಗಮನಹರಿಸಬೇಕು ಎಂದು ಕೋರಿದರು.

ಗೌರಿ ರಾಜಕುಮಾರ, ಬಚ್ಚಬೋರನಹಟ್ಟಿ ಬೋರಯ್ಯ, ಪ್ರಶಾಂತ್, ಬಸವರಾಜ್, ವಕೀಲ ಅಶೋಕ್ ಬೆಳಗಟ್ಟ ಇತರರಿದ್ದರು.