ಬಾಗಲಕೋಟೆ: ಅಯೋಧ್ಯೆ ರಾಮಮಂದಿರಲ್ಲಿ ೪೮ ದಿನಗಳ ಕಾಲ ನಡೆದಿರುವ ಮಂಡಲರಾಧನೆಯಲ್ಲಿ ಜಿಲ್ಲೆಯ ಇಬ್ಬರು ಪಂಡಿತರ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿದವು.
ರಾಮಮಂದಿರದ ಬಾಲರಾಮ ಮೂರ್ತಿ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ಮಂಡಲರಾಧನೆ ಪೂಜೆ ನಡೆಯುತ್ತಿದ್ದು, ಮುಧೋಳ ನಗರದ ಗುರುನಾಥ ಜೋಶಿ ಹಾಗೂ ಜಮಖಂಡಿ ನಗರದ ಗಣೇಶ್ ಜೋಶಿ ನೇತೃತ್ವದಲ್ಲಿ ಎರಡು ದಿನಗಳ ಆರಾಧನೆ ಜರುಗಲಿದೆ. ಬೆಳಗಾವಿ ಜಿಲ್ಲೆಯ ಮುರುಗೋಡದ ಶಿವಚಿದಂಬರೇಶ್ವರ ವೇದ ಸಂಸ್ಕೃತಿ ಪಾಠಶಾಲೆಯಲ್ಲಿ ಅಧ್ಯಯನ ಮಾಡಿರುವ ೧೪ ಜನ ಇವರಿಗೆ ಸಾಥ್ ನೀಡಿದ್ದು ವಿಶೇಷ. ಬೆಳಗಿನ ಜಾವ ನಡೆದ ರಾಮತಾರಕ ಹೋಮ ಹಾಗೂ ವೇದ ಪಾರಾಯಣದಲ್ಲಿ ಭಾಗವಹಿಸಿದ್ದರು.
ಗುರುನಾಥ ಜೋಷಿ ಅವರು ಮೂಲತಃ ಮುಧೋಳ ತಾಲೂಕಿನ ಮಾಚಕನೂರು ಗ್ರಾಮದವರು ಇದ್ದು, ಸದ್ಯ ಮುಧೋಳ ನಗರದಲ್ಲಿ ವಾಸವಾಗಿದ್ದಾರೆ. ಸದ್ಗುರು ಶ್ರೀ ಚಿದಂಬರ ವೈದಿಕ ಜೋತಿಷ್ಯಾಲಯ ನಡೆಸುತ್ತಿದ್ದಾರೆ. ಜಮಖಂಡಿಯ ದತ್ತನಗರದ ನಿವಾಸಿ ಗಣೇಶ್ ಜೋಶಿ ಪುರೋಹಿತ ಕಾರ್ಯದ ಜೊತೆಗೆ ಜೋತಿಷ್ಯ ಕಾರ್ಯ ಮಾಡುತ್ತಿದ್ದಾರೆ.