ಜಿಲ್ಲೆ

ಅಯೋಧ್ಯಾ ಹಿಂದುಗಳ ಭಕ್ತಿಯ ಕೇಂದ್ರ

ಚಿತ್ರದುರ್ಗ: ಶ್ರೀರಾಮನ ಜನ್ಮಭೂಮಿ ಅಯೋಧ್ಯಾ ಹಿಂದುಗಳ ಭಕ್ತಿಯ ಕೇಂದ್ರ. ಅನೇಕ ಶತಮಾನಗಳ ದೊಡ್ಡ ಹೋರಾಟದ ಫಲವಾಗಿ 2024ರ ಜನವರಿಯಲ್ಲಿ ರಾಮಮಂದಿರ ಲೋಕಾರ್ಪಣೆಯಾಗುತ್ತಿದೆ. ಇದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಎಂದು ಸರ್ದಾರ್ ಸೇವಾಲಾಲ್ ಶ್ರೀ ಬಣ್ಣಿಸಿದರು.

ಅಯೋಧ್ಯಾದಿಂದ ಬಂದಿರುವ ಮಂತ್ರಾಕ್ಷತೆಯನ್ನು ಜಿಲ್ಲೆಯ ತಾಲೂಕು ಕೇಂದ್ರಗಳಿಗೆ ವಿತರಿಸಲು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನಿಂದ ಡಿಸಿಸಿ ಬ್ಯಾಂಕ್ ಮುಂಭಾಗವಿರುವ ಶ್ರೀರಾಮ ಮಂದಿರದ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.

ಹಿಂದುಗಳನ್ನು ಮತ್ತಷ್ಟು ಸಂಘಟಿಸುವ ಶಕ್ತಿ ಕೇಂದ್ರವಾಗಿಯೂ ಅಯೋಧ್ಯಾ ಹೊರಹೊಮ್ಮಲಿದೆ. ಧರ್ಮ ರಕ್ಷಿಸಿದರೆ, ಅದು ನಮ್ಮೆಲ್ಲರನ್ನು ರಕ್ಷಿಸುತ್ತದೆ ಎಂಬುದಕ್ಕೆ ಈ ಕ್ಷೇತ್ರ ಸಾಕ್ಷಿಯಾಗಲಿದೆ. ಮಂದಿರ ನಿರ್ಮಾಣಕ್ಕಾಗಿ ಅನೇಕ ತೊಂದರೆ ಎದುರಾದರೂ ಶ್ರೀರಾಮನ ಭಕ್ತರು ಯಾವುದನ್ನು ಲೆಕ್ಕಿಸದೇ ಹಠಕ್ಕೆ ಬಿದ್ದಿದ್ದರಿಂದ ಕೊನೆಗೂ ನಿರ್ಮಾಣವಾಗಿದೆ. ಕೋಟ್ಯಂತರ ಭಕ್ತರ ಕನಸು ಕೆಲವೇ ದಿನಗಳಲ್ಲಿ ನನಸಾಗಲಿದೆ ಎಂದರು.

ಧರ್ಮ ಮಾರ್ಗದಲ್ಲಿ ನಡೆದವರಿಗೆ ಜಯ ಖಂಡಿತ. ಅಯೋಧ್ಯಾ ಕರ ಸೇವೆಯಲ್ಲಿ ಅನೇಕರು ಭಾಗಿಯಾಗಿದ್ದರು. ಇದಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರ ಸೇವೆ ಸ್ಮರಣೆ ಮಾಡಬೇಕಿದೆ. ಮಂತ್ರಾಕ್ಷತೆ ಜಿಲ್ಲೆಯ ಪ್ರತಿ ಮನೆ-ಮನೆಗೂ ತಲುಪಿಸಬೇಕಿದೆ ಎಂದು ಸಲಹೆ ನೀಡಿದರು.

ಇಮ್ಮಡಿ ಕೇತೇಶ್ವರ ಶ್ರೀ ಮಾತನಾಡಿ, ರಾಮಮಂದಿರ ಲೋಕಾರ್ಪಣೆ ಹಿಂದುಗಳು ಸಂಭ್ರಮಿಸುವ ದಿನವಾಗಲಿದೆ. ಆತನ ಚರಿತ್ರೆ ಎಲ್ಲರೂ ತಿಳಿಯಬೇಕಿದೆ. ಧರ್ಮ ರಕ್ಷಣೆಗೆ ಪಣ ತೊಡಬೇಕಿದೆ ಎಂದರು.

ಬಜರಂಗದಳದ ಪ್ರಾಂತ ಸಹ ಸಂಯೋಜಕ ಪ್ರಭಂಜನ್ ಮಾತನಾಡಿ, ಎಲ್ಲಾ ಸಮಸ್ಯೆಗಳಿಗೂ ಪರಿಹಾರ, ಯಾವ ರೀತಿ ಬದುಕು ನಡೆಸಬೇಕು ಎಂಬುದನ್ನು ರಾಮಾಯಣದಿಂದ ತಿಳಿಯಲು ಸಾಧ್ಯವಿದೆ. ಪ್ರತಿ ಮನೆಯಲ್ಲೂ ರಾಮ, ಸೀತೆಯಂತಹ ಮಕ್ಕಳ ಜನನವಾಗಬೇಕೆಂದು ಅನೇಕರು ಆಪೇಕ್ಷಿಸುತ್ತಾರೆ. ರಾಮ ಸರ್ವ ಕಾಲಕ್ಕೂ, ಎಲ್ಲ ಧರ್ಮೀಯರಿಗೂ ಆದರ್ಶನಾಗಿದ್ದಾನೆ ಎಂದು ಹೇಳಿದರು.

ಇದೇ ವೇಳೆ ರಾಮ ಮಂದಿರದಲ್ಲಿ ಮಂತ್ರಾಕ್ಷತೆ, ಕರಪತ್ರಗಳಿಗೆ ಪೂಜೆ ಸಲ್ಲಿಸಲಾಯಿತು. ಚಿತ್ರದುರ್ಗ, ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ, ಮೊಳಕಾಲ್ಮುರು, ಹಿರಿಯೂರು ತಾಲೂಕಿಗೆ ಮಂತ್ರಾಕ್ಷತೆ ವಿತರಿಸಲಾಯಿತು. ಕರ ಸೇವಕರನ್ನು ಸನ್ಮಾನಿಸಲಾಯಿತು.

ಸ್ವಯಂ ಸೇವಕರಾದ ಮಧುಕರ್, ನಾಗರಾಜ್, ವಿಎಚ್‌ಪಿ, ಬಜರಂಗದಳದ ವಿಭಾಗ ಸಹ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ಕಾರ್ಯದರ್ಶಿ ರುದ್ರೇಶ್ ಇತರರಿದ್ದರು.