ರಿಪ್ಪನ್‌ಪೇಟೆ ಸಮೀಪದ ಅಮ್ಮನಘಟ್ಟದ ಚಾರಣದಲ್ಲಿ ಪಾಲ್ಗೊಂಡಿದ್ದ ಎಸ್‌ಪಿ ವಿಥುನ್‌ಕುಮಾರ್, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ. 
ಜಿಲ್ಲೆ

ಅಮ್ಮನಘಟ್ಟದಲ್ಲಿ ಪೊಲೀಸರ ಚಾರಣ

ರಿಪ್ಪನ್‌ಪೇಟೆ: ಹೊಸನಗರ ತಾಲೂಕಿನ ಪುರಾಣ ಪ್ರಸಿದ್ಧ ಜೇನುಕಲ್ಲಮ್ಮನ ಘಟ್ಟದಲ್ಲಿ ಸೋಮವಾರ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಪೊಲೀಸರು ಚಾರಣ ನಡೆಸಿದರು.

ಮುಂಜಾನೆ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಸಾರಥ್ಯದಲ್ಲಿ ಉತ್ಸಾಹದಿಂದ ಚಾರಣ ಆರಂಭಿಸಿದ ಪೊಲೀಸರ ತಂಡವು, ಕಲ್ಲು, ಗಿಡಗಂಟಿಗಳ ಕಿರುದಾರಿಯಲ್ಲಿ ಸಾಗಿ ಬೆಟ್ಟದ ಮೇಲೇರಿತು. ನಿಸರ್ಗದ ರಮಣೀಯ ದೃಶ್ಯವನ್ನು ವೀಕ್ಷಿಸಿ ಪುಳಕಿತರಾದರು.

ಜೇನುಕಲ್ಲಮ್ಮ ದೇವಿ ದರ್ಶನ ಪಡೆದು ದೇವಾಲಯದ ಮೆಟ್ಟಿಲುಗಳ ಮೇಲೆ ಕುಳಿತು ವಿಶ್ರಾಂತಿ ಪಡೆದರು. ಪೊಲೀಸರ ದೈನಂದಿನ ಒತ್ತಡದ ಕಾರ್ಯಗಳ ನಡುವೆ ಆರೋಗ್ಯ ಹಾಗೂ ಮಾನಸಿಕ ಸ್ಥಿಮಿತ ಕಾಯ್ದುಕೊಳ್ಳುವುದು ಅಗತ್ಯ. ಇಂತಹ ಚಾರಣಗಳಿಂದ ಪೊಲೀಸರಲ್ಲಿ ಲವಲವಿಕೆ ಉಂಟಾಗುತ್ತದೆ ಎನ್ನುವ ಕಾರಣದಿಂದ ಯೋಗ, ವ್ಯಾಯಾಮ, ನಡಿಗೆಗಳಂತಹ ಚಟುವಟಿಕೆಗಳಿಗೆ ಇಲಾಖೆ ಆದ್ಯತೆ ನೀಡಿದ್ದು, ಅದರಂತೆ ಬೆಟ್ಟದ ಚಾರಣ ಕೈಗೊಳ್ಳಲಾಗಿತ್ತು ಎನ್ನಲಾಗಿದೆ.

ಎಎಸ್ಪಿ ಕಾರ್ಯಪ್ಪ, ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ ಕಲಗುಚ್ಚಿ, ಶಿಕಾರಿಪುರ ಡಿವೈಎಸ್ಪಿ ಕೇಶವ್, ವೃತ್ತ ನಿರೀಕ್ಷಕರಾದ ಹೊಸನಗರ ಗುರಣ್ಣ ಹೆಬ್ಬಾಳ, ಶಿಕಾರಿಪುರದ ಪಾಟೀಲ್, ಸೊರಬದ ರಾಜಶೇಖರ್, ಪಿಎಸ್‌ಐಗಳಾದ ಪ್ರವೀಣ್, ಶಿವಾನಂದ ಕೋಳಿ, ರಾಜು ರೆಡ್ಡಿ, ಹೊಳೆಬಸಪ್ಪ, ಯುವರಾಜ್ ಕಂಬಳಿ, ಯಲ್ಲಪ್ಪ, ಸಿದ್ದರಾಮಪ್ಪ ಸೇರಿ 100ಕ್ಕೂ ಹೆಚ್ಚು ಪೊಲೀಸರು ಪಾಲ್ಗೊಂಡಿದ್ದರು.